ಬಿಜೆಪಿಗೆ ಅಭಿವೃದ್ಧಿ ಎಂದರೆ ಹಣ ಖರ್ಚು ಮಾಡಿ ಚುನಾವಣೆ ಗೆಲ್ಲೋದು: ಸಿದ್ದರಾಮಯ್ಯ

Update: 2021-10-22 13:13 GMT

ಹುಬ್ಬಳ್ಳಿ, ಅ.22: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗ ಚುನಾವಣೆ ವೇಳೆ ನಾವು ಮಿಷನ್ ಹಾನಗಲ್ ಮಾಡ್ತೀವಿ ಎಂದು ಹೇಳುತ್ತಿದ್ದಾರೆ, ಇಷ್ಟು ದಿನ ಏಕೆ ಹಾನಗಲ್ ಅವರಿಗೆ ಕಂಡಿರಲಿಲ್ಲ? ಬಡವರಿಗೆ ಒಂದು ಮನೆಯಾದ್ರೂ ಕೊಟ್ಟಿದ್ದಾರಾ? ಅಭಿವೃದ್ಧಿ ಎಂದರೆ ಏನು ಗೊತ್ತಾ? ಬರೀ ಹಣ ಖರ್ಚು ಮಾಡಿ ಚುನಾವಣೆ ಗೆಲ್ಲೋದು ಗೊತ್ತು ಅವರಿಗೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಹಾನಗಲ್ ಕ್ಷೇತ್ರಕ್ಕೆ ಏನೆಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೀನಿ ಎಂದು ಹಿಂದಿನ ಶಾಸಕ ಮನೋಹರ್ ತಹಶೀಲ್ದಾರ್ ನ ಕೇಳಿನೋಡಿ. ನಾನು 2400 ಕೋಟಿ ರೂಪಾಯಿ ಅನ್ನು ಕ್ಷೇತ್ರದ ಅಭಿವೃದ್ಧಿಗೆ ನೀಡಿದ್ದೆ, ಈಗಿನ ಸರಕಾರ ಎಷ್ಟು ಹಣ ನೀಡಿದೆ ಹೇಳಲಿ. ಹಾನಗಲ್‍ನಲ್ಲಿ ಸಾಧನಾ ಸಮಾವೇಶ ಮಾಡಿ, ಜನರಿಗೆ ಸರಕಾರದ ಸಾಧನೆಗಳ ಮಾಹಿತಿ ನೀಡಿದ್ದೆ ಎಂದರು.

ಬಿಜೆಪಿ ಪಕ್ಷದಲ್ಲಿ ಒಬ್ಬ ಮುಸ್ಲಿಮ್ ಶಾಸಕ, ಮಂತ್ರಿ ಇಲ್ಲ. ಇದು ಬೇರೆ ಧರ್ಮದ ಬಗ್ಗೆ ದ್ವೇಷ ಮಾಡಿದಂತಲ್ಲವೆ? ನಮ್ಮ ಪಕ್ಷದಲ್ಲಿ ಎಲ್ಲ ಜಾತಿ, ಧರ್ಮಗಳ ಶಾಸಕರಿದ್ದಾರೆ. ಎಲ್ಲ ಜಾತಿ, ಧರ್ಮಗಳನ್ನು ಒಟ್ಟಿಗೆ ಕರೆದುಕೊಂಡು ಹೋಗುವುದೇ ಕಾಂಗ್ರೆಸ್ ಪಕ್ಷದ ಸಿದ್ಧಾಂತ. ಸಂವಿಧಾನ ಬದಲಾವಣೆ ಮಾಡ್ತೀವಿ ಎಂದವರು ಬಿಜೆಪಿಯವರು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಪಕ್ಷದವರು ಹಣ ಹಂಚುತ್ತಿದ್ದಾರೆ ಎಂದು ಜನ ಹೇಳುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳ ಮೇಲೆ ಮತ ಕೇಳಲು ಕಳೆದ ಎರಡೂಕಾಲು ವರ್ಷಗಳಲ್ಲಿ ಯಾವ ಅಭಿವೃದ್ಧಿ ಕೆಲಸಗಳನ್ನು ಸರಕಾರ ಮಾಡಿಲ್ಲ. ಹೀಗಾಗಿ ಹಣ ಹಾಕಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಸುಳ್ಳು ಭರವಸೆ ಕೊಡುವುದರಲ್ಲಿ ಬಿಜೆಪಿಗರು ನಿಸ್ಸೀಮರು. ಮುಖ್ಯಮಂತ್ರಿ ಬೊಮ್ಮಾಯಿ ಬಂದಾಗ ಹಾನಗಲ್ ಪ್ರಚಾರದಲ್ಲಿ ಅಲೆ ಎದ್ದಿಲ್ವಂತ? ಸೋಲಿನ ಭಯದಿಂದ ಏನೇನೊ ಮಾತನಾಡಲು ಆರಂಭಿಸಿದ್ದಾರೆ ಎಂದು ಅವರು ಟೀಕಿಸಿದರು.

ಎರಡೂ ಡೋಸ್ ಕೊರೋನ ಲಸಿಕೆ ಪಡೆದವರು 29 ಕೋಟಿ ಜನ ಅಷ್ಟೇ. 100 ಕೋಟಿ ಲಸಿಕೆ ಹಾಕಿದೀವಿ ಎಂದು ಸಂಭ್ರಮಾಚರಣೆ ಮಾಡಲು ಸರಕಾರ ಹೊರಟಿದೆ. ಆಕ್ಸಿಜನ್, ವೆಂಟಿಲೇಟರ್, ಆಸ್ಪತ್ರೆ, ಆಂಬುಲೆನ್ಸ್, ಚಿಕಿತ್ಸೆ ಸಿಗದೆ ದೇಶದಲ್ಲಿ ಕನಿಷ್ಟ 50 ಲಕ್ಷ ಜನ ಕೊರೋನದಿಂದ ಸತ್ತಿದ್ದಾರೆ. ಇದಕ್ಕೆ ಸರಕಾರದ ನಿಷ್ಕ್ರಿಯತೆ ಕಾರಣ ಎಂದು ಸಿದ್ದರಾಮಯ್ಯ ಹೇಳಿದರು.

ಹಾನಗಲ್‍ನಲ್ಲಿ ಬಿಜೆಪಿ ಸೋಲುತ್ತೆ ಎಂದು ಬಸವರಾಜ ಬೊಮ್ಮಾಯಿ ಮತ್ತು ಮುರುಗೇಶ್ ನಿರಾಣಿ ಅವರಿಗೂ ಗೊತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News