'ಕಾಲುಬಾಯಿ ರೋಗ'ಕ್ಕೆ ಕೇಂದ್ರದಿಂದ 50 ಲಕ್ಷ ಡೋಸ್ ಪೂರೈಕೆ: ಸಚಿವ ಪ್ರಭು ಚೌಹಾಣ್

Update: 2021-10-19 18:14 GMT
ಸಚಿವ ಪ್ರಭು ಚೌಹಾಣ್ (File Photo)

ಬೆಂಗಳೂರು, ಅ. 19: `ಜಾನುವಾರುಗಳಲ್ಲಿ ಬರುವ ಕಾಲುಬಾಯಿ ರೋಗಕ್ಕೆ ಕೇಂದ್ರದಿಂದ 50 ಲಕ್ಷ ಡೋಸ್ ಮಂಜೂರಾಗಿದ್ದು, ಮೊದಲನೇ ಹಂತದಲ್ಲಿ ಕೇಂದ್ರದಿಂದ 25ಲಕ್ಷ ಲಸಿಕೆ ಪೂರೈಕೆಯಾಗುತ್ತಿದೆ. ಲಸಿಕೆಯನ್ನು ಆದ್ಯತೆಯ ಮೇಲೆ ಎಲ್ಲ ಜಿಲ್ಲೆಗಳಿಗೆ ಪೂರೈಕೆ ಮಾಡಲಾಗುವುದು' ಎಂದು ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.

`ಕರ್ನಾಟಕದ ದಕ್ಷಿಣ ಭಾಗದಲ್ಲಿ ಕಾಲುಬಾಯಿ ರೋಗ ಹೆಚ್ಚು ಕಂಡು ಬಂದಿದ್ದು ಈಗಾಗಲೇ ರಿಂಗ್ ವ್ಯಾಕ್ಸಿಂಗ್ ಮೂಲಕ ರೋಗವನ್ನು ಹತೋಟಿಗೆ ತರಲಾಗಿದೆ. ಮೊದಲನೆ ಹಂತದಲ್ಲಿ ಬಳ್ಳಾರಿ, ಯಾದಗಿರಿ, ಕಲಬುರಗಿ, ರಾಯಚೂರು, ಬೀದರ್ ಹಾಗೂ ಚಿತ್ರದುರ್ಗ ಜಿಲ್ಲೆಗಳಿಗೆ ಲಸಿಕೆ ಪೂರೈಕೆ ಆಗಲಿದೆ' ಎಂದು ಅವರು ಮಾಹಿತಿ ನೀಡಿದ್ದಾರೆ.

`ಕಾಲುಬಾಯಿ ರೋಗ ಹೆಚ್ಚು ಕಂಡುಬರುತ್ತಿರುವ ಜಿಲ್ಲೆಗಳಲ್ಲಿ ಸ್ಯಾಂಪಲ್ ಸಂಗ್ರಹಣೆ ಮಾಡಿ ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಪರೀಕ್ಷೆ ನೀಡಲಾಗಿತ್ತು, ಕರ್ನಾಟಕದಲ್ಲಿ ಓ ಮಾದರಿಯ ವೈರಸ್ ಕಂಡುಬಂದಿದೆ. ಜ್ವರ ಬಾದೆಯಿಂದ ಕರುಗಳು ಈ ರೋಗಕ್ಕೆ ಹೆಚ್ಚು ತುತ್ತಾಗುವ ಸಾಧ್ಯತೆ ಇರುವುದರಿಂದ ಪಶುಪಾಲಕರು ಕರುಗಳ ಬಗ್ಗೆ ಹೆಚ್ಚು ಕಾಳಜಿವಹಿಸಿ ಎಂದು ತಿಳಿಸಿದ್ದಾರೆ.

ಎರಡನೇ ಹಂತದಲ್ಲಿ 27 ಲಕ್ಷ ಪೂರೈಕೆ ಆಗುತ್ತಿದ್ದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ನೀಡಲಾಗುತ್ತದೆ. ಸದ್ಯ ರಾಜ್ಯದ 13 ಜಿಲ್ಲೆಗಳಲ್ಲಿ ಅಲ್ಲಲ್ಲಿ ಕಾಲುಬಾಯಿ ರೋಗ ಕಾಣಿಸಿಕೊಂಡಿದೆ ರೋಗೋದ್ರೇಕ ಕಂಡುಬಂದ 5ಕಿಮೀ ವ್ಯಾಪಿಯಲ್ಲಿ ಲಸಿಕೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ರೈತರು ಪಶು ಪಾಲಕರಲ್ಲಿ ಮನವಿ: ಪಶು ಕಲ್ಯಾಣ ಸಹಾಯವಾಣಿಯ ಉಪಯೋಗವನ್ನು ರಾಜ್ಯದ ಎಲ್ಲ ರೈತರು ಪಡೆದುಕೊಳ್ಳಬೇಕು. ಜಾನುವಾರುಗಳಲ್ಲಿ ರೋಗದ ಲಕ್ಷಣ ಕಂಡು ಬಂದರೆ ತಕ್ಷಣಕ್ಕೆ ಹತ್ತಿರದ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಅಥವಾ ಪಶುವೈದ್ಯಾಧಿಕಾರಿಗಳಿಗೆ ತಿಳಿಸಿ ಒಂದು ವೇಳೆ ಇಲಾಖೆಯಿಂದ ಅಥವಾ ಪಶು ವೈದ್ಯಾಧಿಕಾರಿಗಳಿಂದ ಸ್ಪಂದನ ದೊರೆಯದಿದ್ದರೆ ಪಶು ಕಲ್ಯಾಣ ಸಹಾಯವಾಣಿಗೆ ದೂರು ನೀಡಿ, ರೈತರು ನೀಡುವ ದೂರನ್ನು ಆಧರಿಸಿ ನಿರ್ಲಕ್ಷ ತೋರಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಪ್ರಭು ಚೌಹಾಣ್ ಎಚ್ಚರಿಕೆ ನೀಡಿದ್ದಾರೆ.

ನೊಂದ ರೈತರಿಂದ ಸಚಿವರಿಗೆ ಕರೆ: ಗದಗ್, ರಾಯಚೂರು ಹಾಗೂ ಮೈಸೂರು ಭಾಗದಿಂದ ಕೆಲ ರೈತರು ಹಾಗೂ ಪಶುಪಾಲಕರು ಕರೆ ಮಾಡಿ ಜಾನುವಾರುಗಳು ಅನುಭವಿಸುತ್ತಿರುವ ನೋವನ್ನು ತೋಡಿಕೊಂಡಿದ್ದಾರೆ. ಪಶುವೈದ್ಯಾಧಿಕಾರಿಗಳು ಕಾಲುಬಾಯಿ ರೋಗದಿಂದ ನರಳುತ್ತಿರುವ ಜಾನುವಾರುಗಳಿಗೆ ತುರ್ತಾಗಿ ಚಿಕಿತ್ಸೆ ನೀಡದಿರುವ ಬಗ್ಗೆ ರೈತರು ಮಾಹಿತಿ ನೀಡಿದ್ದು, ತ್ವರಿತಗತಿಯಲ್ಲಿ ಸ್ಪಂದಿಸಲು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News