ಮಾಜಿ ಯೋಧರ ಆರೋಗ್ಯ ಯೋಜನೆಗೆ 3,321 ಕೋಟಿ ರೂ.ಬಿಡುಗಡೆ: ಕೇಂದ್ರ ಸಚಿವ ರಾಜನಾಥ್ ಸಿಂಗ್

Update: 2021-10-22 16:24 GMT

ಬೆಂಗಳೂರು, ಅ. 22: ‘ಮಿಲಿಟರಿಯಲ್ಲಿ ಸೇವೆ ಸಲ್ಲಿಸಿರುವ ಮಾಜಿ ಯೋಧರ ಆರೋಗ್ಯ ಯೋಜನೆಯಡಿ 2020-21ನೆ ಸಾಲಿನಲ್ಲಿ 3,321 ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ' ಎಂದು ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ಶುಕ್ರವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ರಕ್ಷಣಾ ಇಲಾಖೆಯ ಮಾಜಿ ಸೈನಿಕರು ಹಾಗೂ ರಕ್ಷಣಾ ಇಲಾಖೆಯ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ‘ಮಾಜಿ ಯೋಧರು ಹಾಗೂ ಅವರ ಅವಲಿಂಬಿತರಿಗೆ ಮೀಸಲಿಡಲಾದ ಆರೋಗ್ಯ ಯೋಜನೆಯು ಸದ್ಯ ದೇಶದ 353 ಜಿಲ್ಲೆಗಳಲ್ಲಿ ಚಾಲ್ತಿಯಲ್ಲಿದೆ' ಎಂದು ಹೇಳಿದರು.

‘ಇದಕ್ಕೆ 3,050 ಆಸ್ಪತ್ರೆಗಳು ಸೇರಿದಂತೆ 421 ಪಾಲಿಕ್ಲಿನಿಕ್‍ಗಳು ಸೇರಿದೆ. ಈ ಯೋಜನೆಯಡಿ ಕೇಂದ್ರ ಸರಕಾರವು ಚಿಕಿತ್ಸಾ ವೆಚ್ಚದ ಶೇ.54ರಷ್ಟು ಹಣವನ್ನು ನೀಡಲಿದ್ದು, ಉಳಿದ ಶೇ.46ರಷ್ಟು ಹಣವನ್ನು ಯೋಧರೇ ಭರಿಸಬೇಕಾಗುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ಸರಕಾರವು ಮಾಜಿ ಯೋಧರ ಚಿಕಿತ್ಸೆಗೆ ಇನ್ನೂ ಹೆಚ್ಚಿನ ಅನದಾನ ಒದಗಿಸಬೇಕು. ಇಎಸ್‍ಐ ಆಸ್ಪತ್ರೆ ಸೇರಿದಂತೆ ಇತರ ಖಾಸಗಿ ಆಸ್ಪತ್ರೆಗಳಲ್ಲೂ ಇವರಿಗೆ ಆರೋಗ್ಯ ಯೋಜನೆ ವಿಸ್ತರಿಸಬೇಕು. ಫಲಾನುಭವಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಹಾಗೂ ಪಾವತಿ ನೀಡಬೇಕು ಎಂದು ಕೋರಿದರು.

ಸಭೆಯಲ್ಲಿ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್, ಮಿಲಿಟರಿ ವ್ಯವಹಾರಗಳ ಕಾರ್ಯದರ್ಶಿ ಜನರಲ್ ಬಿಪಿನ್ ರಾವತ್, ಇಎಸ್‍ಡಬ್ಲೂ ಕಾರ್ಯದರ್ಶಿ ಬಿ.ಆನಂದ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News