ಫೋನ್ ಕದ್ದಾಲಿಕೆ ಆರೋಪ ಪ್ರಕರಣ: ಬಿ ರಿಪೋರ್ಟ್ ತಿರಸ್ಕರಿಸಿದ ಸಿಬಿಐ ವಿಶೇಷ ಕೋರ್ಟ್
ಬೆಂಗಳೂರು, ಅ.18: ಎಚ್.ಡಿ.ಕುಮಾರಸ್ವಾಮಿ ಸರಕಾರದಲ್ಲಿ ನಡೆದಿತ್ತು ಎನ್ನಲಾದ ರಾಜಕಾರಣಿಗಳು ಮತ್ತು ಅಧಿಕಾರಿಗಳ ಫೋನ್ ಕರೆಗಳ ಕದ್ದಾಲಿಕೆ ಆರೋಪ ಪ್ರಕರಣದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಅವರ ಪಾತ್ರವಿಲ್ಲ ಎಂದು ಸಿಬಿಐ ಸಲ್ಲಿಸಲು ಮುಂದಾಗಿದ್ದ ಬಿ ರಿಪೋರ್ಟ್ ಅನ್ನು ಸಿಬಿಐ ವಿಶೇಷ ಕೋರ್ಟ್ ತಿರಸ್ಕರಿಸಿದ್ದು, ತನಿಖೆ ಮುಂದುವರಿಸುವಂತೆ ಸೂಚನೆ ನೀಡಿದೆ.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಡಳಿತ ನಡೆಸುತ್ತಿದ್ದ ವೇಳೆಯಲ್ಲಿ ಅಲೋಕ್ ಕುಮಾರ್ ಅವರ ನಿವಾಸದಲ್ಲಿಯೇ ದೂರವಾಣಿ ಕದ್ದಾಲಿಕೆಗೆ ವ್ಯವಸ್ಥೆ ಮಾಡಲಾಗಿತ್ತು ಎಂಬ ಆರೋಪವಿದೆ.
ರಾಜಕಾರಣಿಗಳು, ಅಧಿಕಾರಿಗಳು ಸೇರಿ ಸುಮಾರು 600 ಪ್ರಮುಖ ವ್ಯಕ್ತಿಗಳ ಟೆಲಿಫೋನ್ ಕದ್ದಾಲಿಕೆ ಮಾಡಲಾಗಿತ್ತು, ಈ ಬಗ್ಗೆ ಖಾಸಗಿ ಮಾಧ್ಯಮವೊಂದು ವರದಿಯನ್ನು ಮಾಡಿತ್ತು. ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದೆ.
ಫೋನ್ ಕದ್ದಾಲಿಕೆ ನಡೆದಿದ್ದ ಸಮಯದಲ್ಲಿ ಅಲೋಕ್‍ಕುಮಾರ್ ಕೇಂದ್ರ ಅಪರಾಧ ವಿಭಾಗದ ಪೊಲೀಸ್ ಕಮಿಷನರ್ ಮತ್ತು ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಕಾರ್ಯ ನಿರ್ವಹಿಸಿದ್ದರು