ಕಸಾಪ ಚುನಾವಣೆ: ಶೇಖರಗೌಡ ಮಾಲಿಪಾಟೀಲರಿಂದ ಮತಯಾಚನೆ

Update: 2021-10-21 11:52 GMT

ಮಡಿಕೇರಿ ಅ.21 :  ಕರ್ನಾಟಕ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಾನು ಸ್ಪರ್ಧಿಸಿದ್ದು, ಕೊಡಗಿನ ಜನ ಅಧಿಕ ಮತಗಳನ್ನು ನೀಡುವ ಮೂಲಕ ಜಯ ತಂದು ಕೊಡುವಂತೆ ಕೊಪ್ಪಳ ಕಸಾಪ ಮಾಜಿ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ ಮನವಿ ಮಾಡಿದರು.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಪ್ಪಳ ಜಿಲ್ಲೆಯಲ್ಲಿ 2 ಬಾರಿ ಕಸಾಪ ಜಿಲ್ಲಾಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದು, ನವೆಂಬರ್ 21 ರಂದು ನಡೆಯಲಿರುವ ಪರಿಷತ್ತಿನ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಲಿದ್ದೇನೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವ ಅಭಿಲಾಷೆ ಇದೆ. ಕನ್ನಡ ಅನ್ನದ ಭಾಷೆಯಾಗಿ ಯುವ ಜನಾಂಗಕ್ಕೆ ಉದ್ಯೋಗ ಒದಗಿಸಲು ಪ್ರಯತ್ನಿಸಲಾಗುವುದು. ಪರಿಷತ್ತಿನ ಸದಸ್ಯರು ಹೆಚ್ಚಿನ ಮತ ನೀಡಿ ಜಯಶೀಲನನ್ನಾಗಿಸುವಂತೆ ಮನವಿ ಮಾಡಿದರು.

ಕಸಾಪ ರಾಜ್ಯಾಧ್ಯಕ್ಷನಾದಲ್ಲಿ ತಾಲ್ಲೂಕು ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣ, ಪರಿಷತ್ತಿನ ನಿಬಂಧನೆಯಂತೆ ಕನ್ನಡ ಸಾಹಿತ್ಯ ಪರಿಷತ್ತು ಮಾದರಿ ಕನ್ನಡ ಶಾಲೆ ಸ್ಥಾಪನೆ ಮಾಡುವ ಗುರಿ ಹೊಂದಿರುವುದಾಗಿ ತಿಳಿಸಿದರು. 

 ಪ್ರತಿವರ್ಷ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ವಿವಿಧ ಸಾಹಿತ್ಯ ಸಾಂಸ್ಕøತಿಕ ಸಮಾವೇಶ ಆಯೋಜನೆ, ಪ್ರೌಢ ಶಾಲೆಯಿಂದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಳೆಗನ್ನಡ ಹಾಗೂ ಆಧುನಿಕ ಸಾಹಿತ್ಯದ ಮರು ಓದು, ಕಸಾಪ ಪ್ರಕಟಿಸಿದ ಅಪರೂಪದ ಮೌಲಿಕ ಗ್ರಂಥಗಳ ಮರುಮುದ್ರಣ, ಪರಿಷತ್ತು ಪ್ರಕಟಣೆಗಳ ಡಿಜಿಟಲೀಕರಣ ಹಾಗೂ ಪರಿಷತ್ತು ಪ್ರಕಟಿಸಿದ ಪುಸ್ತಕಗಳ ಆನ್ಲೈನ್ ಮಾರಾಟ, ಜನ ಸಾಮಾನ್ಯ ಸಾಹಿತ್ಯ, ಕನ್ನಡ ಚಳವಳಿ, ರೈತ ಹಾಗೂ ಜನಪರ ಚಳವಳಿ, ಕೈಗಾರಿಕೆ ಮತ್ತು ವಾಣಿಜ್ಯೋದ್ಯಮಗಳ ಕನ್ನಡ ಸಂಘಗಳ ಸಮಾವೇಶ ನಡೆಸುವ ಯೋಜನೆ ಇದೆ ಎಂದು ಶೇಖರಗೌಡ ಮಾಲಿಪಾಟೀಲ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಾಹಿತಿ ಆರ್.ಜಿ ಹಳ್ಳಿ ನಾಗರಾಜ್, ಸಂಘಟಕ ಶಿವಕುಮಾರ್, ಪ್ರಮುಖರಾದ ರಾಣಿ ಮಾಚಯ್ಯ ಹಾಗೂ ವಿಠಲ ನಂಜಪ್ಪ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News