ಜಾಮೀನು ಭದ್ರತೆಗೆ ಅನ್ಯರ ಭೂಮಿ ದುರ್ಬಳಕೆ: ವಿಚಾರಣೆಗೆ ಹೈಕೋರ್ಟ್ ಆದೇಶ

Update: 2021-10-20 13:34 GMT

ಬೆಂಗಳೂರು, ಅ.20: ಕ್ರಿಮಿನಲ್ ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ಕೊಡಿಸಲು ಅನ್ಯರ ಭೂಮಿಯನ್ನು ಭದ್ರತೆಯಾಗಿ ನೀಡಿರುವ ಬಗ್ಗೆ ವಿಚಾರಣೆ ನಡೆಸುವಂತೆ ಹೈಕೋರ್ಟ್ ನಗರದ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್‍ಗೆ ನಿರ್ದೇಶಿಸಿದೆ. 

ಆರೋಪಿಯ ಜಾಮೀನು ಭದ್ರತೆಗೆ ಖಾತರಿ ನೀಡಿರುವುದು ನಮ್ಮ ತಂದೆಯಲ್ಲ, ಹೀಗಾಗಿ ಅವರ ಹೆಸರಿನಲ್ಲಿರುವ ಜಮೀನು ಮುಟ್ಟುಗೋಲಿಗೆ ಮುಂದಾಗಿರುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿ ನಗರದ ಕೊಟ್ಟಿಗೆರೆ ನಿವಾಸಿ ಜಿ.ಪ್ರಶಾಂತ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ಮಾಡಿದೆ.

ಪೀಠ ತನ್ನ ಆದೇಶದಲ್ಲಿ ದಾಖಲೆಗಳ ಪ್ರಕಾರ ಅರ್ಜಿದಾರ ಜಿ.ಪ್ರಶಾಂತ್ ಅವರ ತಂದೆ ಜಿ.ಎಸ್.ಗುಂಡಣ್ಣ ಅವರ ಜನ್ಮ ದಿನಾಂಕ 1946 ಸೆ.24 ಆಗಿದೆ. ಆದರೆ, ಆರೋಪಿಯ ಜಾಮೀನಿಗೆ ಭದ್ರತೆ ನೀಡಿರುವ ಜಿ.ಎಸ್.ಗುಂಡಣ್ಣ ಹೆಸರಿನ ವ್ಯಕ್ತಿಯ ವಯಸ್ಸು 41 ಎಂದಿದೆ. ಹಾಗೆಯೇ ಇಬ್ಬರೂ ಗುಂಡಣ್ಣ ಹೆಸರಿನ ವ್ಯಕ್ತಿಗಳ ಫೋಟೋ ಕೂಡ ಬೇರೆ ಬೇರೆ ಆಗಿದೆ. ಹೀಗಾಗಿ ಕ್ರಿಮಿನಲ್ ಪ್ರಕರಣದಲ್ಲಿ ಜಾಮೀನು ಪಡೆದಿರುವ ಆರೋಪಿಗೆ ಭದ್ರತಾ ಖಾತರಿ ನೀಡಿರುವುದು ನಕಲಿ ವ್ಯಕ್ತಿ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಹೀಗಾಗಿ ಜಾಮೀನು ಪಡೆಯಲು ಅನ್ಯರ ಜಮೀನು ಶ್ಯೂರಿಟಿ ನೀಡಿರುವ ಆರೋಪ ಕುರಿತು ನ್ಯಾಯಾಲಯ ವಿಚಾರಣೆ ನಡೆಸಿ ಕ್ರಮ ಜರುಗಿಸಬೇಕು ಎಂದು ಪೀಠ ನಿರ್ದೇಶಿಸಿದೆ. 

ಅಲ್ಲದೆ, ಜಾಮೀನು ಪಡೆಯಲು ಭದ್ರತೆ ನೀಡಿರುವ ಜಮೀನಿನ ಬಿಡುಗಡೆಗೆ ಅರ್ಜಿ ಸಲ್ಲಿಸಲು ಮುಕ್ತರಿದ್ದಾರೆ. ಅದರಂತೆ, ಅರ್ಜಿದಾರರು ಜಮೀನಿನ ಬಿಡುಗಡೆ ಕೋರಿ ಸೂಕ್ತ ಅರ್ಜಿ ಸಲ್ಲಿಸಬೇಕು. ಅದನ್ನು ನ್ಯಾಯಾಲಯ ಪರಿಗಣಿಸಿ ಸೂಕ್ತ ಆದೇಶ ಹೊರಡಿಸಬೇಕು. ಅಲ್ಲಿಯವರೆಗೆ ಜಾಮೀನು ಭದ್ರತೆ ಖಾತರಿ ಮೊತ್ತಕ್ಕಾಗಿ ಜಮೀನು ಮುಟ್ಟುಗೋಲು ಹಾಕಿಕೊಳ್ಳುವ ಸಂಬಂಧ ಯಾವುದೇ ಕ್ರಮ ಜರುಗಿಸದಂತೆ ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News