ಉಪಚುನಾವಣೆ: ಹಾನಗಲ್ ಕ್ಷೇತ್ರದಲ್ಲಿ ಬೀಡುಬಿಟ್ಟ ಸಿಎಂ, ಸಚಿವರು

Update: 2021-10-21 16:27 GMT
photo: twitter

ಬೆಂಗಳೂರು, ಅ. 21: ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಹಾಗೂಜೆಡಿಎಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿರುವ ಹಾವೇರಿ ಜಿಲ್ಲೆಯ ಹಾನಗಲ್ ಮತ್ತು ವಿಜಯಪುರ ಜಿಲ್ಲೆ ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ(ಅ.30)ಗೆ ದಿನಗಣನೆ ಆರಂಭವಾಗಿದೆ. ತವರು ಜಿಲ್ಲೆ ಹಾನಗಲ್ ಕ್ಷೇತ್ರದಲ್ಲಿ ಬೀಡುಬಿಟ್ಟಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ಷೇತ್ರದ ವಿವಿಧೆಡೆಗಳಲ್ಲಿ ತಮ್ಮ ಸಂಪುಟ ಸಹೋದ್ಯೋಗಿಗಳ ಜತೆ ಮತಬೇಟೆ ನಡೆಸಿದರು.

ಗುರುವಾರ ಬೆಳಗ್ಗೆಯಿಂದಲೇ ಮುಖಂಡರೊಂದಿಗೆ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಬಸವರಾಜ ಬೊಮ್ಮಾಯಿ, `ಕಾಂಗ್ರೆಸ್ ನಾಯಕರು ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳದೆ ವಾದ ಮಾಡಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಆದರೆ, ನಾವು ವಾದ ಮಾಡದೆ ಜನರ ಮನಸ್ಸನ್ನು ಗೆಲ್ಲುವ ಮೂಲಕ ಉಪಉಪಚುನಾವಣೆಯನ್ನು ಗೆಲ್ಲುತ್ತೇವೆ. ಹಾನಗಲ್ ಹಾಗೂ ಸಿಂದಗಿಯಲ್ಲಿ ಜನರ ಪ್ರೀತಿ ವಿಶ್ವಾಸ ಹಾಗೂ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ನಾವು ಚುನಾವಣೆ ಎದುರಿಸುತ್ತಿದ್ದೇವೆ. ಅದೇ ನಮಗೆ ಶಕ್ತಿ' ಎಂದು ನುಡಿದರು.

`ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಉತ್ತರ ಕರ್ನಾಟಕದ ಬಗ್ಗೆ ಇರದ ಕಾಳಜಿ ಈಗ ತೋರಿಸುತ್ತಿದ್ದಾರೆ. ಇವರ ಬಣ್ಣದ ಮಾತುಗಳಿಗೆ ಜನ ಮರುಳಾಗಬಾರದೆಂದು ತೀರ್ಮಾನ ಮಾಡಿದ್ದಾರೆ. ವಾಸ್ತವತೆಯನ್ನು ಕಾಂಗ್ರೆಸ್ ಅರ್ಥಮಾಡಿಕೊಳ್ಳದೆ ವ್ಯರ್ಥವಾಗಿ ವಾದ ಮಾಡುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹಾವೇರಿ ಬಗ್ಗೆ ಯಾವುದೇ ಕಾಳಜಿಯನ್ನು ತೋರಿಸಲಿಲ್ಲ. ಇಲ್ಲಿಯ ಜನತೆಯ ಬಗ್ಗೆ ಇಲ್ಲಿಯ ಆರೋಗ್ಯ ಕ್ಷೇತ್ರದ ಬಗ್ಗೆ ಸ್ವಲ್ಪವೂ ಕಾಳಜಿ ತೋರದೆ ಈಗ ಉ.ಕ.ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿ ಸರಕಾರದ ಅವಧಿಯಲ್ಲಿ ಹಾವೇರಿ ಜಿಲ್ಲೆಗೆ ಮೆಡಿಕಲ್ ಕಾಲೇಜ್ ದೊರಕಿತ್ತು. ನಂತರದಲ್ಲಿ ಬಂದ ಕಾಂಗ್ರೆಸ್ ಸರಕಾರ ಇದಕ್ಕೆ ಆರ್ಥಿಕವಾಗಿ ನೆರವು ನೀಡುತ್ತೇವೆಂದು ಹೇಳಿದ್ದರೆ ಸಾಕಿತ್ತು. ಹಾವೇರಿಯಲ್ಲಿ ಮೆಡಿಕಲ್ ಕಾಲೇಜು ಆರಂಭವಾಗುತ್ತಿತ್ತು. ಆದರೆ ಸಿದ್ದರಾಮಯ್ಯ ಆಸಕ್ತಿ ತೋರಲಿಲ್ಲ' ಎಂದು ಟೀಕಿಸಿದರು.

`ಬಿಜೆಪಿಯನ್ನು ಸೋಲಿಸುವುದು ಅವರ ಕೆಲಸ. ಆದರೆ, ಅದು ಅವರ ಕೈಯಲ್ಲಿ ಇಲ್ಲ. ಜನರು ನಾಯಕತ್ವವನ್ನು ತೀರ್ಮಾನ ಮಾಡುತ್ತಾರೆ. ಜನರ ನಾಡಿಮಿಡಿತ ನಮಗೆ ಗೊತ್ತಿದೆ. ಎರಡು ಕ್ಷೇತ್ರದಲ್ಲಿ ನಮಗೆ ನಿಶ್ಚಿತವಾಗಿ ಜಯ ಸಿಕ್ಕೇ ಸಿಗುತ್ತದೆ. ಹಾನಗಲ್ ಮತಕ್ಷೇತ್ರದಲ್ಲಿ ಶಿವರಾಜ್ ಸಜ್ಜನ್ ಅತ್ಯಧಿಕ ಮತಗಳಿಂದ ಜಯಶಾಲಿಯಾಗಿದ್ದಾರೆ. ಚುನಾವಣೆಯ ನಾಡಿಮಿಡಿತ ನೋಡಿದರೆ ಬಿಜೆಪಿ ದಿನೇ ದಿನೇ ಬೆಂಬಲ ಹೆಚ್ಚುತ್ತಿದೆ. ನಾವು ಜನರ ಪರವಾಗಿ ಇದ್ದೇವೆ ಜನರು ನಮ್ಮ ಪರವಾಗಿದ್ದಾರೆ. ನಿರಂತರವಾಗಿ ಜನರ ಬೇಕು ಬೇಡಗಳನ್ನು ಸ್ಪಂದಿಸುವಂತಹ ಕೆಲಸವನ್ನು ಮಾಡುತ್ತಿದ್ದೇವೆ. ಜನರು ನಮ್ಮನ್ನು ಕೈ ಬಿಡುವುದಿಲ್ಲ, ನಾವು ಜನರನ್ನು ಕೈಬಿಡುವುದಿಲ್ಲ ಎಂದು ಅವರು ಹೇಳಿದರು.

ಡಿ.ಕೆ.ಶಿವಕುಮಾರ್ ಹೇಳಿಕೆಗೆ ಉತ್ತರ: ಎಲ್ಲ ಸಚಿವರು ಉಪ ಚುನಾವಣೆಯಲ್ಲಿ ಬೀಡುಬಿಟ್ಟು ದುಡ್ಡನ್ನು ಹಂಚುತ್ತಿದ್ದಾರೆಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಬಸವರಾಜ ಬೊಮ್ಮಾಯಿ, `ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಅನುಭವದ ಮಾತುಗಳು ಆಡುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ಕುಂದಗೋಳ, ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆಯಲ್ಲಿ ಏನೆಲ್ಲ ಮಾಡಿದ್ದಾರೆಂದು ನಾವು ನೋಡಿದ್ದೇವೆ. ಅವರು ತಮ್ಮ ಅನುಭವ ನಮ್ಮ ಮೇಲೆ ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಯಾವುದೇ ರಣತಂತ್ರ, ಷಡ್ಯಂತ್ರ ಮಾಡಿದರೂ ಯಶಸ್ವಿಯಾಗುವುದಿಲ್ಲ' ಎಂದು ಲೇವಡಿ ಮಾಡಿದರು.

`ದೇಶದಲ್ಲಿ ನಿರಂತರವಾಗಿ ಬೆಲೆ ಏರಿಕೆಯಾಗಿದ್ದು ಕಾಂಗ್ರೆಸ್‍ನವರಿಂದಲೇ, ಸುರ್ಜೇವಾಲಾ ಅವರಿಗೆಲ್ಲ ಜನರ ಬಳಿ ಹೋಗಿ ಗೊತ್ತಿಲ್ಲ. ಇವರು ಎದುರಿಸಿದ ಉಪಚುನಾವಣೆ ಕಥೆ ಏನಾಯ್ತು ಎಂದು ಅವರನ್ನೇ ಕೇಳಬೇಕು. ಪೆಟ್ರೋಲಿಯಂ ಬಾಂಡ್‍ಗಳನ್ನೆಲ್ಲ ಮಾಡಿ ದೇಶದ ಜನರ ಮೇಲೆ ಹಾಕಿದ್ದಾರೆ. ಆರ್ಥಿಕತೆಯನ್ನು ಈ ಹಂತಕ್ಕೆ ತಲುಪಿಸಿ ಇದನ್ನೆಲ್ಲ ಮರೆಮಾಚಲು ಈ ತರದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು. ಸಚಿವರಾದ ಡಾ.ಕೆ.ಸುಧಾಕರ್, ಬಿ.ಎ.ಬಸವರಾಜು, ಮೇಲ್ಮನೆ ಸದಸ್ಯ ರವಿಕುಮಾರ್ ಸೇರಿದಂತೆ ಇನ್ನಿತರ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News