ಅಸಹಾಯಕತೆಯಿಂದ ಅಸಂಬದ್ಧ ಹೇಳಿಕೆ ನೀಡುತ್ತಿರುವ ಸಿದ್ದರಾಮಯ್ಯ: ಸಚಿವ ವಿ.ಸುನೀಲ್ ಕುಮಾರ್

Update: 2021-10-19 12:38 GMT

ಬೆಂಗಳೂರು: "ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದಲ್ಲಿ ಅಸಹಾಯಕರಾಗಿ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿರುವಂತೆ ಕಾಣುತ್ತಿದೆ" ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಟೀಕಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿನ ಬಿಜೆಪಿ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ಕನ್ನಡದ ಸಂಸ್ಕೃತಿಗೆ ಗೌರವ ತರುವ ರೀತಿಯಲ್ಲಿ ಸಿದ್ದರಾಮಯ್ಯರವರ ಹೇಳಿಕೆಗಳು ಮತ್ತು ಭಾಷಣಗಳು ಇಲ್ಲ. ಆರೆಸ್ಸೆಸ್ ಕುರಿತಂತೆ ಅನಪೇಕ್ಷಿತ ಟೀಕೆ ಮಾಡುತ್ತಿರುವ ಅವರು ಗೌರವಾನ್ವಿತ ಪ್ರಧಾನಿ ಮೋದಿಯವರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಿದ್ದಾರೆ. ಇದು ಅಸಹಾಯಕತೆಯ ಪರಿಣಾಮವೇ ಅಥವಾ ತಮ್ಮ ನಾಯಕರನ್ನು ಮೆಚ್ಚಿಸಲು ಈ ರೀತಿ ಪ್ರಯತ್ನಿಸುತ್ತಿದ್ದಾರೆಯೇ' ಎಂದು ಪ್ರಶ್ನಿಸಿದರು. 

'ಆರೆಸ್ಸೆಸ್ ಬಗ್ಗೆ ಸಿದ್ದರಾಮಯ್ಯ ಅವರಿಗೆ ಸ್ಪಷ್ಟ ತಿಳುವಳಿಕೆ ಇಲ್ಲ. ನಾವೆಲ್ಲರೂ ಆರೆಸ್ಸೆಸ್ ನೀಡಿದ ಸಂಸ್ಕಾರದಿಂದಲೇ ಈ ಸ್ಥಾನಕ್ಕೆ ಬಂದಿದ್ದೇವೆ. ಆರೆಸ್ಸೆಸ್ ಎಂದರೆ ಸೇವೆ ಸಂಸ್ಕಾರ, ತ್ಯಾಗ, ದೇಶಭಕ್ತಿ ಹಾಗೂ ವ್ಯಕ್ತಿತ್ವ ನಿರ್ಮಾಣದ ಸಂಸ್ಥೆಯಾಗಿದೆ. ಕೋಟ್ಯಾಂತರ ಜನರ ಉತ್ತಮ ವ್ಯಕ್ತಿತ್ವಕ್ಕೆ ಅದು ಕಾರಣವಾಗಿದೆ. ಈ ಕುರಿತಂತೆ ಅವರಿಗೆ ಜ್ಞಾನ ಮತ್ತು ಮಾಹಿತಿಯ ಕೊರತೆ ಇದೆ ಅಥವಾ ಸಿದ್ದರಾಮಯ್ಯರವರಿಗೆ ಸಲಹೆ ಕೊಡುವವರಿಗೆ ಅನುಭವದ ಕೊರತೆ ಇರುವ ಸಾಧ್ಯತೆ ಇದೆ' ಎಂದು ಸುನೀಲ್ ಕುಮಾರ್ ಟೀಕಿಸಿದರು. 

'ಜಗತ್ತಿನಾದ್ಯಂತ ವಿವಿಧ ದೇಶಗಳ ಪ್ರಮುಖ ಗಣ್ಯರು ಪ್ರಧಾನಿ ಮೋದಿ ಅವರ ವ್ಯಕ್ತಿತ್ವವನ್ನು ಶ್ಲಾಘಿಸುತ್ತಾರೆ. ಆದುದರಿಂದ ಸಿದ್ದರಾಮಯ್ಯರವರು ಎಚ್ಚರಿಕೆಯಿಂದ ತಮ್ಮ ಹಿರಿತನಕ್ಕೆ ಅನುಗುಣವಾಗಿ ಮಾತನಾಡುವುದು ಒಳಿತು. ವಿಪಕ್ಷದವರು ಸಕಾರಾತ್ಮಕವಾಗಿ ಟೀಕೆ ಮಾಡಬೇಕು. ಆದುದರಿಂದ, ನೀವು ವಿಪಕ್ಷ ನಾಯಕರಾಗಿ ಮಾದರಿ ಆಗುವಂತಹ ಮತ್ತು ನೋಡಿ ಕಲಿಯುವಂತಹ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ' ಎಂದು ಸುನೀಲ್ ಕುಮಾರ್ ಸಲಹೆ ನೀಡಿದರು.

'ಕೇಸರಿ ಬಣ್ಣವನ್ನು ಒಂದು ಪಕ್ಷಕ್ಕೆ ಸೀಮಿತಗೊಳಿಸಬಾರದು. ಕೇಸರಿ ಎಂಬುದು ಭಾರತದ ತ್ಯಾಗದ ಸಂಕೇತ. ಅದು ನಮ್ಮ ಪರಂಪರೆಯ ಮತ್ತು ರಾಷ್ಟ್ರೀಯತೆಯನ್ನು ಬಿಂಬಿಸುತ್ತದೆ. ಕೇಸರಿ ಎಂದೊಡನೆ ಸಿದ್ದರಾಮಯ್ಯನರವರು ವಿಚಲಿತರಾಗುವುದು ಏಕೆ. ಹಣೆಯ ಮೇಲೆ ಕುಂಕುಮ ಇಡುವುದು ಅವರಿಗೆ ಅಸಹನೀಯ ಅನಿಸುವುದು ಏಕೆ? ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ ಮಾಡಿರುವುದು ಹೇಗೆ ಸಮರ್ಥನೀಯವೋ ತ್ಯಾಗದ ಸಂಕೇತವಾದ ಕೇಸರಿ ಶಾಲು ಧರಿಸಿರುವುದು ಸಮರ್ಥನಿಯವೇ? ಕಾನೂನಿನ ಚೌಕಟ್ಟಿನಲ್ಲಿ ಪರಂಪರೆಯನ್ನು ನಾವು ಮರೆಯಬಾರದು ಎಂದು ಸುನೀಲ್ ಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News