ಅರಣ್ಯ ಹಕ್ಕಿನಡಿ ಆದಿವಾಸಿಗಳಿಗೆ ದೊರಕದ ಮೂಲಭೂತ ಹಕ್ಕು: ಆಶ್ರಮ ಶಾಲೆಗೆ ‘ಬಿರ್ಸಾ ಮುಂಡ’ ಹೆಸರಿಡಲು ಆಗ್ರಹ

Update: 2021-10-21 18:05 GMT

ಮಡಿಕೇರಿ ಅ.21 : ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದು ಒಂದೂವರೆ ದಶಕಗಳು ಸಂದಿದ್ದರೂ, ಆದಿವಾಸಿಗಳಿಗೆ ಮೂಲಭೂತ ಹಕ್ಕುಗಳನ್ನು ನೀಡದೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆದಿವಾಸಿ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ, ನಾಲ್ಕೇರಿ ಅರಣ್ಯದ, ಕೆ.ಬಾಡಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಳೆಕೋವು ಹಾಡಿಯಲ್ಲಿ ನಡೆದ ಅರಣ್ಯ ಹಕ್ಕುಗಳ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಆದಿವಾಸಿ ಪ್ರಮುಖ ಬಿ.ಸಿ.ಕಾಳ ತಮ್ಮ ಸಂಕಷ್ಟ, ದುಃಖ ದುಮ್ಮಾನಗಳನ್ನು ಹಂಚಿಕೊಂಡರು.

ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ ಅಧಿನಿಯಮದಡಿ, ವೈಯಕ್ತಿಕ ಹಕ್ಕಿಗಾಗಿ ಸಲ್ಲಿಸಲಾದ 21 ಅರ್ಜಿಯಲ್ಲಿ ಕೇಳಿರುವಷ್ಟು ಭೂಮಿಯನ್ನು ನೀಡದೆ, ಕೇವಲ ವಾಸಕ್ಕಾಗಿ 0.8 ಸೆಂಟ್ ಜಾಗಕ್ಕೆ  ಮಾತ್ರ ಹಕ್ಕುಪತ್ರ ನೀಡಲಾಗಿದೆ. ಬೇಸಾಯಕ್ಕಾಗಿ ಭೂಮಿಯನ್ನು ಸರ್ವೆ ಮಾಡಿದ್ದರು, ಹಕ್ಕುಪತ್ರವನ್ನು ನೀಡದೆ ಕಾನೂನಿನ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿದರು.

ಇದೇ ಸಂದರ್ಭ ಗ್ರಾಮಸಭೆಯಲ್ಲಿ ವೈಯಕ್ತಿಕ ಹಕ್ಕಿನ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ಪ್ರತಿಕುಟುಂಬಕ್ಕೆ ಬೇಸಾಯಕ್ಕಾಗಿ ತಲಾ ಐದು ಎಕರೆ ಭೂಮಿ ನೀಡುವಂತೆ ಒತ್ತಾಯಿಸಲು ಗ್ರಾಮಸಭೆಯಲ್ಲಿ ನಿರ್ಣಯಿಸಲಾಯಿತು.

ತಿಭಟನೆ ಎಚ್ಚರಿಕೆಯ 

ಸಮುದಾಯದ ಹಕ್ಕಿನನ್ವಯ ಸಲ್ಲಿಸಲಾದ ಕ್ಲೈಮ್ ಫಾರಂಗೆ ಇಲ್ಲಿಯವರೆಗೂ ಸರ್ವೆ ಕಾರ್ಯ ನಡೆಸಿ ಹಕ್ಕುಪತ್ರ ನೀಡದಿರುವ ಬಗ್ಗೆ ಸಭೆಯಲ್ಲಿ ಗಂಭೀರ ಆರೋಪ ಕೇಳಿ ಬಂತು. ಶೀಘ್ರ ಸರ್ವೆ ಕಾರ್ಯ ನಡೆಸದಿದ್ದರೆ ವಲಯ ಅರಣ್ಯಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಾಲ್ಮೀಕಿ ಬೇಡ ಬಿರ್ಸಾಮುಂಡ ಇರಲಿ

ಬುಡಕಟ್ಟು ಕೃಷಿಕರ ಸಂಘದ ಸದಸ್ಯರಾದ ಜೆ.ಎ.ಪುಟ್ಟಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರವು ಆದಿವಾಸಿ ಮಕ್ಕಳು ಶಿಕ್ಷಣ ಪಡೆಯುತ್ತಿರುವ ಗಿರಿಜನ ಆಶ್ರಮ ಶಾಲೆಗಳಿಗೆ ‘ವಾಲ್ಮೀಕಿ ಆಶ್ರಮ ಶಾಲೆ’ ಎಂದು ಮರು ನಾಮಕರಣ ಮಾಡಿರುವುದನ್ನು ವಿರೋಧಿಸಿದರು. ಈ ಹೆಸರನ್ನು ಸರ್ಕಾರ ತಕ್ಷಣ ಹಿಂಪಡೆದು ‘ಬಿರ್ಸಾಮುಂಡ ಆಶ್ರಮ ಶಾಲೆ’ ಅಥವಾ ಗಿರಿಜನ ಆಶ್ರಮ ಶಾಲೆ ಎಂದೇ ಮುಂದುವರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ರಾಜ್ಯ ಮೂಲ ಆದಿವಾಸಿ ವೇದಿಕೆಯ ಉಪಾಧ್ಯಕ್ಷ ಜೆ.ಕೆ.ತಿಮ್ಮ ಮಾತನಾಡಿದರು.  ಸಭೆಯಲ್ಲಿ ಕೆ.ಬಾಡಗ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಪೂಣಚ್ಚ, ನಾಗರಹೊಳೆ ವಲಯ ಅರಣ್ಯ ಅಧಿಕಾರಿಗಳಾದ ಗಿರೀಶ್, ಜೆ.ಕೆ. ತಿಮ್ಮ, ಜೆ.ಎಂ.ಸೋಮಯ್ಯ, ತಾಲ್ಲೂಕು ಪಂಚಾಯ್ತಿ ಸದಸ್ಯ ವೈ.ಎಂ.ಪ್ರಕಾಶ, ಜೆ.ಎ.ಪುಟ್ಟಸ್ವಾಮಿ, ಹಾಡಿಯ ಯಜಮಾನ ಜೆ.ಕೆ.ತಮ್ಮಯ್ಯ ಹಾಗೂ ಹಾಡಿ ನಿವಾಸಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News