ಬಿಜೆಪಿ ಸರಕಾರಗಳಿಂದ ರೈತರಿಗೆ ವಂಚನೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

Update: 2021-10-21 14:19 GMT
photo: twitter

ಹಾನಗಲ್, ಅ.21: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ ಎಂದಿದ್ದರು. ನಿಮ್ಮ ಆದಾಯ ದುಪ್ಪಟ್ಟು ಆಗಿದೆಯಾ? ಇಲ್ಲ ಎಂದು ನೀವೇ ಹೇಳುತ್ತಿದ್ದೀರಿ. ರೈತನಿಗೆ ಸಂಬಳ, ಪಿಂಚಣಿ, ನಿವೃತ್ತಿ, ಲಂಚ ಯಾವುದೂ ಇಲ್ಲ. ಅವರ ಬದುಕನ್ನು ಹಸನ ಮಾಡುತ್ತೇವೆ ಎಂದಿದ್ದ ಬಿಜೆಪಿಗರು ರೈತರಿಗೆ ಯಾವ ಸಹಾಯ ಮಾಡಿದ್ದಾರೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ಗುರುವಾರ ಹಾನಗಲ್ ವಿಧಾನಸಭಾ ಕ್ಷೇತ್ರದ ಹೂಂಕಣದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದಿದ್ದರು. ನಿಮ್ಮ ಊರಿನಲ್ಲಿ ಕನಿಷ್ಠ ಐದು ಜನಕ್ಕಾದರೂ ಉದ್ಯೋಗ ಸಿಕ್ಕಿದೆಯಾ? ಇಲ್ಲ. ಅಚ್ಛೇ ದಿನ್ ಕೊಡುತ್ತೇವೆ ಎಂದಿದ್ದರು. ನಾವು ಅಧಿಕಾರಕ್ಕೆ ಬಂದರೆ ಪೆಟ್ರೋಲ್, ಡೀಸೆಲ್ ಬೆಲೆ 50 ರೂ. ಒಳಗೆ ಇಡುತ್ತೇವೆ ಎಂದಿದ್ದರು. 2013 ರಲ್ಲಿ 50 ರು. ಇದ್ದ ಪೆಟ್ರೋಲ್ ಈಗ 110 ರು. ಆಗಿದೆ. ಇದು ಅಚ್ಛೇ ದಿನನಾ? ಎಂದು ಪ್ರಶ್ನಿಸಿದರು.

2014ರಲ್ಲಿ ಅಡುಗೆ ಅನಿಲದ ಸಿಲಿಂಡರ್ ಬೆಲೆ 410 ರು. ಇತ್ತು. ಈಗ ಅದು 980 ರು. ಆಗಿದೆ. ಇದು ಅಚ್ಛೇ ದಿನಾನ? ಅಡುಗೆ ಎಣ್ಣೆ 99 ರು. ಇತ್ತು. ಈಗ 200 ರು. ಆಗಿದೆ. ಮೋದಿ ಹೇಳಿದಂತೆ ಪಕೋಡಾ ಮಾರುವುದಾದರೂ ಹೇಗೆ? ಇದು ಈ ಚುನಾವಣೆಯ ಪ್ರಶ್ನೆ. ಜನರ ಖಾತೆಗೆ ನೇರವಾಗಿ ಹಣ ಹಾಕುತ್ತೇನೆ ಎಂದಿದ್ದರು. ಯಾರ ಖಾತೆಗಾದರೂ ಹಣ ಹಾಕಿದರಾ? ಎಂದು ಶಿವಕುಮಾರ್ ಕೇಳಿದರು.

ಹೋಗಲಿ ಬೆಲೆ ಹೆಚ್ಚಾದ ರೀತಿಯಲ್ಲೇ ನಿಮ್ಮ ಆದಾಯವೇನಾದರೂ ಹೆಚ್ಚಿತಾ? ಗೊಬ್ಬರದ ಬೆಲೆ ಹೆಚ್ಚಾಗಿದೆ. ರಸಗೊಬ್ಬರ ಸಚಿವರು ರಾಜ್ಯದವರು. ಅವರು ಏನಾದರೂ ಬೆಲೆ ಕಡಿಮೆ ಮಾಡಿದ್ದಾರಾ? ಇಲ್ಲ. ಬದಲಿಗೆ ಗೊಬ್ಬರ ಕಾಳಸಂತೆಯಲ್ಲಿ ಮಾರಾಟವಾಗುವಂತೆ ಮಾಡಿದ್ದಾರೆ ಎಂದು ಅವರು ಕಿಡಿಗಾರಿದರು.

ಸಿದ್ದರಾಮಯ್ಯ ಸರಕಾರವಿದ್ದಾಗ, ಹಿಂದೆ 3 ಗಂಟೆಗಳ ಕಾಲ ನೀಡುತ್ತಿದ್ದ ವಿದ್ಯುತ್ ಅನ್ನು 7 ಗಂಟೆಗೆ ಹೆಚ್ಚಿಸಿದೆವು. ಒಂದು ದಿನವಾದರೂ ನಿಮಗೆ ವಿದ್ಯುತ್ ಕೊರತೆ ಆಗಿತ್ತಾ? ಈಗ ಕೇಂದ್ರದಲ್ಲಿ ರಾಜ್ಯದ ಸಂಸದರಾದ ಪ್ರಹ್ಲಾದ್ ಜೋಶಿ ಅವರೇ ಕಲ್ಲಿದ್ದಲು ಸಚಿವರಾಗಿದ್ದು ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆ ಮಾಡಲು ಆಗುತ್ತಿಲ್ಲ. ಪರಿಣಾಮ ಕರ್ನಾಟಕ ಕತ್ತಲಲ್ಲಿ ಮುಳುಗಲಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ ಎಂದು ಶಿವಕುಮಾರ್ ಹೇಳಿದರು.

ನಿಮಗೆ ಸಹಾಯ ಮಾಡಲು ಸಾಧ್ಯವಾಗದಿದ್ದ ಮೇಲೆ ಬಿಜೆಪಿಗೆ ನೀವು ಯಾಕೆ ಮತ ಹಾಕಬೇಕು? ಈ ಚುನಾವಣೆಯಲ್ಲಿ ರಾಜ್ಯದ ಜನರ ಸಂಕಷ್ಟದ ಬಗ್ಗೆ ಚರ್ಚೆಯಾಗುತ್ತಿಲ್ಲ. ಕೋವಿಡ್ ಸಂದರ್ಭದಲ್ಲಿ 5 ವೆಂಟಿಲೇಟರ್ ಗಳು ಇಲ್ಲಿದ್ದವು. ಆದರೆ ಅದನ್ನು ಮುಖ್ಯಮಂತ್ರಿಗಳಾಗಲಿ, ಆರೋಗ್ಯ ಸಚಿವರಾಗಲಿ, ವೈದ್ಯಾಧಿಕಾರಿ ಗಳಾಗಲಿ ಚಾಲನೆ ಮಾಡಲು ಕಾಳಜಿ ವಹಿಸಲಿಲ್ಲ. ವೆಂಟಿಲೇಟರ್ ಚಾಲನೆ ಮಾಡಲಿಲ್ಲ, ಔಷಧಿ ನೀಡಲಿಲ್ಲ ಎಂದು ಅವರು ದೂರಿದರು.

ಒಬ್ಬ ರೈತನಿಗೂ ಪರಿಹಾರ ತಲುಪಿಲ್ಲ. ಇದೇ ಜಿಲ್ಲೆಯವರೇ ಕೃಷಿ ಸಚಿವರಿದ್ದಾರೆ. ಯಾರಿಗೂ ಪರಿಹಾರ ಕೊಡಿಸಿಲ್ಲ. ಬೆಂಬಲ ಬೆಲೆ ಯಾರಿಗೂ ಸಿಕ್ಕಿಲ್ಲ. ಶಿವಕುಮಾರ್ ಉದಾಸಿ, ಬೊಮ್ಮಾಯಿ, ಸಜ್ಜನ್ ಬಂದು ನಿಮ್ಮ ಕಷ್ಟ ಕೇಳಿ ಸಹಾಯ ಮಾಡಿದರಾ? ಇಲ್ಲ. ರೈತರಿಂದ ಚಾಲಕರವರೆಗೂ, ಬಟ್ಟೆ ಒಗೆಯುವವನಿಂದ ಬಟ್ಟೆ ಹೊಲಿಯುವವನಿಗೆ, ಸವಿತ ಸಮಾಜ, ನೇಕಾರರು, ಕಾರ್ಮಿಕರಿಗೆ 5 ಸಾವಿರ ನೀಡುವುದಾಗಿ ಘೋಷಿಸಿದರು. ಅದ್ಯಾವುದು ಜನರನ್ನು ತಲುಪಿಲ್ಲ. ಹಾಗಾದರೆ ಜನ ಇವರಿಗೆ ಯಾಕೆ ಮತ ನೀಡಬೇಕು? ಎಂಬುದು ದೊಡ್ಡ ಪ್ರಶ್ನೆ ಎಂದು ಶಿವಕುಮಾರ್ ಹೇಳಿದರು.

ಈ ಚುನಾವಣೆಯಲ್ಲಿ ಸರಕಾರಕ್ಕೆ ಉತ್ತರ ನೀಡಲು ನಿಮಗೆ ಅವಕಾಶ ಸಿಕ್ಕಿದೆ. ಪ್ರಜಾಪ್ರಭುತ್ವದಲ್ಲಿ ಮತದಾರನೇ ಮಾಲಕ. ನಿಮ್ಮ ಕೈಯಲ್ಲಿ ನಮ್ಮನ್ನು, ಮಾನೆ ಅವರನ್ನು ಹಾಗೂ ಬೊಮ್ಮಾಯಿ ಅವರನ್ನು ಗೆಲ್ಲಿಸುವ ಶಕ್ತಿಯೂ ಇದೆ. ಸೋಲಿಸುವ ಶಕ್ತಿಯೂ ಇದೆ. ಬೊಮ್ಮಾಯಿ, ಸಜ್ಜನ್ ನಿಮಗೆ ಏನಾದರೂ ಸಹಾಯ ಮಾಡಿದ್ದರೆ ನೀವು ಅವರಿಗೆ ಬೆಂಬಲ ನೀಡಬಹುದಿತ್ತು. ಆದರೆ ಮಾನೆಗೆ ಅಧಿಕಾರ ಇಲ್ಲ. ಆದರೂ ನಿಮಗೆ ಕಷ್ಟಕಾಲದಲ್ಲಿ ಸಾಧ್ಯವಾದಷ್ಟು ನೆರವಾಗಿ ಋಣ ತೀರಿಸಿದ್ದಾರೋ ಇಲ್ಲವೋ? ನೀವು ಅವರ ಕೈ ಹಿಡಿಯುತ್ತೀರೋ ಇಲ್ಲವೋ? ಎಂದು ಅವರು ಕೇಳಿದರು.

ಕಳೆದ ಬಾರಿ ಮಾನೆ ಅವರು 5 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಹೀಗಾಗಿ ನೀವು ಈ ಬಾರಿ ಅವರನ್ನು 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಬೇಕು. ಅದಕ್ಕಾಗಿ ನೀವು ಕಾಂಗ್ರೆಸ್‍ಗೆ ಮತ ಹಾಕುವುದರ ಜತೆಗೆ ಇನ್ನು ಐದು ಜನ ಕಾಂಗ್ರೆಸ್‍ಗೆ ಮತ ಹಾಕುವಂತೆ ಮಾಡಬೇಕು. ಇಡೀ ರಾಷ್ಟ್ರ ನಿಮ್ಮ ತೀರ್ಪನ್ನು ಎದುರು ನೋಡುತ್ತಿದೆ ಎಂದು ಶಿವಕುಮಾರ್ ಹೇಳಿದರು.

ಈ ಕ್ಷೇತ್ರದಲ್ಲಿ ಹಂಚಲು ಐದಾರು ಜನ ಮಂತ್ರಿಗಳು ಚೀಲದಲ್ಲಿ ಹಣ ಹೊತ್ತುಕೊಂಡು ಬಂದಿದ್ದಾರೆ. ಅವರು ಎಷ್ಟು ಹಣ ಕೊಟ್ಟರೂ ಬೇಡ ಎನ್ನಬೇಡಿ. ಮೊನ್ನೆ ಮಸ್ಕಿಯಲ್ಲಿ ನಡೆದ ಚುನಾವಣೆಯಲ್ಲಿ ವಿಜಯೇಂದ್ರ ಹೆಸರು ಹೇಳಿಕೊಂಡು ಹಣ ಹಂಚಿದ್ದರು. ನಾನು ಆ ಹಣ ಬಿಡಬೇಡಿ, ಅದನ್ನು ಪಡೆದು ಕಾಂಗ್ರೆಸ್‍ಗೆ ಮತಹಾಕಿ ಎಂದು ಹೇಳಿದ್ದೆ. ಅಲ್ಲಿನ ಜನ ಬಿಜೆಪಿ ನೋಟು ಕಾಂಗ್ರೆಸ್ ಗೆ ವೋಟು ಎಂದು ಹೇಳಿದರು. ನೀವು ಕಾಂಗ್ರೆಸ್‍ಗೆ ಮತ ಹಾಕಿ. ಮಾನೆ ನಿಮ್ಮ ಸೇವಕನಂತೆ ಕೆಲಸ ಮಾಡುತ್ತಾರೆ ಎಂದು ಅವರು ತಿಳಿಸಿದರು.

ಮಕ್ಕಳಿಗೆ 25 ರಿಂದ ಶಾಲೆ ಆರಂಭ ಮಾಡಲಾಗುತ್ತಿದ್ದು, ಬಿಸಿಯೂಟ ನೀಡಲು ಸಿದ್ಧತೆ ಆಗಿಲ್ಲ ಎಂದು ಹೇಳಿದ್ದಾರೆ. ಮಕ್ಕಳಿಗೆ ಊಟ ಕೊಡಲು ಆಗದಿದ್ದರೆ ಈ ಸರಕಾರ ಯಾಕಿರಬೇಕು? ಅಂಗನವಾಡಿ ಆರಂಭ ಇಂದಿರಾ ಗಾಂಧಿ ಅವರ ಕಾರ್ಯಕ್ರಮ, ಬಿಸಿಯೂಟ ಎಸ್.ಎಂ.ಕೃಷ್ಣ ಅವರ ಸರಕಾರದಲ್ಲಿ ಜಾರಿಗೆ ತಂದ ಯೋಜನೆ ಎಂದು ಶಿವಕುಮಾರ್ ಹೇಳಿದರು.

ಸಭೆಯಲ್ಲಿ ಮಾಜಿ ಸಚಿವರಾದ ಎಚ್.ಕೆ.ಪಾಟೀಲ್, ಮನೋಹರ ತಹಶೀಲ್ದಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಅಭ್ಯರ್ಥಿ ಶ್ರೀನಿವಾಸ ಮಾನೆ ಮಾತನಾಡಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News