ಶಿವಮೊಗ್ಗ: ವಿಷ ಸೇವಿಸಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು; ಐದು ತಿಂಗಳ ಬಳಿಕ ಮೃತ ಯುವಕನ ಅಣ್ಣನ ಬಂಧನ

Update: 2021-10-20 12:55 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಅ.20: ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವೊಂದಕ್ಕೆ ಐದು ತಿಂಗಳ ಬಳಿಕ ತಿರುವು ಸಿಕ್ಕಿದೆ. ಪ್ರಕರಣ ಸಂಬಂಧ ಮೃತ ಯುವಕನ ಅಣ್ಣನನ್ನೇ ಪೊಲೀಸರು ಬಂಧಿಸಿದ್ದಾರೆ.

ಸಾಗರ ತಾಲೂಕು ಅಂದಾಸುರ ಗ್ರಾಮದ ಹರೀಶ್ (29) ವಿಷ ಸೇವಿಸಿ ಮೃತಪಟ್ಟಿದ್ದ ಎಂದು ಹೇಳಲಾಗಿತ್ತು. ಆದರೆ ಸಾವಿನ ಕುರಿತು ಪೋಷಕರು ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಅಣ್ಣನಿಂದಲೇ ತಮ್ಮ ಹತ್ಯೆಯಾಗಿರುವುದು ತಿಳಿದು ಬಂದಿದೆ.

ಏನಿದು ಪ್ರಕರಣ?

ಮೇ 8ರಂದು ರಾತ್ರಿ ಕುಡಿದು ಮನೆಗೆ ಬಂದಾಗ ಪೋಷಕರು ಮತ್ತು ಹರೀಶನ ಮಧ್ಯೆ ಗಲಾಟೆಯಾಗಿದೆ. ಇದರಿಂದ ಮನನೊಂದು ಹರೀಶ, ಭತ್ತದ ಬೆಳೆಗೆ ಬಳಸುವ ಔಷಧವನ್ನು ಸೇವಿಸಿದ್ದ. ತೀವ್ರ ಅಸ್ವಸ್ಥಗೊಂಡ ಹರೀಶನನ್ನು ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಹರೀಶ ಕೊನೆಯುಸಿರೆಳೆದಿದ್ದ.

ಅನುಮಾನಗೊಂಡ ಪೋಷಕರಿಂದ ದೂರು:

ಹರೀಶನ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿದ ಆತನ ತಂದೆ, ಸಾಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರಿಗೆ ಮರಣೋತ್ತರ ಪರೀಕ್ಷೆಯಿಂದ ಇದು ಆತ್ಮಹತ್ಯೆಯಲ್ಲ, ಕೊಲೆ ಅನ್ನುವುದು ಸ್ಪಷ್ಟವಾಗಿತ್ತು. ಹರೀಶನ ತಲೆಗೆ ಬಲವಾದ ಪೆಟ್ಟು ಬಿದ್ದು ಮೃತಪಟ್ಟಿರುವುದು ಖಚಿತವಾಗಿತ್ತು.

ಅಣ್ಣನ ಮೇಲೆ ಅನುಮಾನ:

ತನಿಖೆ ವೇಳೆ ಹರೀಶನ ಅಣ್ಣನನ್ನು ವಿಚಾರಣೆಗೆ ಒಳಪಡಿಸಲಾಯಿತು. ಈ ವೇಳೆ ಹರೀಶನ ಕೊಲೆ ಮಾಡಿರುವುದನ್ನು ಅಣ್ಣ ಒಪ್ಪಿಕೊಂಡಿದ್ದಾನೆ. ಮೇ 8ರಂದು ರಾತ್ರಿ ಹರೀಶ ವಿಷ ಸೇವಿಸಿರುತ್ತಾನೆ. ಈ ವೇಳೆ ಹರೀಶನ ಅಣ್ಣ ಮನೆಯ ಮುಂದಿದ್ದ ಕಬ್ಬಿಣ ರಾಡ್ ಒಂದರಿಂದ, ಹರೀಶನ ತಲೆಗೆ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದ. ಅಷ್ಟರಲ್ಲಾಗಲೆ ಊರಿನ ಜನ ಸೇರಿದ್ದರಿಂದ ಹರೀಶ ವಿಷ ಸೇವಿಸಿದ್ದಾನೆ ಎಂದು ಹಬ್ಬಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ತಮ್ಮನ ಹತ್ಯೆಗೆ ಅಣ್ಣ ಯೋಚಿಸಿದ್ದೇಕೆ?

ಹರೀಶನನ್ನು ಅಣ್ಣನೆ ಹತ್ಯೆಗೈದಿರುವ ವಿಚಾರ ಸ್ಪಷ್ಟವಾಗುತ್ತಿದ್ದಂತೆ, ಕಾರಣ ವಿಚಾರಿಸಿದ್ದಾರೆ. ತಂದೆಯ ಆಸ್ತಿಯಲ್ಲ ತನ್ನ ಪಾಲಿಗೆ ಬರುತ್ತದೆ ಎಂಬ ದುರುದ್ದೇಶದಿಂದ ಹರೀಶನ ಅಣ್ಣನೇ, ಹರೀಶನ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ. ಹರೀಶ ಮೃತಪಟ್ಟು ಐದು ತಿಂಗಳ ಬಳಿಕ ತನಿಖೆ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.

ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಹರೀಶನ ಅಣ್ಣನನ್ನು ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News