ಆನ್‌ಲೈನ್ ಗೇಮ್ ನಿಷೇಧ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ: ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ ಸೂಚನೆ

Update: 2021-10-22 16:56 GMT

ಬೆಂಗಳೂರು, ಅ.22: ಕರ್ನಾಟಕ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು ರಾಜ್ಯದಲ್ಲಿ ಆನ್‌ಲೈನ್ ಗೇಮ್ ರದ್ದುಪಡಿಸಿದ ಸರಕಾರದ ಕ್ರಮ ಪ್ರಶ್ನಿಸಿ ಆನ್‌ಲೈನ್ ಗೇಮ್ ಕಂಪೆನಿಗಳು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿವೆ.

ರಾಜ್ಯದಲ್ಲಿ ಎಲ್ಲ ಬಗೆಯ ಆನ್‌ಲೈನ್ ಜೂಜು ನಿಷೇಧಿಸಿರುವ ಸರಕಾರದ ಆದೇಶವನ್ನು ರದ್ದುಪಡಿಸುವಂತೆ ಕೋರಿ ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್, ಗ್ಯಾಲಕ್ಟೋಸ್ ಫೋನ್ ವೇರ್ ಟೆಕ್ನಾಲಜೀಸ್ ಸೇರಿದಂತೆ ಹಲವು ಸಂಸ್ಥೆಗಳು ಸಲ್ಲಿಸಿರುವ ಅರ್ಜಿಗಳನ್ನು ಹೈಕೋರ್ಟ್ ವಿಚಾರಣೆ ನಡೆಸಿತು.

ಈ ವೇಳೆ ಸರಕಾರದ ಪರ ಅಡ್ವೊಕೇಟ್ ಜನರಲ್ ವಾದಿಸಿ, ಸರಕಾರ ಕಾನೂನು ಬದ್ಧವಾಗಿಯೇ ನಿಯಯ ಜಾರಿಗೆ ತಂದಿದೆ. ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಕೋರಿಕೆ ಪರಿಗಣಿಸಿದ ಪೀಠ ವಿಚಾರಣೆಯನ್ನು ಅ.27ಕ್ಕೆ ಮುಂದೂಡಿತು.

ಅರ್ಜಿದಾರರ ಕೋರಿಕೆ: ಆನ್‌ಲೈನ್ ಜೂಜು ನಿಷೇಧಿಸಿರುವ ಹಿನ್ನೆಲೆ ಕಂಪೆನಿಗಳು ಕ್ರಿಮಿನಲ್ ಕೇಸ್ ಭೀತಿ ಎದುರಿಸುತ್ತಿವೆ. ಈ ನಿಟ್ಟಿನಲ್ಲಿ ರದ್ದು ಕೋರಿ ಅರ್ಜಿ ಸಲ್ಲಿಸಿವೆ.

ಸರಕಾರ ಪೊಲೀಸ್ ಕಾಯ್ದೆಗೆ ತಿದ್ದುಪಡಿ ತಂದು ಆನ್‌ಲೈನ್ ಗೇಮ್ ನಿರ್ಬಂಧಿಸಿದೆ. ರಾಜ್ಯ ಸರಕಾರಕ್ಕೆ ಆನ್‌ಲೈನ್ ಗೇಮ್ ನಿಷೇಧಿಸುವ ಅಧಿಕಾರವಿಲ್ಲ. ನಿಯಮ ಜಾರಿಗೆ ಮುನ್ನ ನಮ್ಮ ಆಕ್ಷೇಪಣೆಯನ್ನೂ ಆಲಿಸಿಲ್ಲ. ಇದರಿಂದಾಗಿ ಆನ್‌ಲೈನ್ ಗೇಮ್ ನಡೆಸುತ್ತಿದ್ದ ಸಂಸ್ಥೆಗಳಿಗೆ ಆರ್ಥಿಕ ನಷ್ಟ ಉಂಟಾಗಿದೆ. ಅನಗತ್ಯವಾಗಿ ಪೊಲೀಸ್ ಕೇಸ್‌ಗಳನ್ನು ಎದುರಿಸಬೇಕಿದೆ.

ತನಿಖೆ ನೆಪದಲ್ಲಿ ತೊಂದರೆಯಾಗುವ ಸಂಭವವೂ ಇದೆ. ಹೀಗಾಗಿ, ಕಾಯ್ದೆಗೆ ತಿದ್ದುಪಡಿ ತಂದು ಆನ್‌ಲೈನ್ ಗೇಮ್ ನಿಷೇಧಿಸಿರುವ ಸರಕಾರದ ಆದೇಶವನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News