ಬಡ ಕುಟುಂಬಗಳ ಸ್ವಾಸ್ಥ್ಯರಕ್ಷಣೆಗೆ ಆನ್‍ಲೈನ್ ಜೂಜು ನಿಷೇಧ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Update: 2021-10-21 13:57 GMT

ಹುಬ್ಬಳ್ಳಿ, ಅ. 21: `ಬಡಕುಟುಂಬಗಳ ಸ್ವಾಸ್ಥ್ಯ ಹಾಗೂ ಮನಃಶಾಂತಿಯನ್ನು ಕಾಪಾಡುವ ದೃಷ್ಟಿಯಿಂದ ರಾಜ್ಯದಲ್ಲಿ ಆನ್‍ಲೈನ್ ಗೇಮಿಂಗ್ ಮತ್ತು ಜೂಜಿನ ವಿರುದ್ಧ ಕಠಿಣ ಕಾಯಿದೆಯನ್ನು ಜಾರಿಗೆ ತರಲಾಗಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಗುರುವಾರ ನಗರದ ಹಳೆಯ ಸಿ.ಎ.ಆರ್.ಮೈದಾನದಲ್ಲಿ ಆಯೋಜಿಸಲಾದ ಪೊಲೀಸ್ ಸಂಸ್ಮರಣ ದಿನಾಚರಣೆಯಲ್ಲಿ ಪಾಲ್ಗೊಂಡು ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿ ಮಾತನಾಡಿದ ಅವರು, `ಯುವಕರು ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಲು ನೂತನ ಕಾಯ್ದೆಯನ್ನು ತರಲಾಗಿದೆ. ಗ್ಯಾಂಬ್ಲಿಂಗ್ ಕ್ಲಬ್‍ಗಳ ವಿರುದ್ಧ ಸಶಕ್ತ ಕಾನೂನು ತರಲಾಗಿದೆ ಎಂದು ಹೇಳಿದರು.

`ರಾಷ್ಟ್ರದ ಆಂತರಿಕ ಭದ್ರತೆ ಹಾಗೂ ಶಾಂತಿಪಾಲನೆಗೆ ತಮ್ಮ ಪ್ರಾಣ ತ್ಯಾಗ ಮಾಡಿದ ಪೊಲೀಸ್ ಹುತಾತ್ಮರನ್ನು ಸ್ಮರಿಸುವ ದಿನ ಇದಾಗಿದೆ. ದೇಶದ ಪ್ರಗತಿಗೆ ಶಾಂತಿ ಅವಶ್ಯಕ. ಶಾಂತಿ ಇಲ್ಲದಿದ್ದರೆ ದೇಶದ ಪ್ರಗತಿ ಇಲ್ಲ. ರಾಷ್ಟ್ರದ ಆಂತರಿಕ ಭದ್ರತೆ ಹಾಗೂ ಪ್ರಗತಿಗೆ ಪೊಲೀಸ್ ಸೇವೆ ಅಗತ್ಯ' ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

`ಪೊಲೀಸರಿಗೆ ಕಾನೂನಿನ ಬಲವನ್ನು ನೀಡಿದಾಗ ಅವರು ಸಮರ್ಥವಾಗಿ ಕಾರ್ಯನಿರ್ವಹಣೆ ಮಾಡಲು ಸಾಧ್ಯ. ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್.ಎಸ್.ಎಲ್.)ಗಳನ್ನು ಪ್ರಾದೇಶಿಕ ಹಂತದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಆಫೀಸರ್ ಆನ್‍ಕ್ರೈಮ್ ಹುದ್ದೆಗಳನ್ನು ಸೃಜಿಸಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಪೊಲೀಸರು ಕುಟುಂಬವನ್ನು ಮರೆತು ಹಗಲಿರುಳು ದುಡಿಯುತ್ತಾರೆ. ಪೊಲೀಸರಿಗೆ ದೊರಕಬೇಕಾದ ಸವಲತ್ತುಗಳನ್ನು ನೀಡಲು ರಾಜ್ಯ ಸರಕಾರ ಸಿದ್ಧವಿದೆ ಎಂದರು.

`ಇಲಾಖೆಯಲ್ಲಿ ನನೆಗುದಿಗೆ ಬಿದ್ದ ಹಲವು ಯೋಜನೆಗಳಿಗೆ ಚಾಲನೆ ನೀಡಲಾಗಿದೆ. ಪೊಲೀಸರ ಸೇವೆ ಉತ್ತಮಗೊಳಿಸಲು ಪ್ರಯತ್ನ ಮಾಡಲಾಗಿದೆ. ಹಿರಿಯ ಅಧಿಕಾರಿಗಳ ಹಂತದಲ್ಲಿ ಮಾತ್ರ ಪದೋನ್ನತಿ ಎಂಬ ಭಾವನೆ ಕೆಳಹಂತದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಇತ್ತು. ಆದರೆ, ಕೆಳಹಂತದ ಸಿಬ್ಬಂದಿಗಳಿಗೆ ಪದೋನ್ನತಿ ನೀಡಲಾಗಿದೆ. 16 ಸಾವಿರ ಪೊಲೀಸರ ನೇಮಿಸಿಕೊಳ್ಳಲಾಗುತ್ತಿದೆ. ಆರೋಗ್ಯ ಭಾಗ್ಯ ಯೋಜನೆಯಡಿ ಪೊಲೀಸರು ಚಿಕಿತ್ಸೆ ಪಡೆಯಲು ಅನುದಾನ ಒದಗಿಸಲಾಗಿದೆ. ವೇತನ ಪರಿಷ್ಕರಣೆ ಸೇರಿದಂತೆ ಹಲವು ಸುಧಾರಣೆಗಳನ್ನು ತರಲಾಗಿದೆ' ಎಂದು ಹೇಳಿದರು.

`ಈಗಾಗಲೇ 10 ಸಾವಿರ ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಮುಂದಿನ ವರ್ಷಗಳಲ್ಲಿ 11 ಸಾವಿರ ಮನೆ ನಿರ್ಮಾಣಕ್ಕೆ ಯೋಜಿಸಲಾಗಿದೆ. ಪೊಲೀಸರು ಹೆಣ್ಣು ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಪೊಲೀಸ್ ಠಾಣೆಗಳು ಜನಸ್ನೇಹಿಯಾಗಬೇಕು. ಪ್ರತಿಯೊಂದು ಕಾಲೇಜಿನಲ್ಲಿ ಹೆಣ್ಣುಮಕ್ಕಳಿಗೆ ಸ್ವರಕ್ಷಣೆಗೆ ತರಬೇತಿ ನೀಡಲಾಗುವುದು' ಎಂದು ಅವರು ತಿಳಿಸಿದರು.

`ವಿಶ್ವದ ಹಲವು ರಾಷ್ಟ್ರಗಳು ಆಂತರಿಕ ಕ್ಷೋಭೆ, ಭಯೋತ್ಪಾದಕರ ಕೈಗೆ ಸಿಲುಕಿದೆ, ಅಲ್ಲಿನ ನಾಗರಿಕ ಬದುಕು ಶಾಂತಿಯುತವಾಗಿಲ್ಲ. ದೇಶದ ಎಲ್ಲ ಹಂತದ ಪೊಲೀಸರು ಜನರ ಭಯರಹಿತ ಜೀವನಕ್ಕಾಗಿ ಶ್ರಮ ಪಡುತ್ತಿದ್ದಾರೆ. ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ, ವಿದೇಶದಿಂದ ಎದುರಾಗುವ ಆಂತರಿಕ ಭದ್ರತಾ ಸವಾಲುಗಳನ್ನು ಎದುರಿಸುತ್ತಾರೆ. ನಾಗರಿಕರು ಕಾನೂನು ಕಾಪಾಡುವಲ್ಲಿ ಪೊಲೀಸರಿಗೆ ಸಹರಿಸಬೇಕು' ಎಂದು ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಪೊಲೀಸ್ ಆಯುಕ್ತ ಲಾಭೂರಾಮ್ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿ ದೇಶದಾದ್ಯಂತ ಹುತಾತ್ಮರಾದ ಪೊಲೀಸರ ಹೆಸರುಗಳನ್ನು ವಾಚಿಸಿ, ಗೌರವಿಸಿದರು. 2020ರ ಅಕ್ಟೋಬರ್ 1 ರಿಂದ 2021ರ ಆಗಸ್ಟ್ 31ರ ವರೆಗೆ ದೇಶದಲ್ಲಿ 377 ಪೊಲೀಸರು ಕರ್ತವ್ಯ ಸಮಯದಲ್ಲಿ ಹುತಾತ್ಮರಾಗಿದ್ದಾರೆ. ಕರ್ನಾಟಕದಲ್ಲಿ 16 ಪೊಲೀಸರು ವೀರ ಮರಣ ಹೊಂದಿದ್ದಾರೆ. ಸಹಾಯಕ ಪೊಲೀಸ್ ಆಯುಕ್ತೆ ಅನುಷಾ ಜಿ. ಪೊಲೀಸ್ ಪಥಸಂಚಲನ ತುಕಡಿಯ ಪರೇಡ್ ನೇತೃತ್ವ ವಹಿಸಿದ್ದರು. ಹುತಾತ್ಮರ ನೆನಪಿನಲ್ಲಿ ಮೂರು ಬಾರಿ ವಾಲಿ ಫೈರಿಂಗ್ ಸಿಡಿಸಿ, ರಾಷ್ಟ್ರಗೀತೆ ನುಡಿಸಲಾಯಿತು.

ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ್ ಕಲಬುರ್ಗಿ, ಶಾಸಕ ಪ್ರಸಾದ್ ಅಬ್ಬಯ್ಯ, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪ್ರತಾಪ್ ರೆಡ್ಡಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ನೈರುತ್ಯ ರೈಲ್ವೇ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕುಮಾರ್, ಆರ್‍ಪಿಎಫ್ ಐಜಿಪಿ ಅಲೋಕ್ ಕುಮಾರ್ ಇತರೆ ಗಣ್ಯರು ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News