ಅ.24ರಿಂದ `ಮಾತಾಡ್ ಮಾತಾಡ್ ಕನ್ನಡ' ಅಭಿಯಾನ: ಸಚಿವ ಸುನೀಲ್ ಕುಮಾರ್

Update: 2021-10-19 18:28 GMT

ಬೆಂಗಳೂರು, ಅ. 19: `ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡವನ್ನು ಮನೆ ಮನೆಗೆ ತಲುಪಿಸುವ ಆಶಯದೊಂದಿಗೆ `ಮಾತಾಡ್ ಮಾತಾಡ್ ಕನ್ನಡ' ಎಂಬ ಹೆಸರಿನಲ್ಲಿ ಒಂದು ವಾರ `ಕನ್ನಡಕ್ಕಾಗಿ ನಾವು ಅಭಿಯಾನ' ಹಮ್ಮಿಕೊಳ್ಳಲಾಗಿದೆ' ಎಂದು ಕನ್ನಡ ಮತ್ತು ಸಂಸ್ಕøತಿ, ಇಂಧನ ಸಚಿವ ವಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಸಮ್ಮೇಳನ ಸಭಾಂಗಣದಲ್ಲಿ `ಮಾತಾಡ್ ಮಾತಾಡ್ ಕನ್ನಡ' ಅಭಿಯಾನದ ಲಾಂಛನ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, `ರಾಜ್ಯೋತ್ಸವ ಒಂದು ದಿನದ ಉತ್ಸವ ಆಗಬಾರದು, ಹಬ್ಬದ ರೀತಿಯಲ್ಲಿ ರಾಜ್ಯೋತ್ಸವ ನಡೆಯಬೇಕೆಂಬ ಆಶಯದಲ್ಲಿ ಅ.24ರಿಂದ 30ರ ವರೆಗೆ ಒಂದು ವಾರ ಕಾಲ `ಕನ್ನಡಕ್ಕಾಗಿ ನಾವು ಅಭಿಯಾನ' ನಡೆಯಲಿದೆ ಎಂದು ಮಾಹಿತಿ ನೀಡಿದರು.

`ಅಭಿಯಾನದ ಸಂದರ್ಭದಲ್ಲಿ ಕನ್ನಡ ಭಾಷೆಯಲ್ಲೆ ಮಾತನಾಡುವುದು, ಕನ್ನಡದಲ್ಲೇ ಬರೆಯುವುದು, ಕನ್ನಡದಲ್ಲೇ ಸಹಿ ಮಾಡುವಂತೆ ಎಲ್ಲರಿಗೂ ಮನವಿ ಮಾಡಿದ್ದೇವೆ. ಹಾಗೆಯೇ ವಿದ್ಯುನ್ಮಾನ ಮಾಧ್ಯಮಗಳು ಅನ್ಯಭಾಷೆ ಬಳಸದೆ ಶುದ್ಧ ಕನ್ನಡದಲ್ಲೇ ಸುದ್ದಿ ಪ್ರಸಾರ ಮಾಡುವಂತೆಯೂ ಕೋರುತ್ತೇನೆ. ಈ ತಿಂಗಳ 24ರಂದು `ಮಾತಾಡ್ ಮಾತಾಡ್ ಕನ್ನಡ' ಅಭಿಯಾನಕ್ಕೆ ಚಾಲನೆ ನೀಡುತ್ತಿದ್ದೇವೆ' ಎಂದು ಅವರು ತಿಳಿಸಿದರು.

`ಈ ಅಭಿಯಾನ ರಾಜ್ಯದಲ್ಲಿ ಅಷ್ಟೇ ಅಲ್ಲದೆ, ಹೊರ ರಾಜ್ಯಗಳಲ್ಲಿ ಹಾಗೂ ಹೊರ ದೇಶಗಳಲ್ಲಿಯೂ ನಡೆಯಲಿದೆ. ಕನ್ನಡ ಭಾಷೆ ಕೇವಲ ಮಾತನಾಡುವ ನಾಲ್ಕು ಶಬ್ದ ಅಲ್ಲ. ಭಾಷೆಯಲ್ಲಿ ನಮ್ಮ ಸಂಸ್ಕೃತಿ, ವ್ಯಕ್ತಿಯ ವ್ಯಕ್ತಿತ್ವ ಅಡಗಿದೆ. ಕನ್ನಡ ಸಂಸ್ಕೃತಿಯನ್ನು ಎಲ್ಲ ಮನೆಗಳಿಗೆ ತಲುಪಿಸುವ ಆಶಯ ಈ ಅಭಿಯಾನದ್ದಾಗಿದೆ. ಇದು ಕನ್ನಡ ಭಾಷೆ, ಸಂಸ್ಕೃತಿಯ ಅಭಿಯಾನ' ಎಂದು ಸುನೀಲ್ ಕುಮಾರ್ ಹೇಳಿದರು.

ಗಾಯನ: `ಅ.28ರ ಬೆಳಗ್ಗೆ 11 ಗಂಟೆಗೆ 1 ಲಕ್ಷ ಮಂದಿ ಕನ್ನಡ ಗಾಯನ ನಡೆಯಲಿದ್ದು, ಇದಕ್ಕೆ ಈಗಾಗಲೇ 3 ಕನ್ನಡದ ಗೀತೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ರಾಷ್ಟ್ರಕವಿ ಕುವೆಂಪು ರಚಿತ `ಬಾರಿಸು ಕನ್ನಡ ಡಿಂಡಿಮವ', ಕೆ.ಎಸ್.ನಿಸಾರ್ ಅಹಮದ್ ರಚಿತ `ಜೋಗದ ಸಿರಿ ಬೆಳಕಿನಲ್ಲಿ', ಹಂಸಲೇಖಾ ರಚನೆಯ `ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಎಂಬ ಗೀತೆಗಳನ್ನು ಎಲ್ಲ ಸರಕಾರಿ ಕಚೇರಿಗಳು, ಶಾಲೆ-ಕಾಲೇಜುಗಳು, ವಿವಿ, ಜಿಲ್ಲೆ, ತಾಲೂಕು, ಗ್ರಾಮ ಮಟ್ಟದಲ್ಲಿ ಗಡಿನಾಡು, ಹೊರನಾಡುಗಳಲ್ಲಿ ಏಕಕಾಲದಲ್ಲಿ ಈ ಹಾಡುಗಳ ಗಾಯನ ಕಾರ್ಯಕ್ರಮ ನಡೆಯಲಿದೆ' ಎಂದು ಸುನೀಲ್ ಕುಮಾರ್ ಮಾಹಿತಿ ನೀಡಿದರು.

`ಈ ಅಭಿಯಾನದ ಭಾಗವಾಗಿ ಅ.28, 29 ಮತ್ತು 30ರಂದು ಮೂರು ದಿನ ಕನ್ನಡ ಸಾಂಸ್ಕೃತಿಕ ಉತ್ಸವ ನಡೆಯಲಿದ್ದು, ಈ ಉತ್ಸವವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗುವುದು. ಕನ್ನಡ ಉಡುಗೆ-ತೊಡುಗೆ, ಉಡುಪು ಎಲ್ಲವನ್ನು ಈ ಸಾಂಸ್ಕೃತಿಕ ಉತ್ಸವ ಸಂದರ್ಭದಲ್ಲಿ ಅನಾವರಣಗೊಳಿಸಲಾಗುವುದು. ನಾಡಿನ ಸಾಹಿತಿ, ಕಲಾವಿದರು, ಚಿತ್ರನಟರಿಗೂ ಈ ಅಭಿಯಾನದಲ್ಲಿ ಭಾಗಿಯಾಗಲು ಮನವಿ ಮಾಡಿದ್ದೇವೆ. ಇದು ಸರಕಾರಿ ಕಾರ್ಯಕ್ರಮ ಅಲ್ಲ, ಜನರ ಕಾರ್ಯಕ್ರಮ. ನಾಡಿನ ಹಬ್ಬದ ರೀತಿ ಅಭಿಯಾನ ಆಗಬೇಕೆಂಬುದು ನಮ್ಮ ಅಪೇಕ್ಷೆ ಎಂದು ಸುನೀಲ್ ಕುಮಾರ್ ಹೇಳಿದರು.

ಮಾತನಾಡುವ ಸ್ಪರ್ಧೆ: `ಅನ್ಯ ಭಾಷೆಯ ಪದಗಳನ್ನು ಬಳಸದೆ ನಿರರ್ಗಳವಾಗಿ ಕನ್ನಡದಲ್ಲಿ ನಾಲ್ಕು ನಿಮಿಷಗಳ ಕಾಲ ಕನ್ನಡ ನಾಡು, ನುಡಿ, ಪರಂಪರೆಗೆ ಸಂಬಂಧಿಸಿದ ವಿಷಯಗಳ ಕುರಿತು ವಿಡಿಯೋ ಸೆಲ್ಫಿ ತಗೆದು ಕಳುಹಿಸುವುದು. ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಮೂವರಿಗೆ ಪ್ರಥಮ-5 ಸಾವಿರ ರೂ., ದ್ವಿತೀಯ-3ಸಾವಿರ ರೂ., ತೃತೀಯ-2ಸಾವಿರ ರೂ. ಬಹುಮಾನ ನೀಡಲಾಗುವುದು. ಜಿಲ್ಲಾ ಮಟ್ಟದಲ್ಲಿ ವಿಜೇತರಾದವರನ್ನು ರಾಜ್ಯ ಮಟ್ಟದಲ್ಲಿ ಮತ್ತೆ ಸ್ಪರ್ಧೆ ನಡೆಸಲಾಗುವುದು. ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ-50ಸಾವಿರ ರೂ., ದ್ವಿತೀಯ ಬಹುಮಾನ-30 ಸಾವಿರ ರೂ. ಮತ್ತು ತೃತೀಯ ಬಹುಮಾನ-20 ಸಾವಿರ ರೂ.ನೀಡಲಾಗುವುದು. ಅ.28ರೊಳಗೆ ವಿಡಿಯೋ-ಸೆಲ್ಫಿ ತಗೆದು ಕಳುಹಿಸುವುದು. ಅ.20ರಂದು ರಾಜ್ಯ ಮಟ್ಟದ ಸ್ಪರ್ಧೆ ನಡೆಯಲಿದೆ ಎಂದು ಅವರು ತಿಳಿಸಿದರು.

ನಾಟಕ, ನೃತ್ಯ, ಸಂಗೀತ ಕಾರ್ಯಕ್ರಮ: `ರಾಜ್ಯದ ಐದು ರಂಗಾಯಣಗಳು ಹಾಗೂ ವಿವಿಧ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳ ಸಹಯೋಗದಲ್ಲಿ ರಾಜ್ಯದ ಆಯ್ದ ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡ ನಾಡು, ನುಡಿ, ಸಂಸ್ಕøತಿ ಮತ್ತು ಕರ್ನಾಟಕದ ಹಿರಿಮೆ ಬಿಂಬಿಸುವ ನಾಟಕಗಳು, ನೃತ್ಯ, ಸಂಗೀತ ಕಾರ್ಯಕ್ರಮ ಒಳಗೊಂಡ `ಕನ್ನಡ ಸಾಂಸ್ಕೃತಿಕ ಉತ್ಸವ' ಆಯೋಜಿಸಲಾಗಿದೆ. ಈ ಉತ್ಸವದಲ್ಲಿ ಬೆಂಗಳೂರು ಎಲ್ಲ ವಾರ್ಡ್‍ಗಳಲ್ಲಿ, ಐಟಿಬಿಟಿ ಸಂಸ್ಥೆಗಳ ಆವರಣಗಳಲ್ಲಿ, ಮೆಟ್ರೋ, ವಿಧಾನಸೌಧ, ವಿವಿಧ ಕಾರ್ಖಾನಗಳ ಆವರಣದಲ್ಲಿ ಇದೇ ತೆರನಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು' ಎಂದು ಅವರು ಹೇಳಿದರು.

ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಗೋವಾ ರಾಜ್ಯಗಳಿಗೆ ಹೊಂದಿಕೊಂಡಿರುವ ರಾಜ್ಯದ ಗಡಿಭಾಗದ ತಾಲೂಕು ಪ್ರದೇಶಗಳಲ್ಲಿ ನಾಡಿನ ಸಂಸ್ಕೃತಿ, ಭಾಷೆ, ಸಾಹಿತ್ಯ ಕುರಿತ ಜಾಗೃತಿ ಕಾರ್ಯಕ್ರಮಗಳ ನಡೆಸುವ ಮೂಲಕ ಕನ್ನಡಕ್ಕಾಗಿ ನಾವು ಅಭಿಯಾನ ನಡೆಸಲಾಗುವುದು. ಪುಸ್ತಕೋತ್ಸವ, ದೇಶೀಯ ಉಡುಪು ಮತ್ತು ಆಹಾರ ಮೇಳ, ಚಿತ್ರಕಲೆ/ಶಿಲ್ಪಕಲಾ ಮೇಳಗಳನ್ನು ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.

`66ನೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಇದುವರೆಗೂ 4,500 ಅರ್ಜಿಗಳು ಬಂದಿವೆ. ಅರ್ಜಿಗಳ ಪರಿಶೀಲನೆ ನಡೆಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಭೆ ನಡೆಸಿ, 66 ಮಂದಿ ಪ್ರಶಸ್ತಿ ಪುರಸ್ಕೃತರ ಆಯ್ಕೆ ಮಾಡಲಾಗುವುದು.ಪ್ರಶಸ್ತಿಗೆ ಎಷ್ಟೇ ಅರ್ಜಿಗಳು ಬಂದರೂ ಸಾಧನೆಯೇ ಮಾನದಂಡವಾಗಿರಲಿದೆ. ನನಗೆ ಪ್ರಶಸ್ತಿ ಬೇಕು ಎನ್ನುವವರ ಸಂಖ್ಯೆ ಕಡಿಮೆಯಾಗಬೇಕು. ಇಂತಹವರಿಗೆ ಪ್ರಶಸ್ತಿ ನೀಡಬೇಕೆಂಬ ಶಿಫಾರಸ್ಸು ಮಾಡುವವರ ಸಂಖ್ಯೆ ಹೆಚ್ಚಾಗಬೇಕು'
-ಸುನೀಲ್ ಕುಮಾರ್ ಕನ್ನಡ ಮತ್ತು ಸಂಸ್ಕೃತಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News