ಅ.30ರೊಳಗೆ ಪಂಚಮಸಾಲಿಗಳಿಗೆ ಮೀಸಲಾತಿ ಕಲ್ಪಿಸಿ: ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಗ್ರಹ

Update: 2021-10-21 13:32 GMT
ಬಸವ ಜಯ ಮೃತ್ಯುಂಜಯ ಸ್ವಾಮೀಜಿ 

ಬೆಂಗಳೂರು, ಅ.21: ನ್ಯಾ.ಸುಭಾಷ್ ಬಿ. ಅಡಿ ನೇತೃತ್ವದ ಮೀಸಲಾತಿ ಪುನರ್ ಪರಿಷ್ಕರಣಾ ಸಮಿತಿಯ ವರದಿಯನ್ನು ಅ.30ರೊಳಗೆ ಪಡೆದು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.

ಗುರುವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಪುನರ್ ಪರಿಷ್ಕರಣೆಗೆ ಸಮಿತಿ ರಚಿಸಲಾಗಿದ್ದು, ಸಮಿತಿ ವರದಿಯ ಹೊರತಾಗಿ ಮೀಸಲಾತಿ ನೀಡಲು ಬರುವುದಿಲ್ಲ. ಮೂರು ತಿಂಗಳೊಳಗೆ ವರದಿ ಪಡೆದು ಮೀಸಲಾತಿ ಒದಗಿಸುವ ಭರವಸೆ ನೀಡಿದ್ದರು. ಕೂಡಲೇ ವರದಿ ಪಡೆದು ಮೀಸಲಾತಿ ಒದಗಿಸಬೇಕೆಂದು ಆಗ್ರಹಿಸಿದರು. 

ಸಿಂದಗಿ, ಹಾನಗಲ್ ಉಪ ಚುನಾವಣೆಗೂ ಮೀಸಲಾತಿಗೂ ಯಾವುದೇ ಸಂಬಂಧವಿಲ್ಲ. ಸರಕಾರದ ಮೇಲೆ ಒತ್ತಡ ಹಾಕಿದರೆ ಮಾತ್ರ ಸರಕಾರ ಕೆಲಸವಾಗಲು ಸಾಧ್ಯ. ಚುನಾವಣೆ ಮುಗಿಯುವವರೆಗೆ ನಾವು ಕಾಯುತ್ತೇವೆ, ಚುನಾವಣೆ ರಾಜಕಾರಣ ಮಾಡಲ್ಲ. ನಂತರ ಎರಡೂ ಕ್ಷೇತ್ರಕ್ಕೆ ಭೇಟಿ ನೀಡುತ್ತೇವೆ ಎಂದು ಸ್ವಾಮೀಜಿ ಹೇಳಿದರು.

ನಾವು ಮೀಸಲಾತಿ ಬೇಡಿಕೆ ಇಟ್ಟ ನಂತರ ವಿವಿಧ ಸಮುದಾಯಗಳು ಮೀಸಲಾತಿಗಾಗಿ ಬೇಡಿಕೆ ಸಲ್ಲಿಸಿವೆ. ನಾವು ಬೇರೆ ಸಮಾಜಗಳನ್ನು ವಿರೋಧಿಸುವುದಿಲ್ಲ. ನಮ್ಮ ಸಮಾಜಕ್ಕೆ ಮೀಸಲಾತಿ ಸಿಗಬೇಕೆಂದು ಆಗ್ರಹಿಸುತ್ತೇವೆ ಎಂದು ತಿಳಿಸಿದರು. 

ಅ.23ರಂದು ಕಿತ್ತೂರು ರಾಣಿ ಚೆನ್ನಮ್ಮ ಉತ್ಸವ ಇದೆ. ನಮ್ಮ ಸಮುದಾಯದವರು ಹೆಚ್ಚಾಗಿ ಪಾಲ್ಗೊಳ್ಳಲಿರುವ ಈ ಉತ್ಸವವನ್ನು 2ಎ ಮೀಸಲಾತಿಗೆ ಆಗ್ರಹಪಡಿಸಿ ಆಚರಿಸಲು ತೀರ್ಮಾನಿಸಲಾಗಿದೆ. ಅಲ್ಲದೆ, ಅ.8ರಿಂದ ಗ್ರಾಮೀಣ ಮಟ್ಟದಲ್ಲಿ ಗ್ರಾಮ ಪ್ರತಿಜ್ಞೆ ಎಂಬ ಚಳವಳಿ ನಡೆಸಲಾಗುತ್ತಿದೆ. ಈ ಮೂಲಕ ಸಮುದಾಯವನ್ನು ಜಾಗೃತಿಗೊಳಿಸಲಾಗುತ್ತಿದೆ ಎಂದು ಹೇಳಿದರು.  

ಮೀಸಲಾತಿ ಚಳವಳಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮುಂಚೂಣಿಯಲ್ಲಿ ಇರುವುದರಿಂದ ಅವರ ವಿರುದ್ಧ ಅಪಪ್ರಚಾರದ ಪ್ರಯತ್ನಗಳು ನಡೆಯುತ್ತಿವೆ. ಇದರ ಬಗ್ಗೆ ಯತ್ನಾಳ್ ಅವರೇ ಉತ್ತರ ಕೊಟ್ಟಿದ್ದು, ನಾನು ಹೆಚ್ಚು ಮಾತನಾಡುವುದಿಲ್ಲ ಎಂದರು.

ಮತ್ತೆ ಅಭಿಯಾನ: 2ಎ ಮೀಸಲಾತಿಗೆ ಹಕ್ಕೊತ್ತಾಯಿಸಿ ಮತ್ತೆ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ದ್ವಿತೀಯ ಅಭಿಯಾನ ಪ್ರಾರಂಭ ಮಾಡುತ್ತಿದ್ದೇವೆ. ಬೆಂಗಳೂರು ಭಾಗದಲ್ಲಿ ಅಭಿಯಾನ ಆರಂಭಿಸುತ್ತಿದ್ದು, ಜನರಿಗೆ ಅರಿವು ಮೂಡಿಸುವ ಕೆಲಸ ನಡೆಯಲಿದೆ. ಸರಕಾರ ಕಾಲಾವಕಾಶ ಕೇಳಿದ್ದರಿಂದ ಅಭಿಯಾನ ಮುಂದುವರೆಸುತ್ತಿದ್ದೇವೆ ಎಂದು ಶ್ರೀಗಳು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News