ನಾಲ್ವರು ಮಕ್ಕಳಿಗೆ ವಿಷವುಣಿಸಿ ನಿವೃತ್ತ ಯೋಧ ಆತ್ಮಹತ್ಯೆ

Update: 2021-10-23 12:07 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.23: ಮಾಜಿ ಯೋಧರೊಬ್ಬರು ತನ್ನ ನಾಲ್ವರು ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.

ಹುಕ್ಕೇರಿ ತಾಲೂಕಿನ ಬೋರಗಲ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಕ್ಕಳಾದ ಸೌಮ್ಯಾಹಾದಿಮನಿ(19), ಶ್ವೇತಾಹಾದಿಮನಿ(16), ಸಾಕ್ಷಿಹಾದಿಮನಿ(11), ಸೃಜನಹಾದಿಮನಿಗೆ(8) ವಿಷವುಣಿಸಿ ತಂದೆ ಗೋಪಾಲಹಾದಿಮನಿ(46) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇತ್ತೀಚಿಗೆ ಗೋಪಾಲ್ ಪತ್ನಿ ಜಯಾ ಬ್ಲಾಕ್ ಫಂಗಸ್‍ನಿಂದ ಸಾವನ್ನಪ್ಪಿದ್ದರು. ಇದರಿಂದ ಮನನೊಂದು ನಾಲ್ವರ ಮಕ್ಕಳ ಜತೆ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮೃತ ದುರ್ದೈವಿ ಗೋಪಾಲ್ ಹಾದಿಮನಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇಬ್ಬರು ಮಕ್ಕಳು ಸಂಕೇಶ್ವರ ಪಟ್ಟಣದಲ್ಲಿರುವ ಕಾಲೇಜಿಗೆ ಹೋಗುತ್ತಿದ್ದರು. ಇನ್ನುಳಿದ ಇಬ್ಬರು ಮಕ್ಕಳು ಗ್ರಾಮದಲ್ಲೇ ಶಾಲೆಗೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ.

ಶುಕ್ರವಾರ ರಾತ್ರಿಯೇ ವಿಷಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು, ಸ್ಥಳಕ್ಕೆ ಸಂಕೇಶ್ವರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಖಿನ್ನತೆಗೆ ಒಳಗಾಗಬೇಡಿ: ಸಚಿವ ಕಾರಜೋಳ

ಮಾಜಿ ಯೋಧ ಸೇರಿದಂತೆ ಇಡೀ ಕುಟುಂಬ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಂಬಂಧ ಪ್ರತಿಕ್ರಿಯಿಸಿದ ಸಚಿವ ಗೋವಿಂದ ಕಾರಜೋಳ, ಇಂತಹ ಪರಿಸ್ಥಿತಿಯಲ್ಲಿ ಯಾರು ಖಿನ್ನತೆಗೆ ಒಳಗಾಗಬಾರದು. ಅಲ್ಲದೆ, ಈ ಘಟನೆ ದಿಗ್ಭ್ರಮೆಗೊಳಿಸಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News