ಮುಧೋಳ: ಘಟಪ್ರಭಾ ಕಾಲುವೆಗೆ ಉರುಳಿದ ಕಾರು; ನಾಲ್ವರು ಮೃತ್ಯು

Update: 2021-10-22 07:00 GMT

ಬಾಗಲಕೋಟೆ, ಅ.22: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿಬಿದ್ದ ಪರಿಣಾಮ ನಾಲ್ವರು ಮೃತಪಟ್ಟ ಘಟನೆ ಮುಧೋಳದ ಹಲಕಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿರುವುದು ವರದಿಯಾಗಿದೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಬೀಡಕಿ ಗ್ರಾಮದ ಸುನೀಲ್ ಸದಪ್ಪ ಆರೆಬಿಂಚಿ (24) ಗುಡಮ್ಮನಾಳ ಗ್ರಾಮದ ಮಹಾದೇವಗೌಡ ಶಂಕರಗೌಡ ಪಾಟೀಲ (27), ಮುದೇನಕೊಪ್ಪ ಗ್ರಾಮದ ಎರ್ರಿತಾತಾ ಮೌನೇಶ ಕಂಬಾರ (26) ಹಾಗೂ ರಾಮಾಪುರ ಗ್ರಾಮದ ವಿಜಯ ಶಿವಾನಂದ ಲಟ್ಟಿ (26) ಮೃತಪಟ್ಟವರಾಗಿದ್ದಾರೆ. ಕಾರಿನಲ್ಲಿದ್ದ ಈರಣ್ಣಾ ಘಾಠಿ ಮತ್ತು ಫರಾನಾ ಅತ್ತಿಕಾ ಎಂಬವರು ಈಜಿಕೊಂಡು ದಡ ಸೇರಿದ್ದಾರೆ. ಗಾಯಾಳುಗಳಾಗಿರುವ ಅವರನ್ನು ಮುಧೋಳ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಧೋಳದಿಂದ ರಾಮಾಪುರ ಕಡೆಗೆ ಬರುತ್ತಿದ್ದ ಕಾರು ಕಲ್ಲೊಂದಕ್ಕೆ ಢಿಕ್ಕಿಯಾದ ಪರಿಣಾಮ ರಸ್ತೆ ಬದಿಯಲ್ಲಿದ್ದ ಘಟಪ್ರಭಾ ಕಾಲುವೆಗೆ ಉರುಳಿಬಿದ್ದಿದೆ ಎನ್ನಲಾಗಿದೆ.

ಲೋಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News