ಮಂಗಳೂರು ಗೋಲಿಬಾರ್ ಪ್ರಕರಣ: ಪೊಲೀಸರು ತಪ್ಪಿತಸ್ಥರಲ್ಲ ಎಂದ ಸರಕಾರ

Update: 2021-10-22 12:00 GMT

ಬೆಂಗಳೂರು, ಅ.22: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ನಡೆದ ಗೋಲಿಬಾರ್ ಪ್ರಕರಣದಲ್ಲಿ ಪೊಲೀಸರು ತಪ್ಪಿತಸ್ಥರಲ್ಲ ಎಂದು ಸರಕಾರ ಹೈಕೋರ್ಟ್ ಗೆ ತಿಳಿಸಿದೆ.

ಗೋಲಿಬಾರ್‌ಗೆ ಸಂಬಂಧಿಸಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಸರಕಾರ ಈ ಮಾಹಿತಿ ನೀಡಿದೆ.

ಗೋಲಿಬಾರ್ ಘಟನೆ ಸಂಬಂಧ ಮ್ಯಾಜಿಸ್ಟ್ರೇಟ್  ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಪೊಲೀಸರು ಸೇರಿದಂತೆ ಯಾರೂ ಕೂಡ ತಪ್ಪಿತಸ್ಥರಲ್ಲ ಎಂದು ಮ್ಯಾಜಿಸ್ಟ್ರೇಟ್ ತನಿಖಾ ವರದಿ ಹೇಳಿದೆ. 

ಆ ವರದಿಯನ್ನು ಸರಕಾರ ಪೂರ್ಣ ಪ್ರಮಾಣದಲ್ಲಿ ಒಪ್ಪಿಕೊಂಡಿದೆ ಎಂದು ಸರಕಾರದ ಪರ ವಕೀಲರು ಹೈಕೋರ್ಟ್ ಗೆ ತಿಳಿಸಿದ್ದಾರೆ. ಈ ಬಗ್ಗೆ ಪ್ರಮಾಣಪತ್ರ ಸಲ್ಲಿಸಲು ಸರಕಾರಕ್ಕೆ ಸೂಚಿಸಿ ಹೈಕೋರ್ಟ್ ವಿಚಾರಣೆ ಮುಂದೂಡಿದೆ. 

2019ರ ಡಿ.19ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ನೌಶೀನ್ ಮತ್ತ ಜಲೀಲ್ ಎಂಬಿಬ್ಬರು ಅಮಾಯಕರು ಪೊಲೀಸ್ ಗುಂಡಿಗೆ ಬಲಿಯಾಗಿದ್ದರು. ಪೊಲೀಸರು ಘಟನೆಯಲ್ಲಿ ಕರ್ತವ್ಯ ಪ್ರಜ್ಞೆ ಮರೆತು ನಡೆದುಕೊಂಡಿದ್ದಾರೆ ಎಂಬ ಆಕ್ರೋಶ ಕೇಳಿ ಬಂದಿತ್ತು. ಇದೀಗ ಸರಕಾರ ಎಲ್ಲರಿಗೂ ಕ್ಲೀನ್ ಚಿಟ್ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News