ಚಿಕ್ಕಮಗಳೂರು ಅರಣ್ಯಾಧಿಕಾರಿಗೆ 'ಪರಿಸರ ಸೇನಾನಿ' ಪ್ರಶಸ್ತಿ

Update: 2021-10-20 16:52 GMT

ಚಿಕ್ಕಮಗಳೂರು: ನ್ಯಾಟ್‍ವೆಸ್ಟ್ ಗ್ರೂಪ್ ಇಂಡಿಯಾ ಸಂಸೈಯು ಬುಧವಾರ ನ್ಯಾಟ್‍ವೆಸ್ಟ್ ಗ್ರೂಪ್ ಅರ್ಥ್ ಹೀರೋಸ್ ಪ್ರಶಸ್ತಿ'ಗಳ 11ನೇ ಆವೃತ್ತಿಯ ಪುರಸ್ಕೃತರನ್ನು ಘೋಷಿಸಿದ್ದು, ಚಿರತೆಗಳ ಸಂರಕ್ಷಣೆಗೆ ಸಮರ್ಪಣಾ ಭಾವದಿಂದ ಕೆಲಸ ಮಾಡಿರುವ ಜಿಲ್ಲೆಯಲ್ಲಿ ಈ ಹಿಂದೆ ವಲಯ ಅರಣ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಶಿಲ್ಪಾ ಎಸ್.ಎಲ್ ಅವರನ್ನು ಪರಿಸರ ಸೇನಾನಿ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಪ್ರಶಸ್ತಿ ವಿತರಣೆಯ ವರ್ಚುವಲ್ ಸಮಾರಂಭದ ಮುಖ್ಯ ಅತಿಥಿಯಾಗಿದ್ದ ಅಳಿವಿನಂಚಿನಲ್ಲಿರುವ ಪ್ರಾಣಿ ಮತ್ತು ಸಸ್ಯ ಸಂಕುಲಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ವ್ಯವಹಾರದ ಪ್ರಧಾನ ಕಾರ್ಯದರ್ಶಿ ಐವೊನೆ ಹಿಗುಯುರೊ ಎಂಟು ಮಂದಿ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಿದರು.

ಈ ವಾರ್ಷಿಕ ಪ್ರಶಸ್ತಿಗಳು ಭಾರತದಾದ್ಯಂತ ವ್ಯಕ್ತಿಗಳು ಮತ್ತು ಸಂಸ್ಥೆಗಳ ಪ್ರಯತ್ನಗಳನ್ನು ಗುರುತಿಸುವ ರಾಷ್ಟ್ರೀಯ ಉಪಕ್ರಮವಾಗಿವೆ. ಸಮಾಜ ಮತ್ತು ಪ್ರಕೃತಿಯ ನಡುವಣ ಉತ್ತಮ ಬಾಂಧವ್ಯಕ್ಕಾಗಿ ದೇಶದ ಸಮೃದ್ಧ ಜೀವವೈವಿಧ್ಯ ರಕ್ಷಿಸುವ ಮತ್ತು ಸಂರಕ್ಷಿಸುವ ಮೂಲಕ ಹವಾಮಾನ ವೈಪರೀತ್ಯದ ಪ್ರತಿಕೂಲ ಪರಿಣಾಮಗಳಿಗೆ ಕಡಿವಾಣ ಹಾಕಲು ಅವಿರತವಾಗಿ ಶ್ರಮಿಸುತ್ತಿರುವವರ ಸಾಧನೆ ಗುರುತಿಸಿ ಸನ್ಮಾನಿಸಲಾಗುತ್ತಿದೆ.

ವೃತ್ತಿ ಬಗ್ಗೆ ಪ್ರೀತಿ - ಅಭಿಮಾನ ಹೊಂದಿರುವ, ಸಮರ್ಪಣಾಭಾವ ಮತ್ತು ನಿರ್ಭೀತ ಸ್ವಭಾವದ ಶಿಲ್ಪಾ ಅವರು, ಚಿಕ್ಕಮಗಳೂರು ವ್ಯಾಪ್ತಿಯಲ್ಲಿನ ಅತಿದೊಡ್ಡ ಅರಣ್ಯ ವಲಯದಲ್ಲಿ ನೇಮಕಗೊಂಡ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ. ವನ್ಯಜೀವಿಗಳನ್ನು ಉಳಿಸುವಲ್ಲಿ ಅವರ ಅವಿರತ ಪ್ರಯತ್ನಕ್ಕಾಗಿ ಕರ್ನಾಟಕ ಸರ್ಕಾರದಿಂದ ನೀಡಲಾಗಿರುವ 2020ರ ಸಾಲಿನ ಮುಖ್ಯಮಂತ್ರಿ ಪದಕ ಪುರಸ್ಕøತರಾಗಿದ್ದಾರೆ.

ಒಬ್ಬ ರೇಂಜ್ ಆಫೀಸರ್ (ಆರೆಫ್‍ಒ) ಆಗಿ, ಅವರು ಅನೇಕ ಅಕ್ರಮ ಕ್ರಷರ್ಗಳು, ಮರ ಕಡಿಯುವವರು, ವನ್ಯಜೀವಿ ವ್ಯಾಪಾರಿಗಳು ಮುಂತಾದವರ ವಿರುದ್ಧ ಕಠಿಣವಾಗಿ ಕಾರ್ಯನಿರ್ವಹಿಸಿದ್ದಾರೆ. ಮೂರು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ, ಅವರು ಸುಮಾರು 180 ಅರಣ್ಯ ಮತ್ತು ವನ್ಯಜೀವಿ ಅಪರಾಧ ಪ್ರಕರಣಗಳನ್ನು ದಾಖಲಿಸಿದ್ದಾರೆ. 100ಕ್ಕೂ ಹೆಚ್ಚು ಕಾಡು ಪ್ರಾಣಿಗಳು, ಪಕ್ಷಿಗಳು ಮತ್ತು ಸರೀಸೃಪಗಳನ್ನು ರಕ್ಷಿಸಿದ್ದಾರೆ. ಮಾನವ-ಚಿರತೆ ಸಂಘರ್ಷವನ್ನು ಪರಿಹರಿಸಲು ಅವರು ಸಮುದಾಯಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆ. ಇಂತಹ ಅಸಾಧಾರಣ ಕೆಲಸದಿಂದ, ವನ್ಯಜೀವಿ ಸಂರಕ್ಷಣೆಗಾಗಿ ಕೆಲಸ ಮಾಡುವ ತಮ್ಮ ಉತ್ಸಾಹದಿಂದ ಅವರು ಅನೇಕ ಅರಣ್ಯ ಅಧಿಕಾರಿಗಳಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಹೊಸ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ವನ್ಯಜೀವಿಗಳ ಸಂರಕ್ಷಣೆಗಾಗಿ ಇರುವ ಅವರ ಬದ್ಧತೆಯು ಇತರರಿಗೆ ಪ್ರೇರಣೆದಾಯಕವಾಗಿದೆ ಎಂದು ಅರಣ್ಯ ಇಲಾಖೆ ಪ್ರಕಟನೆ ಹೇಳಿದೆ

ಶಿಲ್ಪಾ ಅವರು ಈ ಪ್ರಶಸ್ತಿಗೆ ಭಾಜನರಾಗಿರುವ ಕರ್ನಾಟಕದ ಏಕೈಕ ಅಧಿಕಾರಿಯಾಗಿದ್ದಾರೆ. ಉಳಿದಂತೆ ಒಡಿಶಾದ ನಿತೀಶ್ ಕುಮಾರ್ ಹಸಿರು ಸೇನಾನಿ ಪ್ರಶಸ್ತಿಗೆ ಪಾತ್ರರಾಗಿರುವ ಮತ್ತೊಬ್ಬ ಅಧಿಕಾರಿ. ಮಧ್ಯಪ್ರದೇಶದ ಸಾತಹುಲಿ ಸಂರಕ್ಷಿತಾರಣ್ಯ, ಕೇರಳದ ಪರಂಬಿಕುಳ ಹುಲಿ ಸಂರಕ್ಷಣಾ ಪ್ರತಿಷ್ಠಾನ, ಉತ್ತರ ಪ್ರದೇಶದ ಅರುಣಿಮಾ ಸಿಂಗ್, ರಾಜಸ್ಥಾನದ ಅನಿಲ್ ಬಿಷ್ಣೋಯಿ, ಲಡಾಖ್‍ನ ಕರರ್ಮಾ ಸೊನಮ್ ಮತ್ತು ಮಧ್ಯಪ್ರದೇಶದ ಬ್ರಿಜ್‍ಮೋಹನ್‍ಸಿಂಗ್ ರಾಥೋಡ್ ಪ್ರಶಸ್ತಿಗೆ ಭಾಜನರಾಗಿರುವ ಅಧಿಕಾರಿಗಳು, ಸಂಸ್ಥೆಗಳಾಗಿವೆ. ಶಿಲ್ಪಾ ಅವರು ಸದ್ಯ ತುಮಕೂರು ಜಿಲ್ಲೆಯಲ್ಲಿ ಆರ್‍ಎಫ್‍ಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News