ಕಸಾಪ ಚುನಾವಣೆ: ಅಭ್ಯರ್ಥಿಗೆ ಬಿಜೆಪಿ ಶಾಸಕರು, ಆರೆಸ್ಸೆಸ್ ಪ್ರಮುಖರಿಂದ ಬೆಂಬಲ ಘೋಷಣೆ ಅಪಾಯಕಾರಿ ಬೆಳವಣಿಗೆ

Update: 2021-10-23 13:38 GMT

ಈ ಬಾರಿಯ ಕಸಾಪ ಚುನಾವಣೆಯಲ್ಲಿ ಅಭ್ಯರ್ಥಿಗೆ ಬಿಜೆಪಿ ಶಾಸಕರು, ಆರೆಸ್ಸೆಸ್ ಪ್ರಮುಖರಿಂದ ಬೆಂಬಲ ಘೋಷಣೆಯಾಗಿರುವುದು ಅಪಾಯಕಾರಿ ಬೆಳವಣಿಗೆ ಎಂದು ಸಾಹಿತಿಗಳು ಪತ್ರದಲ್ಲಿ ತಿಳಿಸಿದ್ದಾರೆ.

ಪತ್ರದ ಪೂರ್ಣ ಪಾಠ ಇಲ್ಲಿದೆ

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಸಾಂಸ್ಕೃತಿಕ ಸಾಕ್ಷಿಪ್ರಜ್ಞೆಯಂತಿರಬೇಕಾದ ಒಂದು ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆ. ಇದನ್ನು ಪ್ರಾರಂಭಿಸಿದ  ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಶಯ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪೋಷಿಸುವ ಹಾಗೂ ಜನತೆಯ ನಡುವೆ ಅವುಗಳನ್ನು ಬೇರೂರಿಸುವ ಉದ್ದೇಶದಿಂದ ಕೂಡಿತ್ತು. ಅದು ರಾಜಾಶ್ರಯದಲ್ಲಿ ಪ್ರಾರಂಭವಾದ ಪರಿಷತ್ತಾದರೂ ಎಂದೂ ರಾಜರ ರಾಜಮನೆತನದವರ ಪರಾಕುಪಂಪಿನ ವೇದಿಕೆಯಾಗಿ ಇರಲಿಲ್ಲ. ಅದಕ್ಕಿಂತ ಸಾಹಿತ್ಯ, ಸಂಗೀತ, ರಂಗಭೂಮಿ ಇಂಥ ಸಾಹಿತ್ಯಿಕ ಮನಸ್ಸುಗಳ ಜನಮುಖಿ ವೇದಿಕೆಯಾಗಿ ರೂಪುಗೊಂಡಿದ್ದು, ಅದಕ್ಕನುಗುಣವಾಗುವಂತೆ ತನ್ನ ಸ್ವಾಯತ್ತತೆಯನ್ನು ಉಳಿಸಿಕೊಂಡು ಬಂದಿದೆ. ಅಲ್ಲಲ್ಲಿ ಸಾಹಿತ್ಯೇತರ ವ್ಯಕ್ತಿಗಳು ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರೂ, ಅವರೆಂದೂ ಸಾಹಿತ್ಯ ಪರಿಷತ್ತಿನ ಮೂಲ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡಿಲ್ಲ. ಅವರೂ ಸಾಹಿತಿಗಳ, ಸಂಸ್ಕೃತಿ ಚಿಂತಕರ ಸಹಕಾರ ಸಲಹೆ, ಸೂಚನೆಗಳ ಅನ್ವಯದಲ್ಲಿ ಪರಿಷತ್ತನ್ನು ಸರಿದಾರಿಯಲ್ಲಿ ನಡೆಸಿಕೊಂಡು ಬಂದಿದ್ದಾರೆ.

ಇದುವರೆಗಿನ ಅಧ್ಯಕ್ಷರ ಚುನಾವಣೆಗಳಲ್ಲಿ ಯಾವ ರಾಜಕೀಯ ಪಕ್ಷಗಳು ನೇರವಾಗಿಯಾಗಲಿ ಅಥವಾ ಪರೋಕ್ಷವಾಗಿಯಾಗಲಿ ಭಾಗವಹಿಸಿದಂತೆ ಪರಿಷತ್ತಿನ ರಾಜಕಾರಣಕ್ಕೆ ಪಕ್ಷ ರಾಜಕಾರಣದ ಪ್ರವೇಶವಾಗುವಂತೆ ನಡೆದುಕೊಂಡಿರಲಿಲ್ಲ. ಎಲ್ಲ ಪಕ್ಷಗಳೂ ಪರಿಷತ್ತಿನ ಸಾಂಸ್ಕೃತಿಕ ವಾತಾವರಣಕ್ಕೆ ರಾಜಕೀಯ ಸುಳಿಯದಂತೆ ಎಚ್ಚರವಹಿಸಿದ್ದವು. ಆರೋಗ್ಯಕರ ವಾತಾವರಣ ಉಳಿಯುವಂತೆ ನೋಡಿಕೊಂಡಿದ್ದವು.

ಆದರೆ ಈ ಬಾರಿಯ ಚುನಾವಣೆಗೆ ಬಿಜೆಪಿ ಶಾಸಕರು, ಆರೆಸ್ಸೆಸ್ನ ಪ್ರಮುಖರು ನೇರವಾಗಿ ವ್ಯಕ್ತಿಯೊಬ್ಬರಿಗೆ ಪಕ್ಷದ ಬೆಂಬಲ ಘೋಷಿಸಿರುವುದು ಅಪಾಯಕಾರಿಯಾದ, ಅನಾರೋಗ್ಯಕರ ಬೆಳವಣಿಗೆಯಾಗಿದೆ. ಏಕೆಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯಕ್ತಿ ವೈಯಕ್ತಿಕವಾಗಿ ಯಾವುದೇ ರಾಜಕೀಯ ಸಿದ್ಧಾಂತದ ಜೊತೆಗೆ ಗುರುತಿಸಿಕೊಳ್ಳುವುದು ಅವರ ಹಕ್ಕು. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ಅಭಿಪ್ರಾಯ ಭೇದಗಳ ನಡುವೆಯೂ ಅವರ ನಿಲುವನ್ನು ಪ್ರಜಾಸತ್ತೆಯ ಅಭಿವ್ಯಕ್ತಿ ಸ್ವಾತಂತ್ರ್ಯದ  ಹಿನ್ನೆಲೆಯಲ್ಲಿ ಒಂದು ಧನಾತ್ಮಕ ನಡೆಯಾಗಿ ಗೌರವಿಸಬೇಕಾದುದು ಅವಶ್ಯ. ಯಾವುದೇ ಸ್ವಾಯತ್ತ ಸಂಸ್ಥೆಯಲ್ಲಿ ಅವರ ಭಾಗವಹಿಸುವಿಕೆಯನ್ನೂ ಯಾರೂ ಪ್ರಶ್ನಿಸಲಾಗದು. ಆದರೆ ಸ್ವಾಯತ್ತ ಸಂಸ್ಥೆಯನ್ನು ರಾಜಕೀಯ ಪಕ್ಷಕ್ಕೆ ಅಡವಿಟ್ಟಂತೆ ರಾಜಕಾರಣ ನಡೆಸುವುದು ಖಂಡನಿಯ ನಡವಳಿಕೆಯಾಗಿರುತ್ತದೆ. ಪಕ್ಷಗಳೂ ಕೂಡ ಈ ಬಗ್ಗೆ ಆರೋಗ್ಯಕರ ನಿಲುವು ತಾಳಿದಂತೆ ಅಂತರ ಕಾಯ್ದುಕೊಳ್ಳಬೇಕಾದ ಹೊಣೆಗಾರಿಕೆಯನ್ನು ತೋರುವ ಅವಶ್ಯಕತೆ ಇದೆ. ಆದರೆ ಗಂಗಾವತಿಯ ಶಾಸಕರಾದ ಪರಣ್ಣ ಮುನವಳ್ಳಿಯವರ ಹೇಳಿಕೆ ಹಾಗೂ ಆರೆಸ್ಸೆಸ್ ನ ಕೆಲವು ಮುಖಂಡರ ಆಕ್ರಮಣಕಾರಿ ವರ್ತನೆ ಈ ಎರಡೂ, ಪರಿಷತ್ತಿನ ಪ್ರಜಾಸತ್ತಾತ್ಮಕ ಸ್ವಾಯತ್ತತೆಗೆ ಧಕ್ಕೆ ತರುವ ವರ್ತನೆಗಳಾಗಿವೆ. ಆದ್ದರಿಂದ ಅವರುಗಳು ತಮ್ಮ ನಿಲುವುಗಳಿಗೆ ವಿಷಾದ ಸೂಚಿಸಿ ಅವರ ಅಭಿಪ್ರಾಯವನ್ನು ಬದಲಿಸಿಕೊಳ್ಳಲಿ. ಹಾಗೆಯೇ ಮಹೇಶ್ ಜೋಷಿಯವರು ಈ ಬಗ್ಗೆ ಹೊಣೆಯರಿತು ಕನ್ನಡ ಸಾಹಿತ್ಯ ಪರಿಷತ್ತಿನ ಸ್ವಾಯತ್ತತೆಗೆ ಧಕ್ಕೆ ಬಾರದಂತೆ ಜವಾಬ್ದಾರಿ ಮೆರೆಯಲಿ ಎಂದು ಈ ಮೂಲಕ ಒತ್ತಾಯಿಸುತ್ತೇವೆ.

ಧನ್ಯವಾದಗಳೊಂದಿಗೆ, ಇಂತಿ ತಮ್ಮ ವಿಶ್ವಾಸಿಗಳು

ಡಾ.ಕೆ. ಮರುಳುಸಿದ್ಧಪ್ಪ
ಪ್ರೊ.ಎಸ್.ಜಿ. ಸಿದ್ಧರಾಮಯ್ಯ
ಡಾ.ಬಂಜೆಗೆರೆ ಜಯಪ್ರಕಾಶ್
ಡಾ.ಮಲ್ಲಿಕಾ ಘಂಟಿ
ರುದ್ರಪ್ಪ ಹನಗವಾಡಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News