×
Ad

ಮೈಸೂರು: ದಲಿತ ಯುವತಿ ಅತ್ಯಾಚಾರ, ಆತ್ಮಹತ್ಯೆ; ಪ್ರಿಯಕರ, ಎಎಸ್ಸೈ ಸಹಿತ 8 ಮಂದಿ ವಿರುದ್ಧ ಎಫ್‌ಐಆರ್ ದಾಖಲು

Update: 2021-10-19 21:47 IST

ಮೈಸೂರು, ಅ.19: ದಲಿತ ಯುವತಿ ಮೇಲೆ ಪ್ರೀತಿಸಿ ಅತ್ಯಾಚಾರವೆಸಗಿದ್ದ ಯುವಕನ ಮೇಲೆ ಪೊಲೀಸರು ಕ್ರಮ ಜರುಗಿಸದಿರುವುದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾದ ಯುವತಿ ಡೆತ್ ನೋಟ್ ಬರೆದಿಟ್ಟಿದ್ದು, ಇದರ ಆಧಾರದಲ್ಲಿ ಪ್ರಿಯಕರ, ಎಎಸ್ಸೈ ಸೇರಿದಂತೆ 8 ಮಂದಿ ಮೇಲೆ ಎಫ್‌ಐಆರ್ ದಾಖಲಾಗಿದೆ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಹೋಬಳಿ ಹುರಾ ಗ್ರಾಪಂ ವ್ಯಾಪ್ತಿಯ ಚನ್ನಪಟ್ಟಣದ ದಲಿತ ಯುವತಿ ಶೋಭಾ ಇದೇ ಗ್ರಾಮದ ಯುವಕ ಲೋಕೇಶ್ ಎಂಬಾತನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಈತ ಈಕೆಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ನಂತರ ಮದುವೆಗೆ ನಿರಾಕರಿಸಿದ್ದಾನೆ. ಇದರಿಂದ ನೊಂದ ಶೋಭಾ ಕಳೆದ 16 ದಿನಗಳ ಹಿಂದೆ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಬಂದು ದೂರನ್ನು ನೀಡಿದ್ದಾಳೆ. ಆದರೆ ಎಎಸ್ಸೈ ಶಿವರಾಜು ಪ್ರಕರಣ ದಾಖಲಿಸಿಕೊಳ್ಳದೆ ಕರ್ತವ್ಯಲೋಪ ಎಸಗಿ ಹುಡುಗಿಗೆ ಹೆದರಿಸಿ ಕಳುಹಿಸಿದ್ದರು ಎನ್ನಲಾಗಿದೆ.

ಇದರಿಂದ ಬೇಸತ್ತ ಶೋಭಾ ಆತ್ಮಹತ್ಯೆ ಮಾಡಿಕೊಂಡಿದ್ದಳು ಎನ್ನಲಾಗಿದೆ. ಇವಳ ಅಂತ್ಯ ಸಂಸ್ಕಾರ ನೆರವೇರಿಸಿ ಎಲ್ಲ ಕಾರ್ಯಗಳು ಮುಗಿದ ನಂತರ ಮನೆಯವರಿಗೆ ಯುವತಿ ಬರೆದಿಟ್ಟ ಡೆತ್ ನೋಟ್ ಸಿಕ್ಕಿದೆ. ಇದರಲ್ಲಿ ನನ್ನನ್ನು ಪ್ರೀತಿಸಿ ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡಿದ ಲೋಕೇಶ್, ಈತನ ಸ್ನೇಹಿತ ಸುರೇಶ್‌ಗೆ ತಕ್ಕ ಶಿಕ್ಷೆಯಾಗಬೇಕು ಎಂದು ಇವರಿಗೆ ಸಹಕರಿಸಿದವರ ಹೆಸರು ಮತ್ತು ನನಗೆ ಪೊಲೀಸ್ ಠಾಣೆಯಲ್ಲಿ ನ್ಯಾಯ ದೊರಕಿಸದೆ ನನಗೆ ಧಮಕಿ ಹಾಕಿದ ಎಎಸ್ಸೈ ಶಿವರಾಜು ಮೇಲೆ ಕಾನೂನು ಕ್ರಮ ಜರುಗಿಸುವಂತೆ ಡೆತ್ ನೋಟ್‌ನಲ್ಲಿ ಬರೆದಿದ್ದಾಳೆ ಎನ್ನಲಾಗಿದೆ.

ಈ ವಿಚಾರ ಪೊಲೀಸ್ ವರಿಷ್ಠಾಧಿಕಾರಿಯವರ ಗಮನಕ್ಕೆ ಬಂದು ಎಸ್ಪಿ ಚೇತನ್ ಗ್ರಾಮಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿ ವರದಿ ನೀಡುವಂತೆ ಸರ್ಕಲ್ ಇನ್ಸ್‌ಪೆಕ್ಟರ್ ಲಕ್ಷ್ಮೀಕಾಂತ್ ತಳವಾರ್ ಅವರಿಗೆ ಸೂಚಿಸಿದ್ದರು. ಅದರಂತೆ ಸರ್ಕಲ್ ಇನ್‌ಸ್ಪೆಕ್ಟರ್ ವರದಿ ಆಧಾರದ ಮೇಲೆ ಪ್ರಿಯಕರ ಲೋಕೇಶ್, ಸುರೇಶ್ ಮತ್ತು ಎಎಸ್ಸೈ ಶಿವರಾಜು ಸೇರಿದಂತೆ 8 ಮಂದಿ ಮೇಲೆ ಎಫ್‌ಐಆರ್ ದಾಖಲಾಗಿದೆ.

ಪ್ರಕರಣ ಗಂಭೀರತೆ ಪಡೆಯುತ್ತಿದ್ದಂತೆ ಆರೋಪಿಗಳೆಲ್ಲರೂ ತಲೆಮರೆಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಸರ್ಕಲ್ ಇನ್‌ಸ್ಪೆಕ್ಟರ್ ಲಕ್ಷ್ಮೀಕಾಂತ್ ತಳವಾರ್ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಿದ್ದರು. ಶೋಧ ಕಾರ್ಯ ನಡೆಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News