ನಕಲಿ ವಿಮಾ ಬಾಂಡ್ ಹಂಚಿಕೆ ಪ್ರಕರಣ; ಜೆಡಿಎಸ್ ಶಾಸಕ ಗೌರಿಶಂಕರ್ ಗೆ ಕೋರ್ಟ್‍ನಿಂದ ಸಮನ್ಸ್ ಜಾರಿ

Update: 2021-10-18 14:34 GMT

ಬೆಂಗಳೂರು, ಅ.18: ವಿದ್ಯಾರ್ಥಿಗಳಿಗೆ ನಕಲಿ ವಿಮಾ ಬಾಂಡ್ ಹಂಚಿಕೆ ಆರೋಪ ಪ್ರಕರಣದಲ್ಲಿ ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್‍ಗೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.

ಈ ಸಂಬಂಧ ತನಿಖೆ ನಡೆಸಿರುವ ಸಿಐಡಿ ಅಧಿಕಾರಿಗಳು 4 ಸಾವಿರ ಪುಟಗಳ ಚಾರ್ಜ್‍ಶೀಟ್‍ನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇದರ ಆಧಾರದ ಮೇಲೆ ಗೌರಿ ಶಂಕರ್ ಅವರಿಗೆ ಸಮನ್ಸ್ ನೀಡಲಾಗಿದೆ.

ವಿದ್ಯಾರ್ಥಿಗಳಿಗೆ ನಕಲಿ ವಿಮಾ ಬಾಂಡ್ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿ ರಮೇಶ್ ಬೆಟ್ಟಯ್ಯ ಎಂಬುವವರು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು.

2018 ವಿಧಾನಸಭಾ ಚುನಾವಣೆ ವೇಳೆ ವಿದ್ಯಾರ್ಥಿಗಳಿಗೆ ನಕಲಿ ವಿಮಾ ಬಾಂಡ್ ಹಂಚಿಕೆ ಮಾಡಿದ ಆರೋಪವನ್ನು ಗೌರಿಶಂಕರ್ ಎದುರಿಸುತ್ತಿದ್ದಾರೆ. ಗೌರಿಶಂಕರ್ ಮಾತ್ರವಲ್ಲದೆ ಕಿಶೋರ್ ವರದಾಚಾರ್, ಗೌರಮ್ಮ, ಅನಂತು, ಚೆನ್ನಿಗಪ್ಪ ವಿರುದ್ಧವೂ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.
16,386 ವಿದ್ಯಾರ್ಥಿಗಳಿಗೆ ನಕಲಿ ಆರೋಗ್ಯ ವಿಮೆ ಬಾಂಡ್‍ಗಳನ್ನು ಗೌರಿಶಂಕರ್ ಹಂಚಿಕೆ ಮಾಡಿದ್ದರು. ಗೌರಿಶಂಕರ್ ಅವರ ತಂದೆ ದಿ. ಚೆನ್ನಿಗಪ್ಪ ಅಧ್ಯಕ್ಷರಾಗಿದ್ದ ಮಾರುತಿ ಸೇವಾ ಟ್ರಸ್ಟ್‍ನಿಂದ ಈ ಗ್ರೂಪ್ ಇನ್ಶೂರೆನ್ಸ್ ಹಂಚಿಕೆ ಮಾಡಲಾಗಿತ್ತು.

ನ್ಯೂ ಇಂಡಿಯನ್ ಅಶ್ಯೂರೆನ್ಸ್ ಕಂಪೆನಿ ಮೂಲಕ ಮೆಡಿ ಅಸಿಸ್ಟ್ ಬಾಂಡ್ ಹಂಚಿಕೆ ಆರೋಪ ಕೇಳಿ ಬಂದಿತ್ತು. ವಿಮಾ ಕಾರ್ಡ್ ಜತೆಗೆ ಜೆಡಿಎಸ್ ನಾಯಕರ ಫೋಟೋ ಇರುವ ದಾಖಲೆಗಳನ್ನು ಹಂಚಿಕೆ ಮಾಡಲಾಗಿತ್ತು.

ಸಿಐಡಿ ಅಧಿಕಾರಿಗಳ ತನಿಖೆಯಲ್ಲಿ ಗೌರಿಶಂಕರ್ ಅಕ್ರಮ ಎಸಗಿರುವುದು ಬೆಳಕಿಗೆ ಬಂದಿತ್ತು. ಚೆನ್ನಿಗಪ್ಪ, ಗೌರಿಶಂಕರ್ ಸೇರಿ ಐವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಸಿಐಡಿ.

ಪ್ರಕರಣ ರದ್ದು ಮಾಡುವಂತೆ ಶಾಸಕ ಗೌರಿಶಂಕರ್ ಸುಪ್ರೀಂ ಕೋರ್ಟ್‍ಗೆ ಹೋಗಿದ್ದರು. ಆದರೆ ಪ್ರಕರಣದ ರದ್ದು ಮಾಡಲು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿತ್ತು.

ಸುಪ್ರೀಂ ಕೋರ್ಟ್ ಆದೇಶದಂತೆ ತನಿಖೆ ನಡೆಸಿ ಸಿಐಡಿ ಅಧಿಕಾರಿಗಳು ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ. ಅ.22 ರಂದು ಖುದ್ದು ಕೋರ್ಟ್‍ಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News