ಚಿಕ್ಕಮಗಳೂರು; ನಿವೇಶನಕ್ಕೆ ಮೀಸಲಿಟ್ಟ ಜಾಗ ಮಂಜೂರಾತಿಗೆ ತಾಲೂಕು ಆಡಳಿತ ನಿರ್ಲಕ್ಷ್ಯ; ಆರೋಪ

Update: 2021-10-21 11:47 GMT

ಚಿಕ್ಕಮಗಳೂರು, ಅ.21: ತಾಲೂಕಿನ ಆಲ್ದೂರು ಪಟ್ಟಣದ ಮೇದರಬೀದಿ ಹಾಗೂ ರೈಸ್‍ಮಿಲ್ ರಸ್ತೆ ಬಡಾವಣೆಯ ನಿವಾಸಿಗಳು ನಿವೇಶನ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಗುರುವಾರ ನಗರದ ತಾಲೂಕು ಕಚೇರಿ ಎದುರು ಧರಣಿ ನಡೆಸಿದರು.

ಆಲ್ದೂರು ಪಟ್ಟಣದ ಮೇದರಬೀದಿ ಹಾಗೂ ರೈಸ್ ಮಿಲ್ ರಸ್ತೆಯ ಬಡಾವಣೆಗಳ ನೂರಾರು ನಿವೇಶನ ರಹಿತರು ನಗರದ ತಾಲೂಕು ಕಚೇರಿ ಆವರಣದಲ್ಲಿ ಸಮಾವೇಶಗೊಂಡು ನಿವೇಶನಕ್ಕಾಗಿ ಜಾಗ ಲಭ್ಯವಿದ್ದರೂ ತಾಲೂಕು ಆಡಳಿತ ನಿವೇಶನ ಜಾಗ ಮಂಜೂರು ಮಾಡುವಲ್ಲಿ ವಿಳಂಬ ಮಾಡುತ್ತಿದೆ ಎಂದು ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ, ಕೂಡಲೇ ಎಲ್ಲ ನಿವೇಶನ ರಹಿತರಿಗೂ ನಿವೇಸನ ಕಲ್ಪಿಸಬೇಕೆಂದು ಆಗ್ರಹಿಸಿದ್ದರು.

ಈ ವೇಳೆ ಮಾತನಾಡಿದ ನಿವೇಶನ ರಹಿತರು, ಚಿಕ್ಕಮಗಳೂರು ತಾಲೂಕು, ಆಲ್ದೂರು ಹೋಬಳಿ ವ್ಯಾಪ್ತಿಯ ಆಲ್ದೂರು ಪಟ್ಟಣ ಮೇದರ ಬೀದಿ ಹಾಗೂ ರೈಸ್‍ಮಿಲ್ ರಸ್ತೆಯ ಬಡಾವಣೆಗಳಲ್ಲಿ ನೂರಾರು ಕುಟುಂಬಗಳಿದ್ದು, ಇಲ್ಲಿರುವ ಅನೇಕ ಕುಟುಂಬಗಳಿಗೆ ನಿವೇಶನ ಸೌಲಭ್ಯ ಇಲ್ಲವಾಗಿದೆ. ಪರಿಣಾಮ ಇಲ್ಲಿನ ಸಂಬಂಧಿಕರ ಮನೆಗಳಲ್ಲೇ 2ರಿಂದ ಮೂರು ಕುಟುಂಬಗಳು ಸಣ್ಣ ಸಣ್ಣ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ನಿವೇಶನ ರಹಿತರಿಗೆ ನಿವೇಶನ ಸೌಲಭ್ಯ ಕಲ್ಪಿಸುವಂತೆ ಅನೇಕ ಬಾರಿ ಆಲ್ದೂರು ಗ್ರಾಮ ಪಂಚಾಯತ್‍ಗೆ ಮನವಿ ಸಲ್ಲಿಸಿದ್ದು, ಮನವಿ ಮೇರೆಗೆ ಗ್ರಾಪಂ ವ್ಯಾಪ್ತಿಯ ಸ.ನಂ.289ರಲ್ಲಿರುವ 7.28 ಎಕರೆ ಗೋಮಾಳ ಜಾಗದ ಪೈಕಿ 2.38 ಎಕರೆ ಜಾಗದಲ್ಲಿ ನಿವೇಶನ ರಹಿತರಿಗೆ ನಿವೇಶನ ಕಲ್ಪಿಸಲು ಜಾಗ ಕಾಯ್ದಿರಿಸಿ 4 ವರ್ಷ ಕಳೆದಿದ್ದರೂ ನಿವೇಶನ ಕಲ್ಪಿಸಿಲ್ಲ ಎಂದು ಆರೋಪಿಸಿದರು.

ಗ್ರಾ.ಪಂ ಗುರುತಿಸಿರುವ ಈ ಜಾಗಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯವರು ವರದಿ ನೀಡಿದ್ದು, ಜಾಗ ಕಂದಾಯ ಇಲಾಖೆಯ ಗೋಮಾಳ ಜಾಗವಾಗಿದ್ದು, ಅರಣ್ಯ ಇಲಾಖೆಗೆ ಸೇರಿದ್ದಲ್ಲ ಎಂದು ವರದಿ ನೀಡಿದ್ದಾರೆ. ಆದರೆ ತಾಲೂಕು ಆಡಳಿತ ನಿವೇಶನಕ್ಕೆ ಮೀಸಲಿರಿಸಿರುವ ಜಾಗವನ್ನು ಆಶ್ರಯ ನಿವೇಶನಕ್ಕೆ ಮಂಜೂರು ಮಾಡುವಲ್ಲಿ ನಿರ್ಲಕ್ಷ್ಯವಹಿಸಿದೆ ಎಂದ ನಿವಾಸಿಗಳು, ಕೂಡಲೇ 2.38 ಎಕರೆ ಜಾಗವನ್ನು ಆಶ್ರಯ ನಿವೇಶನಕ್ಕೆ ಮಂಜೂರು ಮಾಡಬೇಕು. ಈ ಮೂಲಕ ಬಡಾವಣೆಗಳ ನಿವೇಶನ ರಹಿತರಿಗೆ ನಿವೇಶನ ಹಂಚಿಕೆಗೆ ಅನುವು ಮಾಡಿಕೊಡಬೇಕು. ತಪ್ಪಿದಲ್ಲಿ ನಿರಂತರವಾಗಿ ಧರಣಿ ಮುಂದುವರಿಸುವುದಾಗಿ ಎಚ್ಚರಿಸಿದರು.

ನಿವೇಶನ ರಹಿತರು ಈ ಸಂಬಂಧದ ಮನವಿ ಪತ್ರವನ್ನು ತಹಶೀಲ್ದಾರ್‍ಗೆ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಡಾ.ಕಾಂತರಾಜ್, ಪರಿಶೀಲಿಸಿ ಕ್ರಮವಹಿಸುವುದಾಗಿ ಭರವಸೆ ನೀಡಿದ್ದರಿಂದ ಧರಣಿಯನ್ನು ಕೈಬಿಡಲಾಯಿತು. ಧರಣಿಯಲ್ಲಿ ಆಲ್ದೂರು ಪಟ್ಟಣದ ಮೇದರಬೀದಿ, ರೈಸ್‍ಮಿಲ್ ಬಡಾವಣೆಗಳ ನೂರಾರು ನಿವೇಶನ ರಹಿತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News