ವಾಲ್ಮೀಕಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ನೀಡುವವರೆಗೆ ಹೋರಾಟ: ಬೆಳ್ಳೂರು ಆಂಜಿನಪ್ಪ

Update: 2021-10-20 14:02 GMT

ಬೆಂಗಳೂರು, ಅ.20: ರಾಜ್ಯದಲ್ಲಿ ವಾಲ್ಮೀಕಿ ಸಮುದಾಯವು 19 ಲಕ್ಷ ಜನಸಂಖ್ಯೆ ಹೊಂದಿದ್ದಾಗ 1985ರಲ್ಲಿ ಶೇ.3ರಷ್ಟು ಮೀಸಲಾತಿಯನ್ನು ನೀಡಲಾಗಿತ್ತು. ಇದೀಗ ನಮ್ಮ ಜನಸಂಖ್ಯೆ 65 ಲಕ್ಷ ಇದೆ. ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚಳ ಮಾಡಲು ಯಾವ ಸರಕಾರಗಳು ಮನಸ್ಸು ಮಾಡುತ್ತಿಲ್ಲ ಎಂದು ವಾಲ್ಮೀಕಿ ಸಮುದಾಯದ ಮುಖಂಡ ಬೆಳ್ಳೂರು ಆಂಜಿನಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಕೆ.ಆರ್.ಪುರದಲ್ಲಿರುವ ಬೆಂಗಳೂರು ಪೂರ್ವ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.

ಸರಕಾರಗಳು ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡಬಾರದು. ನ್ಯಾಯಸಮ್ಮತವಾಗಿ ಜನಸಂಖ್ಯೆಗೆ ಅನುಗುಣವಾಗಿ ಕೇಳುತ್ತಿರುವ ಮೀಸಲಾತಿಯನ್ನು ಕೊಡಲು ಯಾಕೆ ಮೀನಾಮೇಷ ಎಣಿಸಲಾಗುತ್ತಿದೆ. ಮೀಸಲಾತಿ ಪಡೆಯಲು ನಾವು ಇನ್ನೂ ಎಷ್ಟು ಹೋರಾಟಗಳನ್ನು ಮಾಡಬೇಕು. ಸರಕಾರ ನಮ್ಮ ಆಗ್ರಹಕ್ಕೆ ಮಣಿಯದೆ ಇದ್ದರೆ ಇದೇ ತಾಲೂಕು ದಂಡಾಧಿಕಾರಿ ಕಚೇರಿಯಿಂದಲೆ ವಿಧಾನಸೌಧ ಚಲೋ ಹೋರಾಟ ಆರಂಭಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಮನುಷ್ಯನಿಗೆ ತನ್ನ ಸಂಸ್ಕೃತಿಯ ಪರಿಚಯ ಆದಾಗ ಜೀವನ ಸಾರ್ಥಕ ಆಗುತ್ತದೆ. ನಮ್ಮ ದೇಶಕ್ಕೆ ಸಂಸ್ಕೃತಿಯ ಬುನಾದಿ ಹಾಕಿಕೊಟ್ಟವರು ವಾಲ್ಮೀಕಿ. ಅವರ ಆದರ್ಶ, ಸಂಸ್ಕೃತಿಯನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಸಮಾಜಕ್ಕೆ ಬಡವರು, ತಳ ಸಮುದಾಯದವರು ಪರಿಚಯಿಸಿದ ಕೊಡುಗೆಗಳನ್ನು ಪಟ್ಟಭದ್ರ ಹಿತಾಸಕ್ತಿಗಳು ಮರೆಮಾಚುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಅಯೋಧ್ಯೆಯಲ್ಲಿ ಸಾವಿರಾರು ಕೋಟಿ ರೂ.ಖರ್ಚು ಮಾಡಿ ಶ್ರೀರಾಮನ ದೇವಸ್ಥಾನ ನಿರ್ಮಿಸಲಾಗುತ್ತಿದೆ. ಆದರೆ, ಜಗತ್ತಿಗೆ ರಾಮನ ಚರಿತ್ರೆಯನ್ನು ಪರಿಚಯಿಸಿದ ವಾಲ್ಮೀಕಿಯನ್ನು ಗೌರವಿಸುವ, ಸ್ಮರಿಸುವ ಪ್ರವೃತ್ತಿ ಕಣ್ಮರೆಯಾಗುತ್ತಿರುವುದು ಬೇಸರದ ಸಂಗತಿ. ವಾಲ್ಮೀಕಿ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಮೀಸಲಾತಿ ನೀಡಿ ಬೆಂಬಲಿಸಬೇಕು ಎಂದು ಬೆಳ್ಳೂರು ಆಂಜಿನಪ್ಪ ಒತ್ತಾಯಿಸಿದರು.

ಬೆಂಗಳೂರು ಪೂರ್ವ ತಾಲೂಕಿನ ವಿಶೇಷ ದಂಡಾಧಿಕಾರಿ ನಾಗಪ್ರಶಾಂತ್ ಮಾತನಾಡಿ, ವಾಲ್ಮೀಕಿ ರಚಿಸಿದ ರಾಮಾಯಣದಲ್ಲಿ ಸುಮಾರು 24 ಸಾವಿರ ಶ್ಲೋಕಗಳಿವೆ. ಅವುಗಳಲ್ಲಿ ಸಮಾಜದ ಎಲ್ಲ ವಿಭಾಗಗಳ ಅಂಶಗಳನ್ನು ಕಾಣಬಹುದು. ಮನುಷ್ಯನ ಬದುಕಿಗೆ ಅಗತ್ಯವಿರುವ ಎಲ್ಲವನ್ನೂ ಸಾವಿರಾರು ವರ್ಷಗಳ ಹಿಂದೆಯೇ ಅವರು ತಮ್ಮ ರಾಮಾಯಣದಲ್ಲಿ ಅಳವಡಿಸಿದ್ದಾರೆ ಎಂದರು.

ವಾಲ್ಮೀಕಿ ಸಮುದಾಯದ ಮುಖಂಡ ಬಾಕ್ಸರ್ ಎನ್.ನಾಗರಾಜ್ ಮಾತನಾಡಿ, ಸಮುದಾಯದ ಏಳಿಗೆಗೆ ಶ್ರಮಿಸಿದ 10 ಜನ ಪ್ರಮುಖರಿಗೆ ಸನ್ಮಾನಿಸಲಾಗಿದೆ. ಇದರ ಜೊತೆಗೆ ಸಮುದಾಯಕ್ಕಾಗಿ ಬೆಂಗಳೂರು ಪೂರ್ವ ತಾಲೂಕಿನಲ್ಲಿ ಸಮುದಾಯ ಭವನ, ವಸತಿ ನಿಲಯ ಹಾಗೂ ಕಾಲೇಜು ನಿರ್ಮಿಸಲು ಜಾಗಬೇಕಾಗಿದೆ. ಮುಂದಿನ ದಿನಗಳಲ್ಲಿ ಸಮುದಾಯದ ಎಲ್ಲ ಶಾಸಕರು, ಸಚಿವರನ್ನು ಭೇಟಿ ಮಾಡಿ, ಮುಖ್ಯಮಂತ್ರಿಯ ಗಮನಕ್ಕೆ ತರುವ ಕೆಲಸ ಮಾಡುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ವಾಲ್ಮೀಕಿ ಸಮುದಾಯದ ಶ್ರೀ ಈಶ್ವರಾನಂದ ಸ್ವಾಮಿ, ಬ್ರಹ್ಮಾನಂದ ಸ್ವಾಮೀ ದಿವ್ಯ ಸಾನಿಧ್ಯವಹಿಸಿದ್ದರು. ಸಂಘದ ಅಧ್ಯಕ್ಷ ಕೆ.ಎಂ.ಗಣೇಶ್, ಇನ್ಸ್ಪೆಕ್ಟರ್ ಮಂಜುನಾಥ್, ಬಿಇಒ ಹನುಮಂತರಾಯಪ್ಪ, ಐಟಿಐ ಡಿಜಿಎಂ(ನಿವೃತ್ತ) ವೆಂಕಟೇಶ್ವರಲು, ಮುಖಂಡರಾದ ಕೋನದಾಸಪುರ ರಾಜಪ್ಪ, ನಾಗೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News