ಅಡುಗೆ ಮಾಡುವ ಹೆಣ್ಣುಮಗಳು ಮಂತ್ರಿಯಾಗಲು ಬಿಜೆಪಿಯಲ್ಲಿ ಮಾತ್ರ ಅವಕಾಶ: ಸಚಿವೆ ಶಶಿಕಲಾ ಜೊಲ್ಲೆ

Update: 2021-10-20 13:15 GMT
 ಶಶಿಕಲಾ ಜೊಲ್ಲೆ

ಸಿಂದಗಿ, ಅ.20: ಮನೆಯಲ್ಲಿ ಅಡುಗೆ ಮಾಡುವ ಹೆಣ್ಣು ಮಗಳು ರಾಜ್ಯದ ಮಂತ್ರಿಯಾಗಲು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ಬುಧವಾರ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಕಡಣಿಯಲ್ಲಿ ಮತ ಯಾಚನೆ ಮಾಡಿದ ಅವರು, ಬಿಜೆಪಿ ಪಕ್ಷದಲ್ಲಿ ಮಹಿಳೆಯರಿಗೆ ಸಾಕಷ್ಟು ಸ್ವಾಂತಂತ್ರ್ಯ ಇದೆ. ದೇಶದ ಜನಸಂಖ್ಯೆಯ ಅರ್ಧದಷ್ಟು ಮಹಿಳೆಯರಿದ್ದೇವೆ. ಮಹಿಳೆಯರು ತವರು ಮನೆಯಲ್ಲಿ ಅಪ್ಪ, ಅಣ್ಣ ಹೇಳಿದಂತೆ, ಮದುವೆಯಾದ ಮೇಲೆ ಗಂಡ ಹೇಳಿದಂತೆ ಮತ ಚಲಾಯಿಸುತ್ತ ಬಂದಿದ್ದೇವೆ. ಆದರೆ, ನಮ್ಮ ಬೇಡಿಕೆ ಏನು ಎಂದು ಯಾರಿಗೂ ಕೇಳೋಲ್ಲ ಎಂದರು.

ಆದರೆ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಮಹಿಳೆಯರಿಗೆ ಅಡುಗೆ ಮನೆಯಲ್ಲಿ ಕಟ್ಟಿಗೆಯಿಂದ ಅಡುಗೆ ಮಾಡುವ ತೊಂದರೆ ತಪ್ಪಿಸಲು ಉಜ್ವಲ ಯೋಜನೆ ಜಾರಿಗೆ ತಂದು ದೇಶಾದ್ಯಂತ ಸುಮಾರು 8 ಕೋಟಿ ಮನೆಗಳಿಗೆ ಅಡುಗೆ ಅನಿಲ್ ಸಂಪರ್ಕ ನೀಡುವ ಮೂಲಕ ಮಹಿಳೆಯರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ. ಹೆಣ್ಣು ಮಕ್ಕಳ ರಕ್ಷಣೆಗೆ ಬೇಟಿ ಬಚಾವೊ, ಬೇಟಿ ಪಡಾವೊ ಭೇಟಿ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಶಶಿಕಲಾ ಜೊಲ್ಲೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯದ ಯಡಿಯೂರಪ್ಪ ನೇತೃತ್ವದ ಸರಕಾರ ರಾಜ್ಯದಲ್ಲಿ ಹುಟ್ಟಿದ ಪ್ರತಿಯೊಂದು ಹೆಣ್ಣು ಮಗುವನ್ನು ಭಾಗ್ಯಲಕ್ಷ್ಮಿ ಎಂದು ಕರೆದು ಹುಟ್ಟಿದ ಹೆಣ್ಣು ಮಗುವಿಗೆ ಭಾಗ್ಯಲಕ್ಷ್ಮೀ ಬಾಂಡ್ ನೀಡುವ ಯೋಜನೆ ಜಾರಿಗೆ ತಂದಿದೆ. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೈತರ ಮಕ್ಕಳು ಉನ್ನತ ಶಿಕ್ಷಣ ಕಲಿಯಲು ಅನುಕೂಲವಾಗಲೆಂದು ವಿದ್ಯಾನಿಧಿ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಅವರು ತಿಳಿಸಿದರು.

ರೈತರಿಗೂ ಕೇಂದ್ರದ ನರೇಂದ್ರ ಮೋದಿ ಸರಕಾರ ಕಿಸಾನ್ ಸಮ್ಮಾನ ಯೋಜನೆ ಮೂಲಕ ಪ್ರತಿಯೊಬ್ಬ ರೈತರ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡುತ್ತಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅದಕ್ಕೆ 4000 ರೂ. ಹಣವನ್ನು ಸೇರಿಸಿ ಒಟ್ಟು 10 ಸಾವಿರ ರೂ.ರೈತರ ಖಾತೆಗಳಿಗೆ ಜಮೆಯಾಗುವಂತೆ ಮಾಡಿದ್ದಾರೆ ಎಂದು ಅವರು ಹೇಳಿದರು.

ಸಿಂದಗಿಯಲ್ಲಿ ರಮೇಶ್ ಬೂಸನೂರು ಅವರನ್ನು ಈ ಚುನಾವಣೆಯಲ್ಲಿ ಆಯ್ಕೆ ಮಾಡುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರದ ಶಕ್ತಿ ಬಲಪಡಿಸಬೇಕು ಎಂದು ಶಶಿಕಲಾ ಜೊಲ್ಲೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ವಸತಿ ಸಚಿವ ವಿ.ಸೋಮಣ್ಣ, ಶಾಸಕ ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News