ಬ್ರಿಟನ್ ನಲ್ಲೂ ಕೊರೋನ ಸೋಂಕು ಏರಿಕೆ

Update: 2021-10-19 17:41 GMT
ಸಾಂದರ್ಭಿಕ ಚಿತ್ರ

ಲಂಡನ್, ಅ.19: ಬ್ರಿಟನ್ ನಲ್ಲಿ  ಕಳೆದ 2 ವಾರಗಳಿಂದ ಕೊರೋನ ಸೋಂಕು ಪ್ರಕರಣ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು ಸೋಮವಾರ ಒಂದೇ ದಿನ ಸುಮಾರು 50,000 ಹೊಸ ಸೋಂಕು ಪ್ರಕರಣ ದಾಖಲಾಗಿದ್ದು, ಇದು ಕಳೆದ ಜುಲೈಯಲ್ಲಿ ಡೆಲ್ಟಾ ರೂಪಾಂತರಿತ ಸೋಂಕು ಉಲ್ಬಣಿಸಿದ ಬಳಿಕ ಒಂದೇ ದಿನ ದಾಖಲಾಗಿರುವ ಅತ್ಯಧಿಕ ಸೋಂಕು ಪ್ರಕರಣವಾಗಿದೆ.

ಸೋಂಕಿನ ವಿರುದ್ಧದ ಲಸಿಕೆಯ ತುರ್ತು ಬಳಕೆಗೆ ಕ್ಷಿಪ್ರವಾಗಿ ಅನುಮೋದನೆ ನೀಡಿದ ಜನತೆಗೆ ಬೃಹತ್ ಲಸಿಕೀಕರಣ ಅಭಿಯಾನದಿಂದ ಸೋಂಕನ್ನು ನಿಯಂತ್ರಿಸಲು ಯಶಸ್ವಿಯಾಗಿರುವುದಾಗಿ ಬ್ರಿಟನ್ ಸರಕಾರ ಘೋಷಿಸಿದ ಬೆನ್ನಲ್ಲೇ ಏಕಾಏಕಿ ಸೋಂಕು ಪ್ರಕರಣ ಏರುಗತಿಗೆ ತಿರುಗಿದ್ದು ಸರಕಾರ ಹೇಳಿಕೆಯ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿದೆ. ಜೊತೆಗೆ ದೈನಂದಿನ ಮರಣದ ಪ್ರಮಾಣ 100ಕ್ಕಿಂತ ಹೆಚ್ಚಿದ್ದು ದೇಶದಲ್ಲಿ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 1,38,000ಕ್ಕೇರಿದ್ದು, ಯುರೋಪ್ನಲ್ಲಿ ರಶ್ಯಾದ ಬಳಿಕ ಇದು ಅತ್ಯಧಿಕವಾಗಿದೆ.

ಫ್ರಾನ್ಸ್ ನಲ್ಲಿ ನಂದಿನ ಸೋಂಕಿನ ಪ್ರಮಾಣ 4000 ಮತ್ತು ಸಾವಿನ ಪ್ರಮಾಣ 30 ಆಗಿದ್ದರೆ, ಜರ್ಮನಿಯಲ್ಲಿ ಇದು ಅನುಕ್ರಮವಾಗಿ 10,000 ಮತ್ತು 60 ಆಗಿದೆ. ಆಸ್ಪತ್ರೆಗೆ ದಾಖಲಾಗುವ ದೈನಂದಿನ ಪ್ರಮಾಣ ಫ್ರಾನ್ಸ್ ನಲ್ಲಿ ಸುಮಾರು 150 ಆಗಿದ್ದರೆ ಬ್ರಿಟನ್ನಲ್ಲಿ ಈಗ 900ಕ್ಕೂ ಅಧಿಕವಾಗಿದೆ. ಇತ್ತೀಚಿನ ದಿನಗಳಲ್ಲಿ ಫ್ರಾನ್ಸ್, ಜರ್ಮನಿ ಮತ್ತು ನೆದರಲ್ಯಾಂಡ್ಗಳಲ್ಲೂ ಸೋಂಕಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

ದುರದೃಷ್ಟವಶಾತ್, ಇತರ ಹೋಲಿಸಬಹುದಾದ ದೇಶಗಳಿಗಿಂತ ಬ್ರಿಟನ್ನಲ್ಲಿ ಈಗ ಕೊರೋನ ಸೋಂಕಿನ ಪ್ರಮಾಣ ಅಧಿಕವಾಗಿದೆ. ಪೊಸಿಟಿವ್ ವರದಿಯ ಪ್ರಮಾಣ ಏರಿಕೆಯಾಗಿರುವ ಜತೆಗೆ ಆಸ್ಪತ್ರೆಗೆ ದಾಖಲಾದವರು, ಮೃತಪಟ್ಟವರ ಪ್ರಮಾಣದಲ್ಲೂ ಏರಿಕೆಯಾಗಿದೆ ಎಂದು ಆಕ್ಸ್ಫರ್ಡ್ ವಿವಿಯ ಪ್ರೊಫೆಸರ್ ಜಿಮ್ ನೈಸ್ಮಿತ್ ಹೇಳಿದ್ದಾರೆ. ಬ್ರಿಟನ್ನಲ್ಲಿ ಸಾಮಾನ್ಯವಾಗಿ ಶರತ್ಕಾಲ (ಸೆಪ್ಟಂಬರ್ ಅಂತ್ಯದಿಂದ ಆರಂಭವಾಗುತ್ತದೆ) ಮತ್ತು ಚಳಿಗಾಲದಲ್ಲಿ ಶ್ವಾಸಕೋಶದ ಸೋಂಕಿನ ಸಮಸ್ಯೆ ಹೆಚ್ಚಿರುತ್ತದೆ. ಇದೀಗ ಕೊರೋನ ಸೋಂಕು ಕೂಡಾ ಉಲ್ಬಣಗೊಂಡಿರುವುದರಿಂದ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಬಹುದು.


ಈ ಬಗ್ಗೆ ರಾಷ್ಟ್ರೀಯ ಆರೋಗ್ಯ ಸೇವಾ ಇಲಾಖೆ ತಕ್ಷಣ ಸಿದ್ಧತೆ ಪೂರ್ಣಗೊಳಿಸಬೇಕು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ . ಮುಂಬರುವ ತಿಂಗಳುಗಳು ಅಪಾಯಕಾರಿ ಎಂಬುದು ನಮಗೆ ತಿಳಿದಿದೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಕಚೇರಿಯ ವಕ್ತಾರರು ಹೇಳಿದ್ದಾರೆ.

ಹಿರಿಯ ಶಾಲಾ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಿರುವುದು ಸೋಂಕಿನ ನಿರಂತರ ಅಲೆಗೆ ಪ್ರಧಾನ ಕಾರಣವಾಗಿದೆ. ಆರೋಗ್ಯವಂತ ಮಕ್ಕಳು ಸೋಂಕಿನ ವಿರುದ್ಧದ ಪ್ರತಿರೋಧ ಶಕ್ತಿ ಹೊಂದಿರಬಹುದು. ಆದರೆ ಆರೋಗ್ಯದ ಸಮಸ್ಯೆಯುಳ್ಳ ಮಕ್ಕಳು ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ. ಪೂರ್ಣ ಲಸಿಕೆ ಪಡೆಯದ ಶಿಕ್ಷಕರೂ ಸಮಸ್ಯೆಗೆ ಕಾರಣವಾಗಬಹುದು ಎಂದು ಬರ್ಕ್ಶೈರ್ನ ಯುನಿವರ್ಸಿಟಿ ಆಫ್ ರೀಡಿಂಗ್ನ ಅಸೋಸಿಯೇಟ್ ಪ್ರೊಫೆಸರ್ ಸೈಮನ್ ಕ್ಲಾರ್ಕ್ ಹೇಳಿದ್ದಾರೆ.

ಬ್ರಿಟನ್ನಲ್ಲಿ ಶಾಲಾ ಮಕ್ಕಳಿಗೆ ಲಸಿಕೀಕರಣ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿದ್ದು ಮಾಸ್ಕ್ ಕೂಡಾ ಕಡ್ಡಾಯವಲ್ಲ ಎಂದು ಸರಕಾರ ಘೋಷಿಸಿದೆ. ಬ್ರಿಟನ್ನಲ್ಲಿ ಜುಲೈಯಿಂದ ಕೊರೋನ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಆದರೆ ಕೆಲವು ಸಾರಿಗೆಗಳಲ್ಲಿ ಮಾಸ್ಕ್ ಧಾರಣೆ ಇನ್ನೂ ಕಡ್ಡಾಯವಾಗಿದೆ.

ಬ್ರಿಟನ್ನಲ್ಲಿ ಲಸಿಕೆ ಪಡೆದವರಲ್ಲಿ 41% ಮಾತ್ರ ಬೂಸ್ಟರ್ ಡೋಸ್ ಪಡೆದಿದ್ದಾರೆ. ಬ್ರಿಟನ್ನಲ್ಲಿ ಸುಮಾರು 15% ಜನತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದಿಲ್ಲ. ಈ ಪ್ರಮಾಣ ಯುರೋಪ್ ನಲ್ಲಿ 5% ಮಾತ್ರ ಎಂದು ಸಮೀಕ್ಷೆಯ ವರದಿಯೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News