ಬಾಂಗ್ಲಾದೇಶದಲ್ಲಿ ಹಿಂಸಾಚಾರ ಖಂಡಿಸಿ ಬೆಂಗಳೂರಿನಲ್ಲಿ ಇಸ್ಕಾನ್ ಪ್ರತಿಭಟನೆ

Update: 2021-10-23 15:20 GMT

ಬೆಂಗಳೂರು, ಅ. 23: ಕಳೆದ ಕೆಲವು ವಾರಗಳಿಂದ ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಯನ್ನು ಖಂಡಿಸಿ, ನಗರದ ಇಸ್ಕಾನ್ ದೇವಾಲಯದ ಭಕ್ತರು ಶನಿವಾರದಂದು ಕೀರ್ತನಾ ಮೆರವಣಿಗೆಯನ್ನು ಹಮ್ಮಿಕೊಂಡಿದ್ದರು.

ಇಸ್ಕಾನ್‍ನ ಅಧ್ಯಕ್ಷ ಮಧುಪಂಡಿತ ದಾಸ ಮಾತನಾಡಿ, ಬಾಂಗ್ಲಾದೇಶದಲ್ಲಿ ನಿರಂತರವಾಗಿ ಹಿಂದುಗಳ ಮೇಲೆ ಹಿಂಸಾತ್ಮಕ ಕೃತ್ಯಗಳು ನಡೆಯುತ್ತಿವೆ. ಇದರಿಂದ ನಮಗೆ ದುಃಖವಾಗಿದೆ. ಆದುದರಿಂದ ಅವರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಿದ್ದೇವೆ ಎಂದರು.

ಅಲ್ಪಸಂಖ್ಯಾತರ ರಕ್ಷಣೆಗೆ ಬಾಂಗ್ಲಾದೇಶ ಸರಕಾರವು ಕೂಡಲೇ ಮುಂದಾಗಬೇಕು. ಹಾಗೆಯೇ ಇನ್ನುಮುಂದೆ ಇಂತಹ ಕೃತ್ಯಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದ ಅವರು, ಭಾರತ ಸರಕಾರವು ನೆರೆಯ ರಾಷ್ಟ್ರದಲ್ಲಿ ವಾಸಿಸುತ್ತಿರುವ ಹಿಂದುಗಳನ್ನು ರಕ್ಷಿಸಬೇಕು ಎಂದು ಮನವಿ ಮಾಡಿದರು.

ಇಸ್ಕಾನ್‍ನ ಸಂವಹನ ಮತ್ತು ಯೋಜನಾ ವಿಭಾಗದ ಮುಖ್ಯಸ್ಥ ನವೀನ ನೀರದದಾಸ ಮಾತನಾಡಿ, ವಿದೇಶಗಳಲ್ಲಿ ಕೋಮುವಾದಕ್ಕೆ ಗುರಿಯಾಗಿ ದುಃಖ ಅನುಭವಿಸುತ್ತಿರುವ ಹಿಂದುಗಳಲ್ಲಿ ಐಕ್ಯತೆ ಮೂಡಿಸುವುದು ಈ ಕೀರ್ತನಾ ಮೆರವಣಿಗೆಯ ಉದ್ದೇಶವಾಗಿದೆ. ಇದು ಮತ್ತೊಂದು ಧರ್ಮದ ವಿರುದ್ಧವಾಗಲೀ ಅಥವಾ ಬಾಂಗ್ಲಾ ಸರಕಾರದ ವಿರುದ್ಧವಾಗಲೀ ಅಲ್ಲ ಎಂದರು.

ಬಾಂಗ್ಲಾದೇಶದಲ್ಲಿ ಇಸ್ಕಾನ್ ಸೇರಿದಂತೆ ಹಿಂದುಗಳ ಧಾರ್ಮಿಕ ಕಟ್ಟಡಗಳನ್ನು ದ್ವಂಸಗೊಳಿಸಿ, ಭಕ್ತರ ಭಾವನೆಗಳಿಗೆ ಧಕ್ಕೆ ತರುವ ಕೃತ್ಯಗಳು ನಡೆಯುತ್ತಿವೆ. ದುರ್ಗಾ ಮಾತೆಯ ಮಂದಿರವನ್ನು ಸುಡಲಾಗಿದೆ. ಮತಾಂಧರರು ನೌಖಲಿಯ ಇಸ್ಕಾನ್ ಮೇಲೆ ದಾಳಿ ನಡೆಸಿ, ಮುಗ್ಧರನ್ನು ಕೊಲೆ ಮಾಡಿದ್ದಾರೆ. ಅಲ್ಲದೇ ದಾಳಿಯಲ್ಲಿ ಇಸ್ಕಾನ್‍ನ ಪ್ರಾಂಥ ಚಂದ್ರದಾಸ್ ಮತ್ತು ಜತನ್ ಚಂದ್ರದಾಸ್ ಅವರನ್ನು ಕೊಲ್ಲಲಾಗಿದೆ ಎಂದರು.

ಹಿಂದುಗಳನ್ನು ಗುರಿಯಾಗಿಸಿ ಅವರ ಮನೆ ಮತ್ತು ವ್ಯಾಪಾರ ಮಳಿಗೆಗಳಿಗೆ ಬೆಂಕಿ ಇಟ್ಟಿದ್ದಾರೆ. ಕಳೆದ ಒಂದು ದಶಕದಿಂದ ಬಾಂಗ್ಲಾದಲ್ಲಿ ಇಂತಹ ಕೃತ್ಯಗಳು ನಡೆಯುತ್ತಲೇ ಇವೆ. ಇಂತಹ ಕೋಮು ಗಲಭೆಗಳು ಮನುಕುಲಕ್ಕೆ ಮಾರಕವಾಗಿದೆ. ಆದುದರಿಂದ ಕೋಮು ಗಲಭೆಗಳು ನಿಲ್ಲಬೇಕು. ಅದನ್ನು ತಡೆಯುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಇಸ್ಕಾನ್ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News