ಉಡುಪಿಯ ರಾ.ಹೆದ್ದಾರಿ 66ರಲ್ಲಿ 2 ಕಡೆ ವಾಹನ ಮೇಲ್ಸೇತುವೆ ನಿರ್ಮಾಣಕ್ಕೆ 50 ಕೋಟಿ ರೂ. ಮಂಜೂರು: ಸಚಿವೆ ಶೋಭಾ

Update: 2021-10-21 15:25 GMT

ಉಡುಪಿ, ಅ.21: ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಎರಡು ಕಡೆಯಲ್ಲಿ ವಾಹನ ಮೇಲ್ಸೇತುವೆ (ವೆಹಿಕ್ಯುಲರ್ ಓವರ್‌ಪಾಸ್) ರಚನೆಗೆ ಕೇಂದ್ರ ಸರಕಾರ ಒಟ್ಟು 50 ಕೋಟಿ ರೂ. ಅನುದಾನ ಮಂಜೂರು ಮಾಡಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅಂಬಲಪಾಡಿ ಹಾಗೂ ಸಂತೆಕಟ್ಟೆ ಕಲ್ಯಾಣಪುರಗಳಲ್ಲಿ ಸುಗಮ ಸಂಚಾರಕ್ಕಾಗಿ ವಾಹನ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಹಾಗೂ ಸಂಘಸಂಸ್ಥೆಗಳು ಮನವಿ ಸಲ್ಲಿಸಿ ಒತ್ತಾಯಿಸಿದ್ದವು.

ಇದೀಗ ಕ್ಷೇತ್ರದ ಜನರ ಬೇಡಿಕೆ ಹಾಗೂ ಒತ್ತಾಯದಂತೆ ಮನವಿಯನ್ನು ಪುರಸ್ಕರಿಸಿರುವ ಕೇಂದ್ರ ಭೂ ಸಾರಿಗೆ ಸಚಿವರು ಉಡುಪಿ ಜಿಲ್ಲೆಯ 2 ಪ್ರದೇಶಗಳಲ್ಲಿ ಒಟ್ಟು 50 ಕೋಟಿ ರೂ.ಗಳ ವೆಚ್ಚದಲ್ಲಿ ವಾಹನ ಮೇಲ್ಸೇತುವೆ ನಿರ್ಮಿಸಲು ಅನುಮೋದನೆ ನೀಡಿ ಅನುದಾನ ಮಂಜೂರು ಮಾಡಿರುತ್ತಾರೆ ಎಂದು ಶೋಭಾ ತಿಳಿಸಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಂಬಲಪಾಡಿಯಲ್ಲಿ 24.56 ಕೋಟಿ ರೂ. ವೆಚ್ಚದಲ್ಲಿ ಹಾಗೂ ಸಂತೆಕಟ್ಟೆಯಲ್ಲಿ 24.47 ಕೋಟಿ ರೂ. ವೆಚ್ಚದಲ್ಲಿ ವಾಹನ ಮೇಲ್ಸೇತುವೆ ನಿರ್ಮಾಣಗೊಳ್ಳಲಿದೆ. ಈ ಪ್ರದೇಶಗಳು ಹಲವು ಕೂಡು ರಸ್ತೆಗಳನ್ನು ಹೊಂದಿದ್ದು, ವಾಹನ ಸಂಚಾರವೂ ಅಧಿಕವಾಗಿದೆ. ಇವುಗಳನ್ನು ‘ಬ್ಲಾಕ್‌ಸ್ಪಾಟ್ ಝೋನ್’ ಎಂದು ಗುರುತಿಸಲಾಗಿತ್ತು.

ಇದೀಗ ವಾಹನ ಸಂಚಾರಕ್ಕೆ ಹಾಗೂ ಪ್ರಯಾಣಿಕರಿಗೆ ಸಹಾಯಕವಾಗುವಂತೆ ವಾಹನ ಮೇಲ್ಸೇತುವೆ ನಿರ್ಮಾಣ ಮಾಡಲು ಕೇಂದ್ರ ಸರಕಾರ ಅನುದಾನ ಬಿಡುಗಡೆ ಮಾಡಿದೆ. ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಕೆಲಸ ಕಾರ್ಯಗಳು ಆರಂಭಗೊಳ್ಳಲಿದೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದಕ್ಕಾಗಿ ಅವರು ಜಿಲ್ಲೆಯ ಜನತೆಯ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News