ಲಸಿಕೆ ಪಡೆಯಲು ಜನತೆ ಹಿಂದೇಟು: ಆರೋಗ್ಯ ಸಚಿವ ಡಾ.ಸುಧಾಕರ್

Update: 2021-10-22 18:19 GMT

ಹುಬ್ಬಳ್ಳಿ, ಅ. 22: ‘ಮೂರು-ನಾಲ್ಕು ತಿಂಗಳಿಂದ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಆದರೆ, ವೈರಸ್ ನಿರ್ನಾಮವಾಗಿದೆ ಎಂಬ ಉದಾಸೀನ ಭಾವನೆಯಿಂದ ಜನರು ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಇನ್ನೂ ಶೇ.17ರಷ್ಟು ಜನರು ಎರಡೂ ಡೋಸ್ ಲಸಿಕೆ ಪಡೆಯಬೇಕಾಗಿದೆ. ಶೇ.62ರಷ್ಟು ಜನರು ಎರಡನೇ ಡೋಸ್ ಪಡೆಯಬೇಕಿದೆ. ಲಸಿಕೆಯಿಂದ ದೂರ ಉಳಿದವರನ್ನು ಕರೆತರುವ ಕೆಲಸ ಮಾಡುತ್ತಿದ್ದು, ಡಿಸೆಂಬರ್ 31ರ ಹೊತ್ತಿಗೆ ಶೇ.90ರಷ್ಟು ಜನರಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದೇವೆ' ಎಂದು ಮಾಹಿತಿ ನೀಡಿದರು.

‘ಮೊದಲ ಡೋಸ್ ಲಸಿಕೆ ಪಡೆದು ಅವಧಿ ಮುಗಿದವರ ಸಂಖ್ಯೆ 53 ಲಕ್ಷ ಇದ್ದು, ಇವರನ್ನು ಫೋನ್ ಮೂಲಕ ಕರೆಸಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಆದರೂ, ಜನರು ಮುಂದೆ ಬರುತ್ತಿಲ್ಲ. ರಾಜ್ಯದಲ್ಲಿ ಸದ್ಯ 60 ಲಕ್ಷ ಲಸಿಕೆ ದಾಸ್ತಾನು ಇದೆ. ರಾಜ್ಯದ ಬೇಡಿಕೆಗೆ ತಕ್ಕಂತೆ ಕೇಂದ್ರ ಸರಕಾರ ಲಸಿಕೆ ಪೂರೈಕೆ ಮಾಡುತ್ತಿದೆ ಎಂದು ಅವರು ತಿಳಿಸಿದರು.

ಕೋವಿಡ್ ಸೋಂಕಿನಿಂದ ಸರಕಾರ ಸವಾಲುಗಳನ್ನು ಎದುರಿಸಿದ್ದು, ಪಾಠ ಕಲಿತಿದೆ. ಇದರ ಪರಿಣಾಮವಾಗಿ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆ ತರಲು ಸಾಧ್ಯವಾಯಿತು. ಲಸಿಕೆ ವಿಚಾರದಲ್ಲಿ ಪ್ರತಿಪಕ್ಷಗಳು ರಾಜಕಾರಣ ಮಾಡಿದವು. ಇದು ಮೋದಿ ಲಸಿಕೆ ಎಂದು ವ್ಯಂಗ್ಯವಾಡಿದರು. ಆದರೆ, ಕೋವಿಡ್ ನಿಯಂತ್ರಣಕ್ಕೆ ಲಸಿಕೆಯೊಂದೇ ಮದ್ದು ಎಂದು ಅರಿತ ವಿಪಕ್ಷಗಳು ಮಾರ್ಚ್‍ನಲ್ಲಿ ಸರದಿಯಲ್ಲಿ ನಿಂತು ಲಸಿಕೆ ಪಡೆದಿದ್ದಾರೆ ಎಂದು ಸುಧಾಕರ್ ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News