''ನಿಮ್ಮ ಆರ್ಥಿಕತೆಗೆ ನೊಬೆಲ್ ಪ್ರಶಸ್ತಿಯೇ ಕೊಡಬೇಕು'': ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ

Update: 2021-10-23 12:51 GMT

ಬೆಂಗಳೂರು, ಅ. 23: `ರಾಜ್ಯ ಏಕೀಕರಣಗೊಂಡ ಬಳಿಕ 2013ರ ಅಂತ್ಯದ ವೇಳೆಗೆ ರಾಜ್ಯದ ಒಟ್ಟು ಸಾಲ ಎತ್ತುವಳಿ 1 ಲಕ್ಷ ಕೋಟಿ ರೂ.ಮಾತ್ರ. ಆದರೆ, ಸಿದ್ದರಾಮಯ್ಯ ಹಾಗೂ ಮೈತ್ರಿ ಸರಕಾರದ ಅವಧಿಯಲ್ಲಿ ಈ ಮೊತ್ತ 3 ಲಕ್ಷ ಕೋಟಿ ರೂ. ತಲುಪಿತು. ಈಗ ಹೇಳಿ ರಾಜ್ಯಕ್ಕೆ `ಸಾಲಭಾಗ್ಯ ನೀಡಿದ್ದು ಯಾರು' ಸಿದ್ದರಾಮಯ್ಯ? ನಿಮ್ಮ ಆರ್ಥಿಕತೆಗೆ ನೊಬೆಲ್ ಪ್ರಶಸ್ತಿಯೇ ಕೊಡಬೇಕು!' ಎಂದು ಬಿಜೆಪಿ, ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಶನಿವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, `ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಮಾಡಿದ ಅತಿದೊಡ್ಡ ಸಾಧನೆ ಎಂದರೆ ರಾಜ್ಯದ ಪ್ರತಿಯೊಬ್ಬ ಪ್ರಜೆಯ ತಲೆಯ ಮೇಲೂ 44 ಸಾವಿರ ರೂ.ಗಳಿಗೂ ಅಧಿಕ ಸಾಲದ ಹೊರೆ ಹೇರಿದ್ದು. ಅಕ್ಕಿ ಕೊಟ್ಟೆ, ಎಣ್ಣೆ ಕೊಟ್ಟೆ ಎಂದು ರಾಜ್ಯದ ಜನತೆಯ ಮೇಲೆ ಮಂಕುಬೂದಿ ಎರಚುತ್ತಾ ಎಲ್ಲರನ್ನೂ ಸಾಲದ ಸುಳಿಗೆ ದೂಡಿಬಿಟ್ಟರು. ವಿತ್ತೀಯ ಶಿಸ್ತನ್ನೇ ಹದೆಗೆಡಿಸಿದರು' ಎಂದು ದೂರಿದೆ.

`ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕೆಂಬ `ಮಜಾವಾದಿ' ರಾಜಕಾರಣಿಗಳ ಪಟ್ಟಿಯಲ್ಲಿ ಮೊದಲ ಶ್ರೇಣಿಯಲ್ಲಿ ನಿಲ್ಲುವವರು ಸಿದ್ದರಾಮಯ್ಯ. ತಾವು ಮುಖ್ಯಮಂತ್ರಿಯಾಗಿದ್ದಾಗ ಕೇವಲ 4 ವರ್ಷದ ಅವಧಿಯಲ್ಲಿ ಸಾಲ ಎತ್ತುವಳಿಯನ್ನು 4 ಲಕ್ಷ ಕೋಟಿ ರೂ. ಗಳಿಗೆ ತಲುಪಿಸಿದ್ದೇ ಸಿದ್ದರಾಮಯ್ಯನವರ ಸಾಧನೆ' ಎಂದು ಬಿಜೆಪಿ ಟೀಕಿಸಿದೆ.

`ಸಿದ್ದರಾಮಯ್ಯ ಅವರೇ, ಕೃಷ್ಣಾ ಕಣಿವೆ ನೀರಾವರಿ ಯೋಜನೆಗೆ ವಾರ್ಷಿಕ 10ಸಾವಿರ ಕೋಟಿ ರೂ.ಅನುದಾನ ನೀಡುತ್ತೇನೆಂದು ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆ ಸಂದರ್ಭದಲ್ಲಿ ಘೋಷಣೆ ಮಾಡಿದ್ದಿರಿ. ಆದರೆ, ಕೊಟ್ಟಿದ್ದು ಬಿಡಿಗಾಸು. ಅಂಗೈಯಲ್ಲಿ ಆಕಾಶ ತೋರಿಸುವ ವಿಚಾರದಲ್ಲಿ ನೀವು ಪ್ರವೀಣರಲ್ಲವೇ? ಅಧಿಕಾರಾವಧಿಯ ಕೊನೆಯಲ್ಲಿ `ಸಿಎಂ 1 ಲಕ್ಷ ಮನೆ' ಯೋಜನೆ ಬೆಂಗಳೂರಿನ ಬಡವರಿಗೆ ಘೋಷಣೆ ಮಾಡಿದ್ದರು. ಆದರೆ, ಬಜೆಟ್‍ನಲ್ಲಿ ಅನುದಾನ ಕಾಯ್ದಿರಿಸಲಿಲ್ಲ. ಮನೆ ಕಟ್ಟುವುದಕ್ಕೆ ಆಯ್ದುಕೊಂಡ ಜಾಗವೆ ವಿವಾದಗ್ರಸ್ಥವಾಗಿತ್ತು. ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯಗೆ ಪಿಎಚ್‍ಡಿ ನೀಡಬಹುದು' ಎಂದು ಬಿಜೆಪಿ ಲೇವಡಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News