ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಒತ್ತು: ಡಾ.ಸಿ.ಎನ್.ಅಶ್ವತ್ಥ ನಾರಾಯಣ

Update: 2021-10-20 17:31 GMT

ಬೆಂಗಳೂರು, ಅ.20: ಪ್ರವಾದಿ ಮುಹಮ್ಮದ್(ಸ) ಅವರ ಸಮಾನತೆ ಮತ್ತು ಸೇವೆಯ ಸಂದೇಶಕ್ಕೆ ಅನುಗುಣವಾಗಿ ರಾಷ್ಟ್ರೀಯ ನೂತನ ಶಿಕ್ಷಣ ನೀತಿ(ಎನ್‍ಇಪಿ)ಯಲ್ಲಿ ಮುಸ್ಲಿಮ್ ಸಮುದಾಯವೂ ಸೇರಿದಂತೆ ಎಲ್ಲ ಅಲ್ಪಸಂಖ್ಯಾತರಿಗೂ ಗುಣಮಟ್ಟದ ಶಿಕ್ಷಣ ಒದಗಿಸುವುದಕ್ಕೆ ಸಾಕಷ್ಟು ಒತ್ತು ಕೊಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ನಗರದ ಪ್ಯಾಲೇಸ್ ಗುಟ್ಟಹಳ್ಳಿಯ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಷನ್ ಏರ್ಪಡಿಸಿದ್ದ ಮೀಲಾದ್ದುನ್ನಬಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಅವರು, ಸಮುದಾಯದ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಶಾಲಾಚೀಲಗಳನ್ನು ವಿತರಿಸಿ ಮಾತನಾಡಿದರು.

`ವಿಶೇಷವಾಗಿ ಮುಸ್ಲಿಮ್ ಸಮುದಾಯದಲ್ಲಿ ಶಾಲೆಗೆ ಬರುವವರ ಸಂಖ್ಯೆ ಕಡಿಮೆ ಇದೆ. ಬಂದರೂ ಅರ್ಧದಲ್ಲೇ ಬಿಟ್ಟು ಹೋಗುವವರ ಸಂಖ್ಯೆ ಹೆಚ್ಚು. ಎನ್‍ಇಪಿ ಇದರ ಬಗ್ಗೆ ಗಮನ ಹರಿಸಿದ್ದು, ಸಮುದಾಯದ ಹೆಚ್ಚಿನ ಮಕ್ಕಳು ಶಾಲೆಗಳತ್ತ ಬರುವಂತೆ ಸೂಕ್ತ ಕ್ರಮಗಳನ್ನು ಕೈಗಳ್ಳಲಾಗುತ್ತಿದೆ. ಪ್ಯಾಲೇಸ್ ಗುಟ್ಟಹಳ್ಳಿಯಲ್ಲಿರುವ ಸರಕಾರಿ ಶಾಲೆಯಲ್ಲಿ ಅತ್ಯುತ್ತಮ ಸೌಲಭ್ಯಗಳನ್ನು ಮತ್ತು ಗುಣಮಟ್ಟದ ಶಿಕ್ಷಣವನ್ನು ಒದಗಿಸಲಾಗುವುದು’ ಎಂದು ಅವರು ನುಡಿದರು.

`ಶಿಕ್ಷಣದ ಮೂಲಕ ಅಲ್ಪಸಂಖ್ಯಾತರ ಸಬಲೀಕರಣ ಮಾಡುವುದೇ ನಮ್ಮ ಗುರಿ. ಏಕೆಂದರೆ, ಇದಕ್ಕಿಂತ ಪವಿತ್ರ ಸೇವೆ ಮತ್ತೊಂದಿಲ್ಲ. ಪ್ರವಾದಿ ಮುಹಮ್ಮದ್(ಸ) ಸಾರಿದ ಸಂದೇಶವೂ ಇದೇ ಆಗಿದೆ. ನಮಗೆ ಕೇವಲ ನಿಮ್ಮ ವೋಟುಗಳಷ್ಟೇ ಮುಖ್ಯವಲ್ಲ, ನಿಮ್ಮ ಪ್ರಗತಿಯೇ ನಮ್ಮ ಆದ್ಯತೆ. ಸಮುದಾಯದ ಬಂಧುಗಳು ಕೂಡ ಶಿಕ್ಷಣದತ್ತ ಹೆಚ್ಚು ಗಮನ ಹರಿಸಬೇಕು’ ಎಂದು ಅಶ್ವತ್ಥ ನಾರಾಯಣ ಕರೆ ನೀಡಿದರು.

ಸಮಾರಂಭದಲ್ಲಿ ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆಯ ಅಧ್ಯಕ್ಷ ಸಮೀವುಲ್ಲಾ ಖಾನ್, ಬಿಜೆಪಿ ಮುಖಂಡ ಶಕೀಲ್ ಅಹಮದ್, ಮುಖಂಡರಾದ ಶ್ರೀನಿವಾಸಮೂರ್ತಿ, ಕೇಶವ ಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News