ಯೋಜನೆ ಟೀಕಿಸಿದ್ದವರೇ ಇದೀಗ `ಅನ್ನಭಾಗ್ಯ' ಕ್ರೆಡಿಟ್ ಮೋದಿಗೆ ನೀಡಲು ಹೊರಟಿದ್ದಾರೆ: ಸಿದ್ದರಾಮಯ್ಯ ಟೀಕೆ

Update: 2021-10-23 12:17 GMT

ಬೆಂಗಳೂರು, ಅ. 23: `ಅನ್ನಭಾಗ್ಯ ಯೋಜನೆ ಜಾರಿಗೆ ತಂದಾಗ ದೊಡ್ಡ ಗಂಟಲಿನಲ್ಲಿ ಟೀಕಿಸಿದ್ದ ಜನರೆ ಇಂದು `ಅನ್ನಭಾಗ್ಯ' ಯೋಜನೆ ಕ್ರೆಡಿಟ್ ಅನ್ನು ಮೋದಿಯವರಿಗೆ ನೀಡಲು ಹೊರಟಿದ್ದಾರೆ. ಈ ಕಾರಣದಿಂದಲೇ ಬಿಜೆಪಿ ಎಂಬುದು ಸುಳ್ಳಿನ ಕಾರ್ಖಾನೆ ಎಂದು ನಾವು ಹೇಳುವುದು' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

`ಬಿಜೆಪಿಯವರಿಗೆ ಕನಿಷ್ಠ ಅನ್ನದ ವಿಚಾರದಲ್ಲಾದರೂ ನಿಜ ಹೇಳಬೇಕು ಎಂಬ ಕನಿಷ್ಠ ನೈತಿಕತೆ ಮತ್ತು ಪ್ರಾಮಾಣಿಕತೆ ಇಲ್ಲದೇ ಹೋಗಿರುವುದು ನಮ್ಮ ಕಾಲದ ದುರಂತ. ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇ ಕಾಂಗ್ರೆಸ್ ಪಕ್ಷ. ಯುದ್ಧ, ಬರಗಾಲ, ಪ್ರವಾಹ ಸೇರಿದಂತೆ ಇನ್ನಿತರೆ ಸಂದರ್ಭಗಳಲ್ಲಿ ಎದುರಾಗುವ ಹಸಿವು ಮತ್ತು ಹಾಹಾಕಾರದ ಪರಿಸ್ಥಿತಿಯನ್ನು ನಿಭಾಯಿಸಲು 1960ರಿಂದಲೇ ಉಚಿತ ಪಡಿತರ ವಿತರಣಾ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ನಮ್ಮ ಕಾಂಗ್ರೆಸ್ ಪಕ್ಷ' ಎಂದು ಅವರು ತಿಳಿಸಿದ್ದಾರೆ.

`1992ರಲ್ಲಿ, ಕಾಂಗ್ರೆಸ್ ಪರಿಷ್ಕೃತ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಜಾರಿ ಮಾಡಿತು. ಕೇಂದ್ರ ಸರಕಾರ ರಾಜ್ಯಗಳಿಗೆ ರಿಯಾಯ್ತಿ ದರದಲ್ಲಿ ಪಡಿತರವನ್ನು ಒದಗಿಸಿ ಅದನ್ನು ಬಡವರಿಗೆ ವಿತರಿಸಲು ಈ ಪರಿಷ್ಕೃತ ವ್ಯವಸ್ಥೆಯಲ್ಲಿ ಅನುಕೂಲ ಮಾಡಿಕೊಟ್ಟಿತು. 2004ರಲ್ಲಿ ಅಂತ್ಯೋದಯದ ಪ್ರಯೋಜನ ಪಡೆಯುವ ಬಡಜನರ ಪ್ರಮಾಣವನ್ನು ಒಂದು ಕೋಟಿಯಿಂದ 2 ಕೋಟಿಗೆ ಏರಿಸಿದ್ದಲ್ಲದೆ, ಮತ್ತೆ 2005ರಲ್ಲಿ 2.5 ಕೋಟಿಗೆ ಮತ್ತೆ ಏರಿಸಲಾಯಿತು. 2013ರಲ್ಲಿ ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರಕಾರ ರಾಷ್ಟಿಯ `ಆಹಾರ ಭದ್ರತಾ ಕಾಯ್ದೆ'ಯನ್ನು ಜಾರಿಗೆ ತಂದಿತು. ಈ ಕಾಯ್ದೆಯ ಅಡಿಯಲ್ಲಿ ಆರೋಗ್ಯಕರ ಆಹಾರ ಪಡೆಯುವುದು ಈ ದೇಶದ ಪ್ರತಿಯೊಬ್ಬ `ನಾಗರಿಕರ ಹಕ್ಕು' ಎನ್ನುವ ಕ್ರಾಂತಿಕಾರಕ ನಿಲುವನ್ನು ಕಾಂಗ್ರೆಸ್ ತಳೆಯಿತು. ಇದರಿಂದಾಗಿ ಹಸಿದ ಪ್ರತಿಯೊಬ್ಬರಿಗೂ ಆಹಾರ ಒದಗಿಸುವುದು ಸರಕಾರದ ಜವಾಬ್ದಾರಿಯಾಯಿತು' ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

`ಈ ಕಾಯ್ದೆಯ ಪರಿಣಾಮದಿಂದಾಗಿ ಹಸಿದ ಜನರು ಪಡಿತರವನ್ನು ತಮ್ಮ ಹಕ್ಕಾಗಿ ಬೇಡಿಕೆ ಮಂಡಿಸಬಹುದು. ಇದರಿಂದಾಗಿ 2005ರಿಂದ ಇದ್ದ ಫಲಾನುಭವಿಗಳ ಪ್ರಮಾಣ 2.5 ಕೋಟಿಯಿಂದ ಒಮ್ಮೆಗೇ 80 ಕೋಟಿಗೆ ಏರಿಕೆಯಾಯಿತು. ಈ ಕಾಯ್ದೆಯ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ 35 ಕೆಜಿ ಸಿಗುವಂತಾಯಿತು. ಇದರಡಿಯಲ್ಲಿ ಪ್ರತಿ ಕೆಜಿ ಅಕ್ಕಿಯನ್ನು 3 ರೂ.ಗೆ, ಗೋದಿಯನ್ನು 2 ರೂ.ಗೆ ಬೇಳೆಕಾಳನ್ನು 1 ರೂ.ಗೆ ಒದಗಿಸಲಾಗುತ್ತಿತ್ತು. 2013ರಲ್ಲಿ ನಮ್ಮ ನೇತೃತ್ವದ ಸರಕಾರ ಅನ್ನಭಾಗ್ಯ ಯೋಜನೆಯನ್ನು ಘೋಷಿಸಿ ಪ್ರತಿ ಅಂತ್ಯೋದಯ ಕುಟುಂಬಕ್ಕೆ 35 ಕೆಜಿ ಅಕ್ಕಿಯನ್ನು ಪ್ರತಿ ಕೆಜಿಗೆ ಕೇವಲ 1 ರೂ.ಗೆ ನೀಡಿತು. ಈ ಅನ್ನಭಾಗ್ಯ ಯೋಜನೆಯಿಂದ ರಾಜ್ಯದ 1.05 ಕೋಟಿ ಕುಟುಂಬಗಳ 4.2 ಕೋಟಿ ಜನರು ಅನುಕೂಲ ಪಡೆಯುವಂತಾಯಿತು. ಇದರಿಂದಾಗಿ, ಆದ್ಯತಾ ಮತ್ತು ಬಿಪಿಎಲ್ ಕುಟುಂಬಗಳಿಗೆ 30 ಕೆಜಿ ಅಕ್ಕಿ ಮತ್ತು ಗೋಧಿಯನ್ನು ಕೆಜಿಗೆ 1 ರೂ.ನಂತೆ ವಿತರಿಸಲಾಯಿತು ಎಂದು ಅವರು ಸ್ಮರಿಸಿದ್ದಾರೆ.

`2017ರ ಎಪ್ರಿಲ್‍ನಿಂದ ಕುಟುಂಬಗಳ ಪ್ರತಿ ಸದಸ್ಯರಿಗೆ 7 ಕೆಜಿ ಅಕ್ಕಿ, 2 ಕೆಜಿ ಗೋಧಿ, 1 ಕೆಜಿ ಬೇಳೆಯನ್ನು ವಿತರಿಸಲು ಪ್ರಾರಂಭಿಸಲಾಯಿತು. ಕುಟುಂಬದಲ್ಲಿ 10 ಜನರಿದ್ದರೆ 70 ಕೆಜಿ ಅಕ್ಕಿ, 20 ಕೆಜಿ ಗೋಧಿ ಸಿಗುತ್ತಿತ್ತು. ಅಕ್ಕಿ ಮತ್ತು ಗೋಧಿಯನ್ನು ಉಚಿತವಾಗಿ ನೀಡಿದರೆ ಬೇಳೆಯನ್ನು ಪ್ರತಿ ಕೆಜಿಗೆ 38 ರೂ.ಗೆ ವಿತರಿಸಲಾಯಿತು. ಆದರೆ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಈಗ ಅಕ್ಕಿಯನ್ನು 2 ಕೆಜಿಗೆ ಇಳಿಸಿದೆ. ನಾವು ಪ್ರತಿಯೊಬ್ಬರಿಗೆ 2 ಕೆಜಿ ಗೋಧಿ ನೀಡುತ್ತಿದ್ದೆವು. ಈ ಸರಕಾರ ಪ್ರತಿ ಕಾರ್ಡ್‍ಗೆ 2 ಕೆಜಿಯನ್ನು ಮಾಡಿದೆ. ಅಕ್ಕಿ ಹೆಚ್ಚು ಕೊಡಿ ಎಂದು ಜನ ಕೇಳಿದರೆ, ಆಹಾರ ಸಚಿವರಾಗಿದ್ದ ಉಮೇಶ್ ಕತ್ತಿಂ `ನೀವು ಬದುಕುವುದಕ್ಕಿಂತ ಸಾಯುವುದೇ ಮೇಲು' ಎಂದು ಹೇಳಿದ್ದರು' ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ನಮ್ಮ ಯೋಜನೆಗೆ ಪ್ರಧಾನಿ ಹೆಸರು: `ಕಡು ಬಡವರಿಗೆ ನೀಡುವ ಅಂತ್ಯೋದಯ ಯೋಜನೆಯಲ್ಲಿ ನಾವು ಅಕ್ಕಿ, ಗೋಧಿ, ಬೇಳೆ, ಉಪ್ಪು, ಅಡುಗೆ ಎಣ್ಣೆ ಇತ್ಯಾದಿಗಳನ್ನು ಸೇರಿಸಿದ್ದೆವು. ಈಗಿನ ಬಿಜೆಪಿ ಸರಕಾರ ಎಪ್ರಿಲ್ 2020ರಿಂದ ಕೇವಲ ಅಕ್ಕಿ ಮಾತ್ರ ನೀಡುತ್ತಿದೆ. ಗೋಧಿ, ಸಕ್ಕರೆ, ಬೇಳೆ ಇವುಗಳನ್ನು ರದ್ದುಮಾಡಿದೆ. ಯುಪಿಎ ಅವಧಿಯಲ್ಲಿ ಜಾರಿಗೆ ತಂದಿದ್ದ ಆಹಾರ ಭದ್ರತಾ ಕಾಯ್ದೆ ಮತ್ತು ನಾನು ನನ್ನ ಅವಧಿಯಲ್ಲಿ ಘೋಷಿಸಿದ್ದ ಅನ್ನಭಾಗ್ಯ ಯೋಜನೆಯನ್ನೇ ಕಾಪಿ ಮಾಡಿದ ಮೋದಿ ಸರಕಾರ ಕೋವಿಡ್ ಸಂದರ್ಭದಲ್ಲಿ ಕೇವಲ ಹೆಸರನ್ನು ಮಾತ್ರ `ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ'(ಪಿಎಂಜಿಕೆಎವೈ) ಎಂದು ಹೆಸರು ಬದಲಾಯಿಸಿತು' ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

`ಯುಪಿಎ ಸರಕಾರದ ಯೋಜನೆಯನ್ನು ಹೆಸರು ಬದಲಾಯಿಸಿ ತನ್ನದೇ ಹೊಸ ಯೋಜನೆ ಎಂದು ರಾಷ್ಟಕ್ಕೆ ಸುಳ್ಳು ಹೇಳಿದ ಕೇಂದ್ರ ಸರಕಾರ ಇಷ್ಟಕ್ಕೇ ಸುಮ್ಮನಾಗದೆ, ರಾಷ್ಟಿಯ ಆಹಾರ ಭದ್ರತಾ ಕಾಯ್ದೆಯ ಮೂಲಕ ಮೊದಲೇ ಇದ್ದ 80 ಕೋಟಿ ಫಲಾನುಭವಿಗಳಿಗೆ ಕೇವಲ 8 ತಿಂಗಳ ಅವಧಿಗೆ ಕೋವಿಡ್ ಕಾರಣದಿಂದ ಮಾತ್ರ ಉಚಿತ ಅಕ್ಕಿ ನೀಡುತ್ತಿದ್ದು ಇದು 2021ರ ನವೆಂಬರ್‍ಗೆ ಕೊನೆಯಾಗಲಿದೆ. ಆ ನಂತರದ ಪರಿಸ್ಥಿತಿ ಏನೆಂದು ದೇವರೇ ಬಲ್ಲ. ಒಂದು ಕಡೆ ಯುಪಿಎ ಸರಕಾರದ ಯೋಜನೆಯ ಹೆಸರನ್ನು ಕೇಂದ್ರ ಬಿಜೆಪಿ ಸರಕಾರ ಬದಲಾಯಿಸಿದರೆ, ಮತ್ತೊಂದು ಕಡೆ ರಾಜ್ಯ ಬಿಜೆಪಿ ಸರಕಾರ ಕಾಂಗ್ರೆಸ್ ಅವಧಿಯಲ್ಲಿ ನೀಡಲಾಗುತ್ತಿದ್ದ 7 ಕೆಜಿ ಉಚಿತ ಅಕ್ಕಿಯ ಪ್ರಮಾಣವನ್ನು ದಿಢೀರನೆ 2 ಕೆಜಿಗೆ ಇಳಿಸಿದೆ' ಎಂದು ದೂರಿದ್ದಾರೆ.

`ಹಂತ ಹಂತವಾಗಿ ಕಾಂಗ್ರೆಸ್ ಅವಧಿಯ ಆಹಾರ ಭದ್ರತಾ ಕಾಯ್ದೆಯನ್ನು ಕೊಲ್ಲುತ್ತಾ ಬಂದ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳು ಪ್ರತಿ ವ್ಯಕ್ತಿಗೆ ನೀಡಲಾಗುತ್ತಿದ್ದ ಉಚಿತ ಅಕ್ಕಿಯ ಪ್ರಮಾಣವನ್ನು 7 ರಿಂದ 2 ಕೆಜಿಗೆ ಇಳಿಸಿದ್ದಲ್ಲದೆ ನಮ್ಮ ಕಾಂಗ್ರೆಸ್ ಸರಕಾರದ ಕನಸಿನ ಯೋಜನೆಯಾಗಿದ್ದ ಇದನ್ನು ಕೇಂದ್ರ ಸರಕಾರದ `ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನಾ'(ಪಿಎಂಜಿಕೆಎವೈ) ಜತೆಗೆ ಜಮೆ ಮಾಡಲಾಗಿದೆ. ರಾಜ್ಯ ಬಿಜೆಪಿ ನಾಯಕರು ಮತ್ತು ಮಂತ್ರಿಗಳು ಹೇಳುತ್ತಿರುವಂತೆ ಇದು ಕೇಂದ್ರ ಸರಕಾರದ ಹಣದಿಂದಲೇ ನಡೆಯುವ ಯೋಜನೆ ಆಗಿದ್ದರೆ ಏಕೆ ಇದುವರೆಗೂ ಕರ್ನಾಟಕ ಹೊರತಾಗಿ ದೇಶದ ಇತರೆ ಬಿಜೆಪಿ ಸರಕಾರಗಳಿರುವ ರಾಜ್ಯಗಳಲ್ಲಿ ಈ ಯೋಜನೆ ಜಾರಿ ಆಗಿಲ್ಲ? ಇದೇ ನವೆಂಬರ್ ತಿಂಗಳ ಬಳಿಕ ಸದ್ಯ ಸಿಗುತ್ತಿರುವ 2 ಕೆಜಿ ಉಚಿತ ಅಕ್ಕಿಯೂ ಸ್ಥಗಿತಗೊಳ್ಳಲಿದೆ' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

`ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ ನಮ್ಮ ಕಾಂಗ್ರೆಸ್ ಸರಕಾರ ಅನ್ನಭಾಗ್ಯ ಯೋಜನೆಯನ್ನು ಘೋಷಿಸಿ ಕುಟುಂಬದಲ್ಲಿ ಎಷ್ಟೇ ಸದಸ್ಯರಿದ್ದರೂ ಪ್ರತಿ ಸದಸ್ಯರಿಗೆ ತಿಂಗಳಿಗೆ ತಲಾ 7 ಕೆಜಿ ಉಚಿತ ಅಕ್ಕಿಯನ್ನು ನೀಡುತ್ತಿತ್ತು. ಇದಕ್ಕಾಗಿ ವರ್ಷಕ್ಕೆ ಗರಿಷ್ಠ 3,400 ಕೋಟಿ ರೂ.ಗಳಿಗೂ ಹೆಚ್ಚು ಅನುದಾನವನ್ನು ಆಹಾರ ಇಲಾಖೆಗೆ ಬಿಡುಗಡೆ ಮಾಡಿದ್ದೆವು. ಆದರೆ, ಬಿಜೆಪಿ ನಾಯಕರುಗಳು ಒಂದೇ ಸಮನೆ ಸುಳ್ಳನ್ನು ಉತ್ಪಾದಿಸಿ ಹಂಚುತ್ತಿರುವುದರಿಂದ ಸತ್ಯ ಸಂಗತಿ ಏನೆಂದು ತಿಳಿಸುವ ಉದ್ದೇಶದಿಂದ ಈ ಹೇಳಿಕೆಯನ್ನು ನೀಡುತ್ತಿದ್ದೇನೆ' ಎಂದು ಸಿದ್ದರಾಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News