ಬೆಂಗಳೂರು; ನೈತಿಕ ಪೊಲೀಸ್ ಗಿರಿ ಸಮರ್ಥನೆ: ಮುಖ್ಯಮಂತ್ರಿ ಬೊಮ್ಮಾಯಿ ಹೇಳಿಕೆ ಹಿಂಪಡೆಯಲು ಪಟ್ಟು

Update: 2021-10-21 14:29 GMT

ಬೆಂಗಳೂರು, ಅ.21: ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ತಮ್ಮ, ಮತೀಯ ಗೂಂಡಾಗಿರಿಯನ್ನು ಸಮರ್ಥಿಸಿಕೊಳ್ಳುವ ಹೇಳಿಕೆಯನ್ನು ಹಿಂಪಡೆಯಬೇಕೆಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಗುರುವಾರ ಇಲ್ಲಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಜಮಾಯಿಸಿದ ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು, ಕರ್ನಾಟಕ ಅತೀ ಶೀಘ್ರದಲ್ಲಿ ಉತ್ತರ ಪ್ರದೇಶ ರಾಜ್ಯದಂತಾಗುತ್ತಿದೆ. ಕಳೆದ ಕೆಲವು ವಾರಗಳಲ್ಲಿ ಮತೀಯ ಗೂಂಡಾಗಿರಿ ಘಟನೆಗಳು ಹೆಚ್ವುತ್ತಿದೆ ಎಂದು ಆರೋಪಿಸಿದರು.

ಅಂತರ್-ಜಾತಿ, ಅಂತರ್-ಧರ್ಮದ ಪ್ರೇಮವನ್ನು, ವಿವಾಹಗಳನ್ನು ಅಪರಾಧವೆಂದು ಪರಿಗಣಿಸಿ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಯುವಕರ ಮಧ್ಯೆ ಧರ್ಮದ ಗೋಡೆಗಳನ್ನು ಕಟ್ಡಲಾಗುತ್ತಿದೆ. ಮಹಿಳೆಯರಿಗೆ ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕಿಲ್ಲ ಎಂಬ ಸಂದೇಶವನ್ನೂ ಇದು ನೀಡುತ್ತದೆ ಎಂದು ಪ್ರತಿಭಟನಾಕಾರರು ಹೇಳಿದರು.

ಮುಸ್ಲಿಮರ ಹಾಗೂ ದಲಿತರ ಘನತೆಯ ಮೇಲೆ ಧಕ್ಕೆ ಉಂಟಾಗಿದೆ. ಈ ಪ್ರಕರಣಗಳು ಮಂಡ್ಯದಿಂದ ಮಂಗಳೂರಿನವರೆಗೆ ಕರ್ನಾಟಕದಾದ್ಯಂತ ನಡೆದಿವೆ. ಇದರ ಜೊತೆಗೆ, ಮುಸ್ಲಿಮರು ಮತ್ತು ಕ್ರೈಸ್ತರ ಮೇಲೆ ರಾಜ್ಯದಾದ್ಯಂತ ಹಿಂಸಾತ್ಮಕ ದಾಳಿಗಳನ್ನು ನಾವು ನೋಡುತ್ತಿದ್ದೇವೆ ಎಂದರು.

ಕೊಪ್ಪಳದ ದಾನಪ್ಪ ಅವರು ಅನ್ಯ ಜಾತಿಯ ಹುಡುಗಿಯನ್ನು ಮತ್ತು ಬೆಳಗಾವಿಯ ಅರ್ಬಝ್ ಎಂಬುವವರು ಅನ್ಯ ಧರ್ಮಿಯ ಹುಡುಗಿಯನ್ನು ಪ್ರೀತಿಸಿದ್ದಾರೆಂಬ ಚಿಕ್ಕ ಕಾರಣಕ್ಕೆ ಹಿಂಸಿಸಿ ಕೊಲೆ ಮಾಡಲಾಯಿತು. ಇಳಕಲ್ ಪಟ್ಟಣದಲ್ಲಿ ಮುಸ್ಲಿಮ್ ಹುಡುಗರು ಟೋಪಿ ಧರಿಸಿದ್ದಕ್ಕಾಗಿ ಹೊಡೆದರು ಮತ್ತು ನಂತರ ಹಿಂಸೆಗೆ ಬಲಿಯಾದವರನ್ನು ಬಂಧಿಸಲಾಗಿದೆ ಎಂದು ದೂರಿದರು.

ಪ್ರತಿ ರವಿವಾರ ಚರ್ಚುಗಳು ಮತ್ತು ಪಾದ್ರಿಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಪೊಲೀಸರು ತಮ್ಮಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿ ಕ್ರಿಶ್ಚಿಯನ್ ಮನೆಗಳಿಗೆ ನುಗ್ಗುತ್ತಿದ್ದಾರೆ. ಹಿಂಸೆ ಹೆಚ್ಚಾದಂತೆ ನಾವು ಮೌನವಾಗಿರಲು ಸಾಧ್ಯವಿಲ್ಲ. ಈಗ ಮುಖ್ಯಮಂತ್ರಿಗಳು ಈ ಹಿಂಸೆಯನ್ನು ಬೆಂಬಲಿಸುವ ಹೇಳಿಕೆಯನ್ನು ನೀಡಿದ್ದಾರೆ ಮತ್ತು ಕರ್ನಾಟಕದಲ್ಲಿ ಪರಿಸ್ಥಿತಿ ಹೆಚ್ಚು ಅಪಾಯಕಾರಿಯಾಗಲಿದೆ ಎಂದೂ ಪ್ರತಿಭಟನಾಕಾರರು ತಿಳಿಸಿದರು.

ಪ್ರತಿಭಟನೆ ಬಳಿಕ ಪ್ರಗತಿಪರರಾದ ಕೆ.ಎಸ್.ವಿಮಲಾ, ತನ್ವೀರ್ ಸೇರಿದಂತೆ ಪ್ರಮುಖರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News