ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳದ ಕುರಿತು ಕಾನೂನು ತಜ್ಞರ ಸಲಹೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2021-10-20 16:23 GMT

ಬೆಂಗಳೂರು, ಅ.20 :  ವಾಲ್ಮೀಕಿ ಸಮುದಾಯದ ಮೀಸಲಾತಿಯನ್ನು ಶೇ.7.5ರಷ್ಟನ್ನು ಹೆಚ್ಚಿಸುವ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

ಬುಧವಾರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೀಸಲಾತಿ ಪರಿಷ್ಕರಣೆ ವಿಚಾರ ಕೇಂದ್ರ ಸರಕಾರದ ಮಟ್ಟದಲ್ಲಿ ಆಗಬೇಕು. ಕಾನೂನು ಚೌಕಟ್ಟಿನಲ್ಲಿಯೇ ಮೀಸಲಾತಿಗೆ ಸಂಬಂಧಿಸಿದ ವಿಷಯಗಳನ್ನು ಬಗೆಹರಿಸಬೇಕಿದೆ. ಎಲ್ಲರಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತೇನೆ. ಇದು ಅಷ್ಟು ಸುಲಭವೂ ಅಲ್ಲ, ಆದರೂ ಪ್ರಯತ್ನ ನಡೆಸಿದ್ದೇನೆ 

ವಾಲ್ಮೀಕಿ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಇರಬೇಕು. ಈ ನಿಟ್ಟಿನಲ್ಲಿ ನಮ್ಮ ಸರಕಾರವು ಪ್ರಯತ್ನ ಮಾಡುತ್ತಿದೆ. ಮೀಸಲಾತಿ ಕುರಿತು ಬಹುತೇಕ ಸಮುದಾಯಗಳು ಆಗ್ರಹಿಸಿವೆ. ಆದರೆ, ಮೀಸಲಾತಿ ಪ್ರಮಾಣ ಶೇ.50ರಷ್ಟು ಮೀರುವ ಹಾಗಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಮುಂದುವರೆದ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದಿರುವವರಿಗೆ ಶೇ.10ರಷ್ಟು ಮೀಸಲಾತಿ ನೀಡುವ ತೀರ್ಮಾನ ಮಾಡಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಮಹರ್ಷಿ ವಾಲ್ಮೀಕಿ ಅವರು ಕಾಲಾತೀತರಾದ ಮಹಾತ್ಮರು. ವಿಶ್ವದ 10 ಶ್ರೇಷ್ಠ ಕಾವ್ಯಗಳಲ್ಲಿ ಒಂದು ಎಂದು ಅವರ ರಾಮಾಯಣ ಕೃತಿ ಮನ್ನಣೆ ಪಡೆದಿದೆ. ರಾಮಾಯಣದ ಮೂಲಕ ನಮ್ಮ ಭರತವರ್ಷಕ್ಕೆ ಒಂದು ಸಂಸ್ಕøತಿಯನ್ನು ಅವರು ನೀಡಿದರು. ಅದರಲ್ಲಿ ನಾವು ಬಾಳಿ ಬದುಕಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.

ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗಾಗಿ ಜಾರಿಗೆ ತಂದಿರುವ ಭೂ ಒಡೆತನ ಯೋಜನೆಯನ್ನು ಇನ್ನೂ ಹೆಚ್ಚು ಜನರಿಗೆ ತಲುಪಿಸಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.

ಭೂಮಿ ನೀಡಲು ಇರುವ ಅಡೆತಡೆಗಳನ್ನು ನಿವಾರಿಸಿ, ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುವುದು. ಎಜುಕೇಷನ್, ಎಂಪ್ಲಾಯ್‍ಮೆಂಟ್, ಎಂಪವರ್‍ಮೆಂಟ್ (ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ)–ಈ ಮೂರು ‘ಇ’ಗಳಿಗೆ ಆದ್ಯತೆ ನೀಡುವ ಮೂಲಕ ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಅವರು ಹೇಳಿದರು.

ವಿಶೇಷವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಯರ ಸ್ವಾವಲಂಬನೆಗೆ ಒತ್ತು ನೀಡಲಾಗುವುದು. ಈ ಕುರಿತು ನಬಾರ್ಡ್‍ನ ಅಧಿಕಾರಿಗಳೊಂದಿಗೆ ಸಹ ಚರ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕೆ ಗಿರಿಜನ ಉಪಯೋಜನೆಯಡಿ 7600 ಕೋಟಿ ರೂ. ಅನುದಾನ ನಿಗದಿ ಪಡಿಸಲಾಗಿದೆ. ಈ ಮೊತ್ತವು ಅರ್ಹ ಫಲಾನುಭವಿಗಳಿಗೆ ತಲುಪಿದಾಗಲೇ ಯೋಜನೆ ಯಶಸ್ವಿಯಾಗುವುದು. ಇದನ್ನು ಖಾತರಿ ಪಡಿಸುವ ಉದ್ದೇಶದಿಂದ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಸಚಿವ ಸಂಪುಟ ಸಭೆಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ತೀರ್ಮಾನಿಸಲಾಯಿತು ಎಂದು ಮುಖ್ಯಮಂತ್ರಿ ತಿಳಿಸಿದರು.

ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಮಾತನಾಡಿ, ದೇಶವು ರಾಮರಾಜ್ಯವಾಗಬೇಕೆಂಬ ಪರಿಕಲ್ಪನೆಯಿಂದ ರಾಮಾಯಣವನ್ನು ಮಹರ್ಷಿ ವಾಲ್ಮೀಕಿ ಬರೆದರು. ಸಮಾಜದಲ್ಲಿ ಧರ್ಮ ಉಳಿಯಬೇಕು ಹಾಗೂ ಜೀವನದಲ್ಲಿ ಕಷ್ಟ ಸುಖ, ಸಮಾಜದ ಮೌಲ್ಯವನ್ನು ರಾಮಾಯಣವು ಒಳಗೊಂಡು ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದರು.

ಪರಿಶಿಷ್ಟ ಪಂಗಡಗಳ ಇಲಾಖೆಗೆ ಪ್ರತ್ಯೇಕ ಸಚಿವಾಲಯದ ಬೇಡಿಕೆಯನ್ನು ಮುಖ್ಯಮಂತ್ರಿ ಪೂರೈಸಿದ್ದಾರೆ. ಪರಿಶಿಷ್ಟ ವರ್ಗದ ಸಮುದಾಯದ ರೈತರಿಗಾಗಿ ಕಾಫಿ ಮತ್ತು ಕರಿಮೆಣಸಿನ ಸಮಗ್ರ ಅಭಿವೃದ್ಧಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ. ಬುಡಕಟ್ಟು ಸಮುದಾಯದ ರೈತರು ಕೃಷಿ ಹಾಗೂ ಸಂಬಂಧಿಸಿದ ಚಟುವಟಿಕೆಗಳಲ್ಲಿ ಪಾಲ್ಗೊಂಡ ರೈತರಿಗೆ ತಾಂತ್ರಿಕ ಸಲಹೆ, ಸಾಮಥ್ರ್ಯ ಬಲವರ್ಧನೆ, ಉತ್ತಮ ಗುಣಮಟ್ಟದ ಪರಿಕರಗಳನ್ನು ಪೂರೈಸುವುದು, ಬೆಳೆದ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮುಖಾಂತರ ನೇರ ಮಾರುಕಟ್ಟೆ ಕಲ್ಪಿಸಿ ರೈತ ಉತ್ಪಾದಕ ಸಂಸ್ಥೆಗಳ ಸದಸ್ಯ ರೈತರನ್ನು ಹೆಚ್ಚು ಸಬಲರನ್ನಾಗಿ ಮಾಡುವುದು ಮತ್ತು ರೈತರ ಆರ್ಥಿಕ ಮಟ್ಟವನ್ನು ಬಲಪಡಿಸುವುದಾಗಿದೆ ಎಂದು ಅವರು ತಿಳಿಸಿದರು.

ಪರಿಶಿಷ್ಟ ಜನರ ಯೋಜನೆಗಳಿಗೆ ಏಳು ಸಾವಿರ ಕೋಟಿ ಅನುದಾನ ನೀಡಿದ್ದಾರೆ. ಮೀಸಲಾತಿ ವಿಚಾರದಲ್ಲಿ ಯಾವುದೇ ದ್ವಂದ್ವವಿಲ್ಲದೆ ಒಳ್ಳೆಯ ನಿರ್ಧಾರವನ್ನು ಮುಖ್ಯಮಂತ್ರಿ ತೆಗೆದುಕೊಳ್ಳುತ್ತಾರೆಂಬ ವಿಶ್ವಾಸವಿದೆ. ಪರಿಶಿಷ್ಟ ವರ್ಗಗಳ ಅಭಿವೃದ್ಧಿಗಾಗಿ ಸರಕಾರ ಬದ್ದವಾಗಿದೆ ಎಂದು ಶ್ರೀರಾಮುಲು ಹೇಳಿದರು.

ಪ್ರಶಸ್ತಿ ಪ್ರದಾನ: 2020-21ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಬೆಳಗಾವಿ ವಿಭಾಗದ ಡಾ.ಕೆ.ಆರ್.ಪಾಟೀಲ್(ಸಾಮಾಜಿಕ ಕ್ಷೇತ್ರ), ಬೆಂಗಳೂರು ವಿಭಾಗದ ಡಾ.ಬಿ.ಎಲ್.ವೇಣು(ಸಾಹಿತ್ಯ ಕ್ಷೇತ್ರ), ಮೈಸೂರು ವಿಭಾಗದ ಗೌರಿ ಕೊರಗ(ಸಾಮಾಜಿಕ ಕ್ಷೇತ್ರ), ಕಲಬುರಗಿ ವಿಭಾಗದ ಮಾರಪ್ಪ ನಾಯಕ(ಸಂಘಟನಾ ಕ್ಷೇತ್ರ), ಬೆಂಗಳೂರು ಕೇಂದ್ರ ಸ್ಥಾನದಿಂದ ತಿಪ್ಪೇಸ್ವಾಮಿ ಎಚ್.(ಸಿರಿಗೆರೆ ತಿಪ್ಪೇಶ್) ಸಾಮಾಜಿಕ ಸೇವೆ ಕ್ಷೇತ್ರ.

2021-22ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಬೆಂಗಳೂರು ವಿಭಾಗದ ಕೆ.ಸಿ.ನಾಗರಾಜು(ಸಾಮಾಜಿಕ ಕ್ಷೇತ್ರ), ಬೆಳಗಾವಿ ವಿಭಾಗದ ಲಕ್ಷ್ಮೀ ಗಣಪತಿ ಸಿದ್ದಿ(ಇತರೆ ಕ್ಷೇತ್ರ), ಮೈಸೂರು ವಿಭಾಗದ ಪ್ರೊ.ಎಸ್.ಆರ್.ನಿರಂಜನ(ಶಿಕ್ಷಣ ಕ್ಷೇತ್ರ), ಕಲಬುರಗಿ ವಿಭಾಗದ ಭಟ್ಟಹಳ್ಳಿ ಗೂಳಪ್ಪ(ಇತರೆ ಕ್ಷೇತ್ರ), ಬೆಂಗಳೂರು ಕೇಂದ್ರ ಸ್ಥಾನ ವೈ.ಅಶ್ವತ್ಥರಾಮಯ್ಯ(ಸಮಾಜ ಸೇವೆ ಕ್ಷೇತ್ರ), ಕಲಬುರಗಿ ವಿಭಾಗ ಬಿ.ಎಸ್. ಜಂಭಯ್ಯ ನಾಯಕ ಸಮಾಜ ಸೇವೆ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕøತರಿಗೆ, ಪ್ರಶಸ್ತಿ ಫಲಕ, 20 ಗ್ರಾಂ ಚಿನ್ನದ ಪದಕ ಹಾಗೂ 5 ಲಕ್ಷ ನಗದು ಮೊತ್ತವನ್ನು ನೀಡಲಾಯಿತು.

ಇದೇ ಸಂದರ್ಭದಲ್ಲಿ ಬನಶಂಕರಿ 6ನೇ ಹಂತದ ಬಡಾವಣೆಯಲ್ಲಿನ ವಾಲ್ಮೀಕಿ ಭವನವನ್ನು ವಚ್ರ್ಯುವಲ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲೆ ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿಯವರು ಸಾನಿಧ್ಯ ವಹಿಸಿ ಮಾತನಾಡಿದರು.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ.ರಾಮಚಂದ್ರ, ಜಂಗಲ್ ಲಾಡ್ಜಸ್ ಅಧ್ಯಕ್ಷ ಅಪ್ಪಣ್ಣ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ನಾಗಾಂಬಿಕಾದೇವಿ ಮತ್ತು ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
 
ಕಾಫಿ, ಜೇನು, ಕರಿಮೆಣಸು ಸೇರಿದಂತೆ ಇನ್ನಿತರ ಬುಡಕಟ್ಟು ಉತ್ಪನ್ನಗಳನ್ನು ಬಿಡುಗಡೆ ಮಾಡಿದ ಮುಖ್ಯಮಂತ್ರಿ, ರೈತ ಉತ್ಪಾದಕರ ಸಂಸ್ಥೆಗಳಾದ ನಾಗಪುರ ಬುಡಕಟ್ಟು ರೈತ ಉತ್ಪಾದಕರ ಕಂಪನಿ, ಶೆಟ್ಟಹಳ್ಳಿ ಹಾಗೂ ಹೆಬ್ಬಾಳದ ಬುಡಕಟ್ಟು ರೈತ ಉತ್ಪಾದಕರ ಕಂಪನಿ, ಬಸವನಗಿರಿ ಬುಡಕಟ್ಟು ರೈತ ಉತ್ಪಾದಕರ ಕಂಪನಿ, ಮಾಸ್ತಿ ಗುಡಿ ಬುಡಕಟ್ಟು ರೈತ ಉತ್ಪಾದಕರ ಕಂಪನಿಗಳನ್ನು ಉದ್ಘಾಟಿಸಿದರು. ಅಲ್ಲದೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಾಮಾಜಿಕ ಮಾಧ್ಯಮದ ಫೇಸ್ ಬುಕ್, ಟ್ವಿಟ್ಟರ್, ಇನ್‍ಸ್ಟಾಗ್ರಾಮ್, ಯೂಟ್ಯೂಬ್ ಚಾನಲ್‍ಗೆ ಚಾಲನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News