ಮತಾಂತರದ ಆರೋಪ: ಹುಬ್ಬಳ್ಳಿಯ ಚರ್ಚ್ ಗೆ ನುಗ್ಗಿ ಭಜನೆ ಮಾಡಿದ ಸಂಘಪರಿವಾರದ ಕಾರ್ಯಕರ್ತರು

Update: 2021-10-18 17:31 GMT
photo: twitter.com 

ಹುಬ್ಬಳ್ಳಿ,ಅ.18: ಬಲವಂತದಿಂದ ಮತಾಂತರಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ರವಿವಾರ ಬೆಳಿಗ್ಗೆ ಇಲ್ಲಿಯ ಭೈರಿದೇವರ ಕೊಪ್ಪದಲ್ಲಿರುವ ಚರ್ಚೊಂದಕ್ಕೆ ನುಗ್ಗಿದ ಸಂಘಪರಿವಾರದ  ಕಾರ್ಯಕರ್ತರು ಭಜನೆಗಳನ್ನು ಹಾಡುವ ಮೂಲಕ ಪ್ರತಿಭಟಿಸಿದ್ದಾರೆ.

ಚರ್ಚ್ ನ ಒಳಗಡೆ ನೆಲದಲ್ಲಿ ಕುಳಿತಿದ್ದ ಹಲವಾರು ಪುರುಷರು ಮತ್ತು ಮಹಿಳೆಯರು ತಲೆಯ ಮೇಲೆ ಕೈಗಳನ್ನು ನಮಸ್ಕಾರದ ಭಂಗಿಯಲ್ಲಿ ಎತ್ತಿ ಹಿಡಿದು ಭಜನೆ ಮಾಡುತ್ತಿರುವುದು ವೀಡಿಯೊ ಒಂದರಲ್ಲಿ ತೋರಿಸಿದೆ.

ಬಳಿಕ ಚರ್ಚ್ ನ ಪ್ಯಾಸ್ಟರ್ ಸೋಮು ಅವರಾಧಿ ಎಂಬಾತನ ಬಂಧನಕ್ಕೆ ಆಗ್ರಹಿಸಿ ಸ್ಥಳೀಯ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ನೇತೃತ್ವದಲ್ಲಿ ಕಾರ್ಯಕರ್ತರು ಹೆದ್ದಾರಿ ತಡೆಯನ್ನೂ ನಡೆಸಿದ್ದರು.

ಘಟನೆಗೆ ಸಂಬಂಧಿಸಿದಂತೆ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಚರ್ಚ್ ನ ಸದಸ್ಯರು ಮತ್ತು ಸಂಘಪರಿವಾರದ ಕಾರ್ಯಕರ್ತರು ಪರಸ್ಪರ ಆರೋಪಿಸಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ರಕ್ಷಣೆ ಕಾಯ್ದೆ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಕೃತ್ಯಗಳ ವಿರುದ್ಧ ಕಾಯ್ದೆಯಡಿ ಆರೋಪಿ ಮತ್ತು ಇತರರ ವಿರುದ್ಧ ದೂರನ್ನು ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಇತರ ಮೂವರನ್ನು ವಿಚಾರಣೆಯ ಬಳಿಕ ಬಿಡುಗಡೆಗೊಳಿಸಿದ್ದಾರೆ.

ಈ ಬಗ್ಗೆ ತಾವು ಸೋಮವಾರ ದೂರು ಸಲ್ಲಿಸಿರುವುದಾಗಿ ಚರ್ಚ್ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯನ್ನು ದೃಢಪಡಿಸಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬುರಾಮ ಅವರು,‘ತನಿಖೆಯು ಪ್ರಗತಿಯಲ್ಲಿದೆ. ಅವರಾಧಿಯವರನ್ನು ಮಾತ್ರ ಬಂಧಿಸಲಾಗಿದೆ. ಈವರೆಗೆ ಚರ್ಚ್ ನಿಂದ ಯಾವುದೇ ದೂರನ್ನು ನಾವು ಸ್ವೀಕರಿಸಿಲ್ಲ ’ಎಂದು ತಿಳಿಸಿದರು.

''ವಿಶ್ವನಾಥ ಎಂಬ ವ್ಯಕ್ತಿಯನ್ನು ಮತಾಂತರಕ್ಕಾಗಿ ಚರ್ಚ್ ಗೆ ಕರೆತರಲಾಗಿತ್ತು. ಅವರು ಚರ್ಚ್ ನಿಂದ ಪೊಲೀಸ್ ಠಾಣೆಗೆ ತೆರಳಿ ಅವರಾಧಿ ಮತ್ತು ಇತರರ ವಿರುದ್ದ ದೂರು ದಾಖಲಿಸಿದ್ದರು. ಬಳಿಕ ನಮ್ಮ ಕಾರ್ಯಕರ್ತರು ಚರ್ಚ್ ನೊಳಗೆ ಸಮಾವೇಶಗೊಂಡು ಹಿಂದೂ ಭಜನೆಗಳನ್ನು ಹಾಡುವ ಮೂಲಕ ಪ್ರತಿಭಟಿಸಿದ್ದರು'' ಎಂದು ಬಜರಂಗದಳದ ರಾಜ್ಯ ಸಂಚಾಲಕ ರಾಘು ಸಕಲೇಶಪುರ ಹೇಳಿದ್ದಾರೆ.

''ಬಲವಂತದ ಮತಾಂತರದ ಆರೋಪವನ್ನು ಮಾಡಿರುವ ವಿಶ್ವನಾಥ್, ಚರ್ಚ್ ನ ಪ್ರಾರ್ಥನೆಯ ಬದಲು ತಾನು ಹಿಂದು ಪ್ರಾರ್ಥನೆಯನ್ನು ಹಾಡಿದಾಗ ಪ್ಯಾಸ್ಟರ್ ಅವರಾಧಿ ತನ್ನನ್ನು ನಿಂದಿಸಿದ್ದರು'' ಎಂದೂ ಆರೋಪಿಸಿದ್ದಾರೆ.

ಮತಾಂತರದ ಯಾವುದೇ ಪ್ರಯತ್ನಗಳು ನಡೆದಿಲ್ಲ ಎಂದು ಚರ್ಚ್ ಅಧಿಕಾರಿಗಳು ತಿಳಿಸಿದ್ದಾರೆ.

ಸಂಘಪರಿವಾರದ  ಕಾರ್ಯಕರ್ತರು ಚರ್ಚ್ ನಲ್ಲಿ ಭಜನೆಗಳನ್ನು ಹಾಡುತ್ತಿದ್ದಾಗ ಅವರಾಧಿ ಅಲ್ಲಿಗೆ ಬಂದಿದ್ದು, ಅವರಿಗೆ ಮುತ್ತಿಗೆ ಹಾಕಲಾಗಿತ್ತು. ಸ್ಥಳದಲ್ಲಿ ಕೆಲವು ಮಹಿಳೆಯರೂ ಇದ್ದು, ವಾಗ್ವಾದ ಮತ್ತು ತಳ್ಳಾಟಗಳ ವೇಳೆ ಗಾಯಗೊಂಡಿದ್ದಾರೆ ಎಂದು ಚರ್ಚ್ ಹಿರಿಯ ಸದಸ್ಯ ಸೆಡ್ರಿಕ್ ಜಾಕೋಬ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News