ಡಿಕೆಶಿ ವಿರುದ್ಧ ಹೇಳಿಕೆ ವಿಚಾರ; ಉಗ್ರಪ್ಪ ಮುಚ್ಚಿದ ಲಕೋಟೆಯಲ್ಲಿ ಉತ್ತರ ನೀಡಿದ್ದಾರೆ: ರೆಹ್ಮಾನ್ ಖಾನ್

Update: 2021-10-23 14:16 GMT

ಬೆಂಗಳೂರು, ಅ. 23: `ತಮ್ಮ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರು ಮುಚ್ಚಿದ ಲಕೋಟೆಯಲ್ಲಿ ಉತ್ತರ ನೀಡಿದ್ದು, ಅದನ್ನು ಬಹಿರಂಗಪಡಿಸಲು ಆಗುವುದಿಲ್ಲ' ಎಂದು ಕಾಂಗ್ರೆಸ್ ಶಿಸ್ತು ಸಮಿತಿ ಅಧ್ಯಕ್ಷ ರಹಮಾನ್ ಖಾನ್ ಸ್ಪಷ್ಟಣೆ ನೀಡಿದ್ದಾರೆ.

ಶನಿವಾರ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, `ಬೆಳಗ್ಗೆ ಉಗ್ರಪ್ಪ ತಮ್ಮನ್ನು ಭೇಟಿ ಮಾಡಿ ಕಾಂಗ್ರೆಸ್ ಶಿಸ್ತು ಸಮಿತಿ ನೀಡಿದ್ದ ನೋಟಿಸ್‍ಗೆ ಉತ್ತರ ನೀಡಿದ್ದಾರೆ. ಇತ್ತೀಚೆಗೆ ಕೆಪಿಸಿಸಿ ಕಚೇರಿಯಲ್ಲಿ ತಾವು ಮತ್ತು ಕೆಪಿಸಿಸಿ ಮಾಧ್ಯಮ ವಿಭಾಗದ ಸಮನ್ವಯಕಾರ ನಡುವೆ ನಡೆದ ಚರ್ಚೆ ಹಾಗೂ ಅದರಿಂದ ಉಂಟಾದ ಗೊಂದಲಗಳಿಗೆ ಸ್ಪಷ್ಟೀಕರಣ ನೀಡಿದ್ದಾರೆ' ಎಂದು ತಿಳಿಸಿದರು.

`ಉಭಯ ನಾಯಕರ ಸಂಭಾಷಣೆಯ ಆಡಿಯೋ ವೈರಲ್ ಆದ ಹಿನ್ನೆಲೆ ಶಿಸ್ತು ಸಮಿತಿ ಸಲೀಂರನ್ನ ಉಚ್ಛಾಟನೆ ಮಾಡಿತ್ತು. ಉಗ್ರಪ್ಪಗೆ ಉತ್ತರ ನೀಡುವಂತೆ ಸೂಚಿಸಿತ್ತು. ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮುಜುಗರ ಆಗುವ ರೀತಿ ಮಾತುಕತೆ ನಡೆದಿದೆ ಎಂಬ ಮಾಹಿತಿ ಇದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ವಿಚಾರಣೆ ನಡೆಸುತ್ತೇವೆ' ಎಂದು ಅವರು ತಿಳಿಸಿದರು. 

`ಮುಚ್ಚಿದ ಲಕೋಟೆಯಲ್ಲಿ ಉಗ್ರಪ್ಪ ಉತ್ತರ ನೀಡಿದ್ದು ನಾನು ಇನ್ನೂ ನೋಡಿಲ್ಲ. ಉತ್ತರ ಏನಿದೆ ಎಂದು ಬಹಿರಂಗ ಪಡಿಸಲು ಆಗುವುದಿಲ್ಲ. ಮೊದಲು ಉತ್ತರವನ್ನ ನಮ್ಮ ಶಿಸ್ತು ಕಮಿಟಿ ಮುಂದೆ ಇಡಬೇಕು. ಸದ್ಯದಲ್ಲಿ ಕಮಿಟಿಯನ್ನ ಕರೆದು, ಆ ವರದಿಯನ್ನ ಮುಂದಿಡುತ್ತೇನೆ. ಉತ್ತರ ಕೇಳಿದ್ದೆವು. ಅವರು ಉತ್ತರ ಕೊಟ್ಟಿದ್ದಾರೆ, ಮುಂದೆ ಏನಾಗುತ್ತೆ ನೋಡಬೇಕು' ಎಂದು ರೆಹ್ಮಾನ್ ಖಾನ್ ತಿಳಿಸಿದರು.

`ಈ ವಿಷಯ ಗಮನಕ್ಕೆ ಬಂದ ಕೂಡಲೇ ಶಿಸ್ತು ಸಮಿತಿ ಸಭೆ ಕರೆದು, ಸಭೆಯಲ್ಲಿ ದೀರ್ಘವಾಗಿ ವಿಚಾರ ನಡೆಸಿದೆವು. ದೀರ್ಘವಾಗಿ ವಿಚಾರ ನಡೆಸಿಯೇ ಸಲೀಂರನ್ನ ಉಚ್ಛಾಟನೆ ಮಾಡಿದ್ದು. ಆದರೆ, ಉಗ್ರಪ್ಪನವರ ಮಾತು ಸ್ಪಷ್ಟವಾಗಿಲ್ಲದ ಕಾರಣ ಅವರ ಮೇಲೆ ನಾವು ಶಿಸ್ತು ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಅದನ್ನ ಎಐಸಿಸಿ ತೀರ್ಮಾನ ಮಾಡಲಿದೆ ಎಂದು ರೆಹ್ಮಾನ್ ಖಾನ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News