ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣ; ಅಮಿಕಸ್ ಕ್ಯೂರಿಗೆ ಪ್ರಕರಣ ಹಿಂಪಡೆದ ಪಟ್ಟಿ ನೀಡಲು ಹೈಕೋರ್ಟ್ ಆದೇಶ

Update: 2021-10-22 14:44 GMT

ಬೆಂಗಳೂರು, ಅ.22: ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿರುವುದು ಮತ್ತು ಹಿಂಪಡೆಯಲು ಉದ್ದೇಶಿಸಿರುವ ಪ್ರಕರಣಗಳ ಪಟ್ಟಿಯನ್ನು ಅಮಿಕಸ್ ಕ್ಯೂರಿಗೆ ನೀಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಅಮಿಕಸ್ ಕ್ಯೂರಿ ಅದನ್ನು ಪರಿಶೀಲಿಸಿ, ಅಗತ್ಯ ಬಿದ್ದರೆ ಪ್ರತಿಕ್ರಿಯೆ ದಾಖಲಿಸಬಹುದು ಎಂದು ಹೇಳಿದೆ.

ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಮೇಲ್ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನದ ಮೇರೆಗೆ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿರುವುದು ಮತ್ತು ಹಿಂಪಡೆಯಲು ಉದ್ದೇಶಿಸಿರುವ ಪ್ರಕರಣಗಳ ಪಟ್ಟಿಯನ್ನು ಒಳಗೊಂಡ ಅಫಿಡವಿಟ್ ಅನ್ನು ರಾಜ್ಯ ಸರಕಾರ ಸಿದ್ಧಪಡಿಸಿದ್ದು, ಸದ್ಯದಲ್ಲಿಯೇ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದೆ. ಈ ಪಟ್ಟಿಯನ್ನು ಅಮಿಕಸ್ ಕ್ಯೂರಿಗೂ ರಾಜ್ಯ ಸರಕಾರ ನೀಡಬೇಕು. ಇದನ್ನು ಅಮಿಕಸ್ ಕ್ಯೂರಿ ಅವರು ಪರಿಶೀಲಿಸಿ, ಅಗತ್ಯ ಬಿದ್ದರೆ ಪ್ರತಿಕ್ರಿಯೆ ದಾಖಲಿಸಬಹುದಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆ ಅಮಿಕಸ್ ಕ್ಯೂರಿ ಹಿರಿಯ ವಕೀಲರಾದ ಆದಿತ್ಯ ಸೋಂಧಿ ಅವರು ಶಾಸಕರು ಮತ್ತು ಸಂಸದರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವ ವಿಚಾರದಲ್ಲಿ ರಾಜ್ಯ ಸರಕಾರ ತಪ್ಪೆಸಗಿದೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರವು ಅಫಿಡವಿಟ್ ಸಲ್ಲಿಸಬೇಕು. ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಹಿಂಪಡೆಯುವ ರಾಜ್ಯ ಸರಕಾರದ ಆದೇಶ ಮತ್ತು ಮ್ಯಾಜಿಸ್ಟ್ರೇಟ್ ಆದೇಶಗಳನ್ನು ಹೈಕೋರ್ಟ್ ಪರಿಶೀಲಿಸಬಹುದಾಗಿದೆ ಎಂದು ನ್ಯಾಯಾಲಯದ ಗಮನ ಸೆಳೆದರು. ವಕೀಲರ ವಾದ ಆಲಿಸಿದ ಪೀಠವು ವಿಚಾರಣೆಯನ್ನು ನವೆಂಬರ್ 17ಕ್ಕೆ ಮುಂದೂಡಿತು. 

61 ಕ್ರಿಮಿನಲ್ ಪ್ರಕರಣ: ಕಳೆದ ವರ್ಷ ಚುನಾಯಿತ ಪ್ರತಿನಿಧಿಗಳ ವಿರುದ್ಧದ ಪ್ರಕರಣ ಸೇರಿ ಒಟ್ಟು 61 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ರಾಜ್ಯ ಸರಕಾರ ಆದೇಶ ನೀಡಿತ್ತು. ಆದರೆ, ಸುಪ್ರೀಂಕೋರ್ಟ್ ಜನಪ್ರತಿನಿಧಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಕೇಸ್‍ಗಳನ್ನು ಆಯಾ ರಾಜ್ಯದ ಹೈಕೋರ್ಟ್‍ನ ಅನುಮತಿ ಇಲ್ಲದೆ ಹಿಂಪಡೆಯಲು ಸಾಧ್ಯವಿಲ್ಲ. ಹಾಗೇ, ಜನಪ್ರತಿನಿಧಿಗಳ ಕೇಸ್‍ಗಳ ವಿಚಾರಣೆ ಮಾಡುತ್ತಿರುವ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿಗಳನ್ನು ಆ ಪ್ರಕರಣದ ವಿಚಾರಣೆ ಮುಗಿಯುವವರೆಗೂ ಬೇರೆಡೆ ವರ್ಗಾವಣೆ ಮಾಡುವಂತಿಲ್ಲ ಎಂಬ ಮಹತ್ವದ ಆದೇಶವನ್ನು ಸುಪ್ರೀಂಕೋರ್ಟ್ ಹೊರಡಿಸಿತ್ತು. 

ಕರ್ನಾಟಕ ಸರಕಾರ ಕಳೆದ ವರ್ಷ ಜೆ.ಸಿ.ಮಾಧುಸ್ವಾಮಿ, ಸಿ.ಟಿ.ರವಿ, ಬಿ.ಸಿ.ಪಾಟೀಲ್ ಸೇರಿ ಹಲವು ರಾಜಕಾರಣಿಗಳ ಮೇಲಿನ ಕೇಸ್‍ಗಳನ್ನು ಹಿಂಪಡೆಯುವಂತೆ ಸೂಚಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News