ಅಮೀರ್ ಖಾನ್ ನಟನೆಯ ಜಾಹೀರಾತು ಹಿಂದೂಗಳಲ್ಲಿ ಅಶಾಂತಿ ಸೃಷ್ಟಿಸಿದೆ: ಸಂಸದ ಅನಂತಕುಮಾರ ಹೆಗಡೆ

Update: 2021-10-21 14:37 GMT

ಬೆಂಗಳೂರು: ಬೀದಿಗಳಲ್ಲಿ ಪಟಾಕಿ ಸಿಡಿಸದಂತೆ ನಟ ಅಮೀರ್ ಖಾನ್ ಜನರಿಗೆ ಸಲಹೆ ನೀಡುತ್ತಿರುವ ಪ್ರಮುಖ ಟಯರ್ ಕಂಪೆನಿ ಸಿಯಟ್ ಲಿಮಿಟೆಡ್ ಜಾಹೀರಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ನಮಾಝ್ ಹೆಸರಿನಲ್ಲಿ ರಸ್ತೆಗಳನ್ನು ನಿರ್ಬಂಧಿಸುವುದರಿಂದ ಹಾಗೂ  ಆಝಾನ್  ಸಮಯದಲ್ಲಿ ಮಸೀದಿಗಳಿಂದ ಹೊರಸೂಸುವ ಶಬ್ದದಿಂದ ಆಗುವ ಸಮಸ್ಯೆಯನ್ನು ಪರಿಹರಿಸುವಂತೆ ಕಂಪೆನಿಯನ್ನು ಕೇಳಿಕೊಂಡಿದ್ದಾರೆ.

ಕಂಪೆನಿಯ ಎಂಡಿ ಹಾಗೂ  ಸಿಇಒ ಅನಂತ್ ವರ್ಧನ್ ಗೋಯೆಂಕಾಗೆ ಪತ್ರವನ್ನು ಬರೆದಿರುವ ಹೆಗಡೆ "ಹಿಂದೂಗಳಲ್ಲಿ ಅಶಾಂತಿ" ಸೃಷ್ಟಿಸುವ ಇತ್ತೀಚಿನ ಜಾಹೀರಾತನ್ನು ಅರಿತುಕೊಳ್ಳುವಂತೆ ವಿನಂತಿಸಿದರು ಹಾಗೂ  ಭವಿಷ್ಯದಲ್ಲಿ ಸಂಸ್ಥೆಯು "ಹಿಂದೂ ಭಾವನೆಯನ್ನು" ಗೌರವಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

"ನಿಮ್ಮ ಕಂಪೆನಿಯ ಇತ್ತೀಚಿನ ಜಾಹೀರಾತಿನಲ್ಲಿ ಅಮೀರ್ ಖಾನ್ ಅವರು ಜನರಿಗೆ ಬೀದಿಗಳಲ್ಲಿ ಪಟಾಕಿ ಸಿಡಿಸದಂತೆ ಸಲಹೆ ನೀಡುತ್ತಿರುವುದು ಉತ್ತಮ ಸಂದೇಶವನ್ನು ನೀಡುತ್ತಿದೆ. ಸಾರ್ವಜನಿಕ ಸಮಸ್ಯೆಗಳ ಬಗ್ಗೆ ನಿಮ್ಮ ಕಾಳಜಿಗೆ ಚಪ್ಪಾಳೆ ತಟ್ಟಬೇಕು. ಈ ನಿಟ್ಟಿನಲ್ಲಿ ರಸ್ತೆಗಳಲ್ಲಿ ಜನರು ಎದುರಿಸುತ್ತಿರುವ ಇನ್ನೊಂದು ಸಮಸ್ಯೆಯನ್ನು ಪರಿಹರಿಸಲು ನಾನು ನಿಮ್ಮನ್ನು ವಿನಂತಿಸುತ್ತೇನೆ ಮುಸ್ಲಿಮರು ಶುಕ್ರವಾರ ಹಾಗೂ  ಇತರ ಪ್ರಮುಖ ಹಬ್ಬದ ದಿನಗಳಲ್ಲಿ ನಮಾಝ್ ಹೆಸರಿನಲ್ಲಿ ರಸ್ತೆಗಳನ್ನು ನಿರ್ಬಂಧಿಸುತ್ತಾರೆ ಅದನ್ನು ಬಗೆಹರಿಸಿ" ಎಂದು ಹೆಗಡೆ ಹೇಳಿದರು.

ಅಕ್ಟೋಬರ್ 14 ರಂದು ಬರೆದ ಪತ್ರದಲ್ಲಿ, ಮುಸ್ಲಿಮರು ಜನನಿಬಿಡ ರಸ್ತೆಗಳನ್ನು ತಡೆದು ನಮಾಝ್ ಮಾಡುವುದು ಭಾರತದ  ಅನೇಕ ನಗರಗಳಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯ ದೃಶ್ಯವಾಗಿದೆ ಹಾಗೂ ಆ ಸಮಯದಲ್ಲಿ ಆ್ಯಂಬುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳಂತಹ ವಾಹನಗಳು ಕೂಡ ಟ್ರಾಫಿಕ್ ನಲ್ಲಿ ಸಿಲುಕುತ್ತವೆ. ಅಲ್ಲದೆ, ಕಂಪನಿಯ ಜಾಹೀರಾತುಗಳಲ್ಲಿ  ಆಝಾನ್ ನಿಂದ ಆಗುವ ಶಬ್ದ ಮಾಲಿನ್ಯದ ಸಮಸ್ಯೆಯನ್ನು ಎತ್ತಿ ತೋರಿಸುವಂತೆ ವಿನಂತಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News