ಚನ್ನಮ್ಮನ ಹೆಸರಿನ ಮಹಿಳಾಸೌಧ ನಿರ್ಮಿಸಿ: ಬಸವಜಯ ಮೃತ್ಯುಂಜಯ ಸ್ವಾಮೀಜಿ

Update: 2021-10-23 14:21 GMT

ಬೆಂಗಳೂರು, ಅ. 23: ರಾಜ್ಯದ ನಾನಾ ಭಾಗಗಳಿಂದ ಬೆಂಗಳೂರಿಗೆ ಬಂದ ದುಡಿಯುತ್ತಿರುವ ಮಹಿಳೆಯರ ಹಿತದೃಷ್ಟಿಯಿಂದ ಚನ್ನಮ್ಮನ ಹೆಸರಿನ ಮಹಿಳಾಸೌಧವನ್ನು ನಿರ್ಮಿಸಿ, ಅಲ್ಲಿ ಮಹಿಳೆಯರಿಗೆ ಉಪಯೋಗವಾಗುವ ಕೆಲಸಗಳನ್ನು ಮಾಡಲು ಸರಕಾರ ಮುಂದಾಗಬೇಕು ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಮನವಿ ಮಾಡಿದರು.

ಶನಿವಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮನ ಜಯಂತ್ಯುತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸೂರ್ಯ ಮುಳುಗಬಹುದು, ಆದರೆ ಬ್ರಿಟಿಷರು ಮಾತ್ರ ಮಣಿಯುತ್ತಿರಲಿಲ್ಲ. ಅಂತಹ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಚನ್ನಮ್ಮ ಹೋರಾಡಿ ವಿಜಯೋತ್ಸವವನ್ನು ಸಾಧಿಸಿದ್ದಳು. ಅಂತಹ ವೀರನಾರಿಯ ಹೆಸರಿನಲ್ಲಿ ಸರಕಾರ ಬೆಂಗಳೂರಿನಲ್ಲಿ ಒಂದು ಕಟ್ಟಡವನ್ನು ನಿರ್ಮಿಸಿಲ್ಲ. ರಾಣಿ ಚನ್ನಮ್ಮ ಇಂದಿಗೂ ಎಲ್ಲ ಮಹಿಳೆಯರಿಗೂ ಆದರ್ಶರಾಗಿದ್ದಾಳೆ. ಅವಳ ಸ್ವತಂತ್ರ ಮತ್ತು ಸ್ವಾಭಿಮಾನ ಎಲ್ಲಾ ಮಹಿಳೆಯರು ಅಳವಡಿಸಿಕೊಳ್ಳಬಹುದು ಎಂದರು. 

ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿ ಮೊದಲ ಬಾರಿಗೆ ಜಯ ಸಾಧಿಸಿದ ಭಾರತೀಯ ರಾಣಿಯಾಗಿದ್ದಾಳೆ. ಭಾರತದ ಇತಿಹಾಸದಲ್ಲಿ ರಾಣಿ ಚೆನ್ನಮ್ಮ ಬೆಳ್ಳಿಚುಕ್ಕಿ. ಆದ್ದರಿಂದ ಕೇವಲ ಒಂದು ಭಾಗ ಅಥವಾ ಒಂದು ಸಮುದಾಯಕ್ಕೆ ಮಾತ್ರ ಜಯಂತಿಯನ್ನು ಸೀಮಿತಗೊಳಿಸದೆ, ಇಡೀ ಭಾರತದಾದ್ಯಂತ ಆಚರಿಸುವಂತಾಗಬೇಕು ಎಂದು ಅವರು ಹೇಳಿದರು. 

ಈಗಾಗಲೇ ಸಂಸತ್ ಭವನದ ಮುಂದೆ ಚನ್ನಮ್ಮ ಮತ್ತು ಬಸವ ಪುತ್ಥಳಿಗಳಿವೆ. ಪ್ರಧಾನಮಂತ್ರಿಗಳು ಪ್ರತಿವರ್ಷ ಬಸವ ಮತ್ತು ಚನ್ನಮ್ಮನ ಜಯಂತಿಯಂದು ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಜಯಂತ್ಯುತ್ಸವವನ್ನು ವಿಜೃಂಭಣೆಯಿಂದ ಆಚರಿಸಬೇಕು ಎಂದು ಅವರು ತಿಳಿಸಿದರು. 
ಕಿತ್ತೂರು ಅರಮನೆಯು ಇಂದು ಹಾಳಾಗಿದೆ. ಏಕೆಂದರೆ ರಾಣಿ ಚನ್ನಮ್ಮ ಬ್ರಿಟಿಷರಿಗೆ ಕಪ್ಪಕಾಣಿಕೆ ಕೊಡದೇ ಹೋರಾಟ ಮಾಡಿದ್ದಾಳೆ. ಒಂದು ವೇಳೆ ಕಪ್ಪಕಾಣಿಕೆಯನ್ನು ನೀಡಿ ಬ್ರಿಟಿಷರೊಂದಿಗೆ ರಾಜಿ ಆಗಿದ್ದರೆ, ಮೈಸೂರಿನ ಅರಮನೆಯಂತೆ ಹೆಸರು ಗಳಿಸುತ್ತಿತ್ತು ಎಂದ ಅವರು, ಸರಕಾರ ಇನ್ನು ಮುಂದೆಯಾದರೂ ಕಿತ್ತೂರು ಅರಮನೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು.

2019 ಮತ್ತು 2020ನೇ ಸಾಲಿನಲ್ಲಿ ನೆರೆ ಸಂತ್ರಸ್ತರಿಗೆ ಅನುಕೂಲವಾಗುವಂತೆ ಚನ್ನಮ್ಮನ ಜಯಂತಿಯ ಅನುದಾನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಯಿತು. ಈ ವರ್ಷ ತುಂಬಾ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದ ಅವರು, ಬೆಂಗಳೂರಿನ ಶಾಸಕರು ಮತ್ತು ಸಂಸದರು ಜಯಂತಿಗೆ ಬರಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕ ರಂಗಪ್ಪ, ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News