'ಮಹರ್ಷಿ ವಾಲ್ಮೀಕಿ ಪ್ರಶಸ್ತಿ'ಗೆ ಆರು ಮಂದಿ ಸಾಧಕರ ಹೆಸರು ಪ್ರಕಟ
ಬೆಂಗಳೂರು, ಅ. 19: `ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಅವರ ಹೆಸರಿನಲ್ಲಿ ನೀಡುವ ಪ್ರತಿಷ್ಠಿತ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆರು ಮಂದಿಗೆ ಸಾಧಕರನ್ನು ಆಯ್ಕೆ ಮಾಡಿದ್ದು, ನಾಳೆ(ಅ.20) ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆಯಲಿರುವ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಾಧಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ' ಎಂದು ಪರಿಶಿಷ್ಟ ವರ್ಗಗಳ(ಎಸ್ಟಿ) ಕಲ್ಯಾಣ ಇಲಾಖೆ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಕೆ.ಸಿನಾಗರಾಜು-ಬೆಂಗಳೂರು ವಿಭಾಗ, ಲಕ್ಷ್ಮಿಗಣಪತಿ ಸಿದ್ದಿ-ಬೆಳಗಾವಿ ವಿಭಾಗ, ಭಟ್ರಹಳ್ಳಿ ಗೂಳಪ್ಪ-ಕಲಬುರ್ಗಿ ವಿಭಾಗ, ಟಿ.ಅಶ್ವತ್ಥರಾಮಯ್ಯ, ಜಂಬಯ್ಯ ನಾಯಕ(ಸಮಾಜ ಸೇವೆ) ಹಾಗೂ ಪ್ರೊ.ಎಸ್.ಆರ್.ನಿರಂಜನ(ಶಿಕ್ಷಣ)-ಮೈಸೂರು ವಿಭಾಗದಲ್ಲಿ 2021ನೆ ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ' ಎಂದು ಪ್ರಕಟಿಸಿದರು.
`2020ನೆ ಸಾಲಿನ ವಾಲ್ಮೀಕಿ ಪ್ರಶಸ್ತಿಗೆ ಡಾ.ಕೆ.ಆರ್.ಪಾಟೀಲ್-ಬೆಳಗಾವಿ ವಿಭಾಗ, ಡಾ.ಬಿ.ಎಲ್.ವೇಣು-ಬೆಂಗಳೂರು ವಿಭಾಗ, ಗೌರಿ ಕೊರಗ-ಮೈಸೂರು ವಿಭಾಗ, ಮಾರಪ್ಪ ನಾಯಕ-ಕಲಬುರಗಿ ವಿಭಾಗ ಮತ್ತು ತಿಪ್ಪೇಸ್ವಾಮಿ ಎಚ್(ಸಿರಿಗೆರೆ ತಿಪ್ಪೇಶ್)-ಬೆಂಗಳೂರು ಕೇಂದ್ರ ಸ್ಥಾನ ಇವರನ್ನು ಆಯ್ಕೆ ಮಾಡಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ 2020ನೆ ಸಾಲಿನ ಪ್ರಶಸ್ತಿ ಪ್ರದಾನ ಸಾಧ್ಯವಾಗಿರಲಿಲ್ಲ ಎಂದು ಶ್ರೀರಾಮುಲು ತಿಳಿಸಿದರು.
`2020ನೆ ಸಾಲಿನ ಪ್ರಶಸ್ತಿಗೆ ಆಯ್ಕೆಯಾದ 5 ಸಾಧಕರು, ಪ್ರಸಕ್ತ ಸಾಲಿನ ಪ್ರಶಸ್ತಿಗೆ ಆಯ್ಕೆಯಾದ 6 ಮಂದಿ ಪುರಸ್ಕೃತರು ಸೇರಿ ಒಟ್ಟು 11 ಮಂದಿಗೆ ನಾಳೆ(ಅ.20) ನಡೆಯಲಿರುವ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಾಧಕರಿಗೆ ಪ್ರಶಸ್ತಿ ಪತ್ರ, 20ಗ್ರಾಂ ಚಿನ್ನದ ಪದಕ ಹಾಗೂ 5 ಲಕ್ಷ ರೂ.ನಗದು ಮೊತ್ತವನ್ನು ನೀಡಿ, ಗೌರವಿಸಲಾಗುವುದು' ಎಂದು ಅವರು ತಿಳಿಸಿದರು.
`ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಳೆ ಬೆಳಗ್ಗೆ 10.30ಕ್ಕೆ ಶಾಸಕರ ಭವನದ ಮುಂಭಾಗದ ವಾಲ್ಮೀಕಿ ತಪೋವನದಲ್ಲಿರುವ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಲಿದ್ದಾರೆ. ನಂತರ 11ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ವಾಲ್ಮೀಕಿ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಎಂದು ಶ್ರೀರಾಮುಲು ವಿವರ ನೀಡಿದರು.
ಸಮಾರಂಭದಲ್ಲಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮಿ ಸಾನಿಧ್ಯ ವಹಿಸಲಿದ್ದು, ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿಗಳ ಅಧ್ಯಕ್ಷರು, ಪರಿಶಿಷ್ಟ ವರ್ಗಗಳ ಮುಖಂಡರು ಹಾಗೂ ಸಾರ್ವಜನಿಕರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಪಿ.ಎಸ್.ಕಾಂತರಾಜು ಹಾಜರಿದ್ದರು.
`ಪರಿಶಿಷ್ಟ ಪಂಗಡ(ಎಸ್ಟಿ) ಮೀಸಲಾತಿ ಶೇ.7.5ರಷ್ಟು ಹೆಚ್ಚಳದ ವಿಚಾರಕ್ಕೆ ನಮ್ಮ ಸರಕಾರ ಬದ್ಧ. ಈಗಾಗಲೇ ನ್ಯಾ.ಸುಭಾಷ್ ಅಡಿಯವರು ವರದಿ ಸಲ್ಲಿಸಿದ ಕೂಡಲೇ ಪರಿಶೀಲಿಸಿ ಕ್ರಮ ವಹಿಸಲಿದೆ. ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಆರಂಭದಿಂದಲೂ ಹೋರಾಟ ಮಾಡಿಕೊಂಡೇ ಬಂದಿದ್ದೇನೆ. ಸರಕಾರ ಸ್ಪಷ್ಟ ತೀರ್ಮಾನ ಕೈಗೊಳ್ಳಲಿದೆ'
-ಬಿ.ಶ್ರೀರಾಮುಲು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ
ಸಾರಿಗೆ ವೇತನ ಸಮಸ್ಯೆಯಾಗಿಲ್ಲ
`ಕೆಎಸ್ಸಾರ್ಟಿಸಿ ಸೇರಿದಂತೆ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರಿಗೆ ವೇತನ ನೀಡುವ ವಿಚಾರದಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಈಗಾಗಲೇ ರಾಜ್ಯ ಸರಕಾರ 171 ಕೋಟಿ ರೂ.ಬಿಡುಗಡೆ ಮಾಡಿದೆ. ನಾನು ಸಾರಿಗೆ ಇಲಾಖೆ ಜವಾಬ್ದಾರಿ ವಹಿಸಿಕೊಂಡ ಬಳಿಕ ಸಂಸ್ಥೆಯ ಚಾಲಕ, ನಿರ್ವಾಹಕರ ವರ್ಗಾವಣೆ, ಅಮಾನತ್ತು ರದ್ದುಪಡಿಸಿದ್ದು, ಯಾವುದೇ ಸಿಬ್ಬಂದಿಗೆ ಕಿರುಕುಳ ನೀಡುವುದನ್ನು ಸಹಿಸುವುದಿಲ್ಲ. ಚಾಲಕನಿಗೆ ಕಿರುಕುಳ ನೀಡಿದ ಡಿಪೋ ಮ್ಯಾನೇಜರ್‍ಗೆ ನೋಟಿಸ್ ನೀಡಿದ್ದು, ಸ್ಪಷ್ಟಣೆ ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದು'
-ಬಿ.ಶ್ರೀರಾಮುಲು ಸಾರಿಗೆ ಸಚಿವ