ಕೋವಿಡ್ ಸಂದರ್ಭ ಮೋದಿಯಂತಹ ಪ್ರಧಾನಿ ಸಿಗದಿದ್ದಲ್ಲಿ ದೇಶದ ಪರಿಸ್ಥಿತಿ ಭೀಕರವಾಗಿರುತ್ತಿತ್ತು: ವಿಪ ಉಪಸಭಾಪತಿ ಪ್ರಾಣೇಶ್

Update: 2021-10-22 13:57 GMT

ಚಿಕ್ಕಮಗಳೂರು, ಅ.22: ಕೋವಿಡ್ ಸಂಕಷ್ಟದ ಪರಿಸ್ಥಿತಿ ಹಾಗೂ ವಿರೋಧ ಪಕ್ಷಗಳ ಅಪಪ್ರಚಾರದ ನಡುವೆಯೂ ಕೇಂದ್ರ ಸರಕಾರ 100ಕೋಟಿ ಡೋಸ್ ಕೋವಿಡ್ ಲಸಿಕೆ ವಿತರಣೆ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ. ಇದರ ಕೀರ್ತಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲಬೇಕು. ನರೇಂದ್ರ ಮೋದಿಯಂತಯ ಪ್ರಧಾನಿ ದೇಶಕ್ಕೆ ಸಿಗದಿದ್ದರೇ ದೇಶದ ಜನರ ಸ್ಥಿತಿ ಭೀಕರವಾಗಿರುತ್ತಿತ್ತು ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದ್ದಾರೆ.

ಶುಕ್ರವಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಡೀ ದೇಶ ಹೆಮ್ಮೆಪಡುವಂತೆ ತಮ್ಮ ಜವ ಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಮಹಾಮಾರಿ ಕೋವಿಡ್ ಸೋಂಕು ಇಡೀ ದೇಶವನ್ನು ಆವರಿಸಿದ್ದಾಗ ಕಾಯಿಲೆಯಿಂದ ಮುಕ್ತಿ ಸಿಗಲ್ಲ ಎನ್ನಲಾಗುತ್ತಿತ್ತು. ಈ ವೇಳೆ ಜೀವಕಳೆದುಕೊಳ್ಳುವ ಭೀತಿ ಎದುರಾಗಿದ್ದಾಗ ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಮೋದಿ ಮಾಡಿದರು. ಕೋವಿಡ್‍ಗೆ ದೇಶೀಯವಾಗಿ ಲಸಿಕೆ ಕಂಡು ಹಿಡಿಯುವ ಪ್ರಯತ್ನ ಮಾಡಿ ಯಶಸ್ವಿಯಾದರು. ಸದ್ಯ ಜಗತ್ತೇ ಹುಬ್ಬೇರಿಸುವಂತಹ ಸಾಧನೆಯನ್ನು ಮೋದಿ ಮಾಡಿದ್ದಾರೆ ಎಂದರು.

ಕೇಂದ್ರ ಸರಕಾರ ಕೋವಿಡ್ ಲಸಿಕೆ ವಿತರಣೆ ಪ್ರಾರಂಭಿಸಿದ್ದಾಗ ವಿರೋಧ ಪಕ್ಷದ ನಾಯಕರು ಇದು ಮೋದಿ ವ್ಯಾಕ್ಸಿನ್, ಲಸಿಕೆ ಹಾಕಿಸಿಕೊಂಡರೆ ಜೀವ ಕಳೆದುಕೊಳ್ಳಬೇಕಾಗುತ್ತದೆ. ಸಂತಾನ ಹರಣವಾಗುತ್ತದೆ ಎಂದು ಅಪಪ್ರಚಾರ ಮಾಡಿ ಕೆಟ್ಟ ರಾಜಕಾರಣ ಮಾಡಿದರು. ಆದರೆ ಪ್ರಧಾನಿ ಮೋದಿ ಎಲ್ಲಾ ಅಡೆತಡೆಗಳನ್ನು ಎದುರಿಸಿ ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು, ವಿರೋಧ ಪಕ್ಷದವರ ಹೇಳಿಕೆಗಳನ್ನು ಸಕರಾತ್ಮಕವಾಗಿ ತಗೆದುಕೊಂಡು 100 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಿದ್ದಾರೆ. ಇದನ್ನು ವಿರೋಧ ಪಕ್ಷಗಳು ಪ್ರಶಂಸಿಸುವುದನ್ನು ಬಿಟ್ಟು ಈ ಸಂದರ್ಭದಲ್ಲೂ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದರು.

ದೇಶ ಕೋವಿಡ್ ಲಸಿಕೆ ವಿತರಣೆಯಲ್ಲಿ ದೇಶ ಸ್ವಾಲಂಬನೆ ಸಾಧಿಸಿದ್ದು, ಮೋದಿಯಂತಹ ಪ್ರಧಾನಿ ದೇಶಕ್ಕೆ ಸಿಗದಿದ್ದಲ್ಲಿ ದೇಶದ ಎಲ್ಲ ಜನರು ಕೋವಿಡ್ ಸಾಯಬೇಕಿತ್ತು. ಮೋದಿ ಅವರ ಈ ಕಾರ್ಯವನ್ನು ಶ್ಲಾಘಿಸುವ ಕಾರ್ಯವನ್ನು ವಿರೋಧ ಪಕ್ಷದ ಮುಖಂಡರು ಮಾಡಬೇಕೆಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮುರಡಪ್ಪ ಮಾತನಾಡಿ, ಚುನಾವಣೆಯಲ್ಲಿ ಸೋಲುಕಂಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಚ್ಚೇದಿನ್ ಯಾರಿಗೆ ಬಂದಿದೆ ಎಂದು ಪ್ರಶ್ನಿಸಿದ್ದಾರೆ. ಚುನಾವಣೆಯಲ್ಲಿ ಸೋಲು ಕಂಡಿರುವ ಅವರಿಗೆ ಅಚ್ಛೇದಿನ್ ಬರೋದಿಲ್ಲ, ದೇಶದ ಎಲ್ಲ ಜನರಿಗೂ ಅಚ್ಛೇದಿನ್ ಬಂದಿದೆ, ಇದನ್ನು ಜನರೆ ಹೇಳುತ್ತಿದ್ದಾರೆ ಎಂದರು.

ಸುದ್ದಿಗೊಷ್ಟಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್ ಶೆಟ್ಟಿ, ಜಿಲ್ಲಾ ವಕ್ತಾರ ವರಸಿದ್ದಿ ವೇಣುಗೋಪಾಲ್, ನಗರ ಮಂಡಲ ಅಧ್ಯಕ್ಷ ಮಧುಕುಮಾರ್ ರಾಜ್ ಅರಸ್, ಜಿಲ್ಲಾ ಮಾದ್ಯಮ ಸಂಚಾಲಕ ಡಿ.ಸುಧೀರ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News