ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ; ಬೆಳೆ ಸಂರಕ್ಷಿಸಿಕೊಳ್ಳಲು ಕಾಫಿ, ಅಡಿಕೆ ಬೆಳೆಗಾರರು ಪರದಾಟ

Update: 2021-10-21 14:00 GMT

ಚಿಕ್ಕಮಗಳೂರು, ಅ.21: ಜಿಲ್ಲಾದ್ಯಂತ ಬುಧವಾರ ತಡರಾತ್ರಿ ಗುಡುಗು ಸಿಡಿಲು ಸಹಿತ ಸುರಿದ ಭಾರೀ ಮಳೆಯಿಂದ ಅಲ್ಲಲ್ಲಿ ಅನಾಹುತಗಳು ಸಂಭವಿಸಿರುವ ಬಗ್ಗೆ ವರದಿಯಾಗಿದ್ದರೇ, ಗುರುವಾರ ಸಂಜೆ ಸುರಿದ ಮಳೆ ಜನಜೀವನವನ್ನು ಕೆಲ ಹೊತ್ತು ಸ್ತಬ್ಧಗೊಳಿಸಿತ್ತು.

ಜಿಲ್ಲೆಯ ಮಲೆನಾಡು ಸೇರಿದಂತೆ ಬಯಲುಸೀಮೆ ಭಾಗದಲ್ಲೂ ಬುಧವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ಗುರುವಾರ ಸಂಜೆಯೂ ಮಳೆ ಎಡಬಿಡದೆ ಸುರಿಯಿತು. ಧಾರಾಕಾರ ಮಳೆಯಿಂದಾಗಿ ಕಾಫಿ, ಅಡಿಕೆ ಬೆಳೆಗಾರರು ಭಾರೀ ತೊಂದರೆ ಅನುಭವಿಸಿದರು. ಹಳ್ಳಕೊಳ್ಳಗಳಲ್ಲಿ ನೀರು ತುಂಬಿ ಹರಿದ ಪರಿಣಾಮ ತೋಟ, ಹೊಲಗದ್ದೆಗಳಿಗೆ ನೀರು  ನುಗ್ಗಿ ಕಾಫಿ, ಅಡಿಕೆ ಬೆಳೆಗಾರರು ಮತ್ತು ಬಯಲು ಭಾಗದ ರೈತರಲ್ಲಿ ಆತಂಕಕ್ಕೆ ಕಾರಣವಾಗಿತ್ತು.

ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳಾದ ಮೂಡಿಗೆರೆ, ಶೃಂಗೇರಿ, ನರಸಿಂಹರಾಜಪುರ, ಕೊಪ್ಪ, ಕಳಸ ವ್ಯಾಪ್ತಿಯಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಬಯಲು ಸೀಮೆ ತಾಲೂಕುಗಳಾದ ಕಡೂರು, ತರೀಕೆರೆ ಭಾಗದಲ್ಲೂ ಬುಧಾವಾರ ರಾತ್ರಿ ಹಾಗೂ ಗುರುವಾರ ಸಂಜೆ ಭಾರೀ ಮಳೆಯಾಗಿದೆ. 

ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಕೆರೆಕಟ್ಟೆ, ಹಳ್ಳಕೊಳ್ಳಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ಹರಿದಿದ್ದು, ಶುಂಠಿ ಸೇರಿದಂತೆ ತರಕಾರಿ ಬೆಳೆಗಳು ನಾಶವಾಗಿರುವ ಬಗ್ಗೆ ವರದಿಯಾಗಿದೆ. ಬೆಲೆಕುಸಿತ ಸೇರಿದಂತೆ ಹವಮಾನ ವೈಪರೀತ್ಯದಿಂದ ಬೆಳೆಗಳಿಗೆ ಭಾರೀ ಪ್ರಮಾಣದ ಹಾನಿಯಾಗಿರುವ ಮಧ್ಯೆಯೇ ಬುಧವಾರ ಹಾಗೂ ಗುರುವಾರ ಸುರಿದ ಧಾರಾಕಾರ ಮಳೆ ರೈತರು ಕಂಗಲಾಗುವಂತೆ ಮಾಡಿದೆ.
ಚಿಕ್ಕಮಗಳೂರು ನಗರದ ಮಧುವನ ಲೇಔಟ್‍ನಲ್ಲಿ ಹಳ್ಳಕ್ಕೆ ನಿರ್ಮಿಸಿದ್ದ ಸೇತುವೆಯೊಂದು ಗುರುವಾರ ಸಂಜೆ ಸುರಿದ ಮಳೆಗೆ ಕುಸಿದಿದೆ, ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಚಿಕ್ಕಮಗಳೂರು ತಾಲೂಕಿನ ಹೊನ್ನಮ್ಮನ ಹಳ್ಳದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದ ಪರಿಣಾಮ ಹಳ್ಳದ ಪಕ್ಕದಲ್ಲಿ ಮಣ್ಣು ಕುಸಿದಿದ್ದು, ಹಳ್ಳಕ್ಕೆ ಇಳಿಯಲು ನಿರ್ಮಿಸಿದ್ದ ಮೆಟ್ಟಿಲುಗಳಿಗೆ ಹಾನಿಯಾಗಿದೆ.

ಬುಧವಾರ ಹಾಗೂ ಗುರುವಾರ ರಾತ್ರಿ, ಸಂಜೆ ಸುರಿದ ಮಳೆಗೆ ಜಿಲ್ಲಾದ್ಯಂತ ಶುಂಠಿ, ಅಡಿಕೆ, ಕಾಫಿ, ಭತ್ತದ ಗದ್ದೆಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು, ಫಸಲು ನಾಶವಾಗುವ ಆತಂಕದಲ್ಲಿ ರೈತರು ಮತ್ತು ಬೆಳೆಗಾರರು ದಿನದೂಡುತ್ತಿದ್ದಾರೆ. ಕಾಫಿಬೆಳೆ ಕೊಯ್ಲಿಗೆ ಬಂದಿದ್ದು, ಮಳೆಯಿಂದ ಕಾಫಿ ಬೆಳೆ ಮಣ್ಣು ಪಾಲಾಗುತ್ತಿದೆ. ಅಡಿಕೆ ಕೂಡ ಕೋಯ್ಲಿಗೆ ಬಂದಿದ್ದು, ಮಳೆಯಿಂದ ತೇವಾಂಶ ಹೆಚ್ಚಾಗಿ ಕೊಳೆರೋಗ ವ್ಯಾಪಿಸುವ ಸಾಧ್ಯತೆ ಇದೆ ಎಂಬುದು ಬೆಳೆಗಾರರ ಆತಂಕವಾಗಿದೆ. ಭತ್ತದ ಗದ್ದೆಗಳು ತೆನೆಯೊಡೆಯುತ್ತಿದ್ದು, ಬಾರೀ ಮಳೆಯಿಂದ ತೆನೆ ಜೊಳ್ಳಾಗುವ ಆತಂಕ ವಿದೆ. ಹಳ್ಳಕೊಳ್ಳಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು, ಗ್ರಾಮೀಣ ಪ್ರದೇಶದ ಜನರ ಸಂಚಾರ ಕ್ಕೂ ಅಡ್ಡಿಯಾಗುತ್ತಿದೆ. ಹವಮಾನ ವೈಪರೀತ್ಯದಿಂದ ಜಿಲ್ಲಾದ್ಯಂತ ಬಾರೀ ಮಳೆಯಾಗುತ್ತಿದ್ದು ಜನರ ನಿದ್ದೆಗೆಡಿಸಿದೆ.

ಬುಧವಾರ ತಡರಾತ್ರಿ 2ರಿಂದ3 ಗಂಟೆಗಳ ಕಾಲ ಸುರಿದ ಭಾರೀ ಮಳೆ ಗುರುವಾರ ಸಂಜೆಯವರೆಗೂ ಬಿಡುವು ನೀಡಿತ್ತು. ಸಂಜೆ ಬಳಿಕ ಗುಡುಗು ಸಿಡಿಲು ಸಮೇತ ಭಾರೀ ಮಳೆಯಾಗಿದೆ. ಗುರುವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಬಿಸಿಲಿನ ಧಗೆ ಹೆಚ್ಚಾ ಗಿದ್ದು ಸಂಜೆ ವೇಳೆಗೆ ಧಾರಾಕಾರ ಮಳೆಯಾಗಿದೆ. ಗುರುವಾರ ನಗರದ ರಸ್ತೆಗಳ ಮೇಲೆ ನೀರು ಹರಿದಿದ್ದು, ಸಂಚಾರಕ್ಕೆ ಅಡ್ಡಿಯಾಗಿತ್ತು, ರಸ್ತೆಗಳು ಹಳ್ಳದಂತೆ ಕಂಡು ಬಂದವು. ಇನ್ನೂ ಎರಡು ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸೂಚನೆ ಹವಮಾನ ಇಲಾಖೆ ನೀಡಿದ್ದು, ಪರಿಣಾಮ ಬೆಳೆಗಾರರು ಕಂಗಲಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News