ಬಿಎಡ್ ಪಠ್ಯದಲ್ಲಿ ಮುಸ್ಲಿಂ ದ್ವೇಷಿ ಸಾಲುಗಳು: ಪ್ರಾಧ್ಯಾಪಕ ಬಿ.ಆರ್. ರಾಮಚಂದ್ರಯ್ಯ ಬಂಧನ
ತುಮಕೂರು, ಅ.13: ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಿಗೆ ಅನ್ವಯಗೊಂಡಂತೆ ಬಿಎಡ್ ಮೂರನೇ ಸೆಮಿಸ್ಟರ್ ಪಠ್ಯಪುಸ್ತಕವೊಂದರಲ್ಲಿ ಮೌಲ್ಯಾಧಾರಿತ ಶಿಕ್ಷಣದ ಹೆಸರಿನಲ್ಲಿ ಇಸ್ಲಾಂ ಧರ್ಮ ಮತ್ತು ಮುಸ್ಲಿಮರ ಕುರಿತು ಪೂರ್ವಗ್ರಹಪೀಡಿತ, ಅವಹೇಳನಕಾರಿ ಅಂಶಗಳನ್ನು ಸೇರಿಸಿದ ಆರೋಪದಲ್ಲಿ ತುಮಕೂರಿನ ಕಾಲೇಜೊಂದರ ಸಹಾಯಕ ಪ್ರಾಧ್ಯಾಪಕ ಬಿ.ಆರ್. ರಾಮಚಂದ್ರಯ್ಯ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರನ್ನು ಹೊಸ ಬಡಾವಣೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೈಸೂರಿನ ವಿಸ್ಮಯ ಪ್ರಕಾಶನ ಪ್ರಕಟಿಸಿರುವ 'ಮೌಲ್ಯ ದರ್ಶನ ದಿ ಎಸ್ಸೆನ್ಸ್ ಆಫ್ ವ್ಯಾಲ್ಯೂ ಎಜುಕೇಷನ್' ಎಂಬ ಆಂಗ್ಲ ಕೃತಿಯಲ್ಲಿ ಇಸ್ಲಾಮ್ ಮತ್ತು ಮುಸ್ಲಿಮರನ್ನು ನಿಂದಿಸಲಾಗಿದೆ ಎಂದು ಆರೋಪ ಕೇಳಿ ಬಂದಿತ್ತು. ಈ ಕೃತಿಯನ್ನು ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳು ಕೂಡ ಬಿಎಡ್ ಮೂರನೇ ಸೆಮಿಸ್ಟರ್ ಗೆ ಪಠ್ಯಪುಸ್ತಕವಾಗಿ ಆಯ್ಕೆ ಮಾಡಿಕೊಂಡಿತ್ತು.
ಪ್ರವಾದಿಯವರ ಬಗ್ಗೆ ಅವಹೇಳನಕಾರಿಯಾಗಿ ಪಠ್ಯಪುಸ್ತಕದಲ್ಲಿ ಚಿತ್ರಿಸಿರುವುದನ್ನು ಖಂಡಿಸಿ, ಕ್ಯಾಂಪಸ್ ಪ್ರಂಟ್ ಇಂಡಿಯಾ ಸಂಘಟನೆಯ ಕಾರ್ಯಕರ್ತರು ತುಮಕೂರು ವಿವಿಯ ಮುಂದೆ ಪುಸ್ತಕದ ಪ್ರತಿಸುಟ್ಟು ಪ್ರತಿಭಟಿಸಿದ್ದಲ್ಲದೆ ಹೊಸ ಬಡಾವಣೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು.
ಸದರಿ ದೂರಿನ ಅನ್ವಯ ಪ್ರೊ. ರಾಮಚಂದ್ರಯ್ಯ ಅವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.