ಬೆಳಗಾವಿ ಪ್ರಕರಣದ ತನಿಖೆ ಹಾದಿ ತಪ್ಪದಂತೆ ಎಚ್ಚರಿಕೆ ವಹಿಸಿ: ವಿಮಲಾ ಕೆ.ಎಸ್

Update: 2021-10-18 16:26 GMT

ಬೆಂಗಳೂರು, ಅ.18: ಬೆಳಗಾವಿಯ 24 ವರ್ಷದ ಅರ್ಬಾಜ್ ಮುಲ್ಲಾ ಅವರನ್ನು ಅಪಹರಿಸಿ ಕೊಲೆ ಮಾಡಿರುವುದು ದೇಶದಲ್ಲಿ ನಡೆಯುತ್ತಿರುವ ಕೋಮು ಗಲಭೆಗೆ ನಿದರ್ಶನವಾಗಿದೆ. ಇಂತಹ ಹೀನಕೃತ್ಯ ಎಸಗಿದ ಹತ್ತೂ ಅಪರಾಧಿಗಳನ್ನು ಬಂಧಿಸಿದ ಬೆಳಗಾವಿಯ ಜಿಲ್ಲಾ ಪೊಲೀಸ್ ತಂಡದ ಕಾರ್ಯವೈಖರಿ ಶ್ಲಾಘನೀಯ. ಆದರೆ ಅಪರಾಧಿಗಳು ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳದಿರಲು, ಯಾವುದೇ ಒತ್ತಡಕ್ಕೂ ಸರಕಾರ ಮಣಿಯಬಾರದು ಎಂದು ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ವಿಮಲಾ ಕೆ.ಎಸ್. ತಿಳಿಸಿದ್ದಾರೆ.

ಸೋಮವಾರ ಪ್ರಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಅರ್ಬಾಜ್ ಮುಲ್ಲಾನ ಕೊಲೆಯು  ಹಿಂದೂ ಉಗ್ರ ಸಂಘಟನೆಯಾದ `ಶ್ರೀರಾಮಸೇನೆ' ಮತ್ತಿತರ ಮೂಲಭೂತವಾದಿಗಳ ಹಾಗೂ ಧರ್ಮಾಂಧ ಗುಂಪುಗಳ ಉಗ್ರ ಸ್ವರೂಪವನ್ನು ತೋರಿಸುತ್ತದೆ. ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ಪ್ರೀತಿಸುವ ಹಾಗೂ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಸರ್ವೋಚ್ಚ ನ್ಯಾಯಾಲಯವೂ ಕೋಮುವಾದಿ ಕೊಲೆ ಪ್ರಕರಣಗಳನ್ನು ಖಂಡಿಸಿದೆ. ಆದರೂ ಸಹ ಇಂತಹ ಘಟನೆಗಳು ದೇಶದಾದ್ಯಂತ ಮರುಕಳಿಸುತ್ತಲೇ ಇರುವುದು ದುರದೃಷ್ಟಕರ ಎಂದರು.

ಜೊತೆಗೆ ರಾಜ್ಯದಲ್ಲಿ ಅನಿಯಂತ್ರಿತವಾಗಿ ನಡೆಯುತ್ತಿರುವ ಅನೈತಿಕ ಪೋಲೀಸ್‍ಗಿರಿಗೆ ಸ್ವತಃ ಮುಖ್ಯಮಂತ್ರಿಗಳೇ ಸಮರ್ಥನೆ ನೀಡುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಇವು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಎಸಗುತ್ತಿರುವ ಅಪಚಾರವಾಗಿದೆ ಎಂದರು.   
ಬೆಳಗಾವಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಯುವಕನ ತಾಯಿಗೆ ಸೂಕ್ತ ಪರಿಹಾರವನ್ನು ಸರಕಾರ ಕೂಡಲೇ ಬಿಡುಗಡೆ ಮಾಡಬೇಕು. ಅಲ್ಲದೇ ಆತನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು. ರಾಜ್ಯದೆಲ್ಲೆಡೆ ಯುವಜನರ ಮತ್ತು ಎಲ್ಲ ಧರ್ಮೀಯರ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಸರಕಾರ ಬದ್ಧವಾಗಿರಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದರು. 

ಗೋಷ್ಠಿಯಲ್ಲಿ ಮಹಿಳಾ ಒಕ್ಕೂಟಗಳ ಪದಾಧಿಕಾರಿಗಳಾದ ಅಕೈ ಪದ್ಮಶಾಲಿ, ಮಮತಾ ಯಜಮಾನ್, ಆಶಾ ರಮೇಶ್, ಶಿಲ್ಪಾ ಪ್ರಸಾದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News