ಚುನಾವಣಾ ಸಮಯದಲ್ಲಿ ಮಾತ್ರ ಕಾಂಗ್ರೆಸ್‍ಗೆ ಅಲ್ಪಸಂಖ್ಯಾತರು ನೆನಪಾಗುತ್ತಾರೆ: ಮುಖ್ಯಮಂತ್ರಿ ಬೊಮ್ಮಾಯಿ ಟೀಕೆ

Update: 2021-10-23 15:36 GMT

ಹಾನಗಲ್, ಅ.23: ಅಲ್ಪಸಂಖ್ಯಾತರ ಬಗ್ಗೆ ಕಾಂಗ್ರೆಸ್ ನವರು ಎಲ್ಲಿಲ್ಲದ ಪ್ರೀತಿ ತೋರಿಸುತ್ತಾರೆ. ಚುನಾವಣೆ ಸಮಯದಲ್ಲಿ ಮಾತ್ರ ಈ ಸಮುದಾಯ ಅವರಿಗೆ ನೆನಪಾಗುತ್ತದೆ. ಉಳಿದ ಸಮಯದಲ್ಲಿ ಅವರನ್ನು ಕಾಂಗ್ರೆಸ್ ಪರಿಗಣಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.

ಶನಿವಾರ ಹಾನಗಲ್ ವಿಧಾನಸಭಾ ಕ್ಷೇತ್ರದ ಚಿಕ್ಕಾಂಶಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಅವರು, 5 ವರ್ಷ ಅಲ್ಪಸಂಖ್ಯಾತರನ್ನು ಬಾವಿಯಲ್ಲಿಟ್ಟಿರುತ್ತಾರೆ. ಚುನಾವಣೆ ಬಂದಾಗ ಹಗ್ಗ ಕೊಟ್ಟು ಮೇಲೆ ತಂದು ಓಟ್ ಹಾಕಿಸಿಕೊಂಡು ಮತ್ತೆ ಬಾವಿಗೆ ದೂಡುತ್ತಾರೆ. ಅಲ್ಪಸಂಖ್ಯಾತರನ್ನು ಕಾಂಗ್ರೆಸ್‍ನವರು ದುರುಪಯೋಗ ಮಾಡಿಕೊಂಡಿದ್ದಾರೆ. ಅಲ್ಪಸಂಖ್ಯಾತರಿಂದಲೇ ಕಾಂಗ್ರೆಸ್ ಅಸ್ತಿತ್ವದಲ್ಲಿದೆ.  ಅವರಿಲ್ಲದಿದ್ದರೆ ಕಾಂಗ್ರೆಸ್ ಪಕ್ಷ ದೇಶದಲ್ಲಿ ಹುಡುಕುವಂತಹ ಪರಿಸ್ಥಿತಿ ಬರುತ್ತಿತ್ತು ಎಂದರು.

ಕಾಂಗ್ರೆಸ್‍ಗೆ ಅಲ್ಪಸಂಖ್ಯಾತರ ರಕ್ಷಣೆ ಇದೆ, ಆದರೆ ಕಾಂಗ್ರೆಸ್ ಅಲ್ಪಸಂಖ್ಯಾತರ ರಕ್ಷಣೆ ಮಾಡುತ್ತದೆ ಎಂದು ಹೇಳುತ್ತಾರೆ. ಪ್ರತಿಪಕ್ಷದವರ ಟೀಕೆಗಳೆ ನನಗೆ ಮೆಟ್ಟಿಲು. ಈ ಟೀಕೆ ಎಂಬ ಮೆಟ್ಟಿಲುಗಳನ್ನು ಒಂದೊಂದಾಗಿ ಏರಿ ಕರ್ನಾಟಕವನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.

ಯಾರು ಎಷ್ಟೇ ಟೀಕೆ ಮಾಡಲಿ. ನನ್ನ ಗುರಿ ರೈತರ, ದೀನದಲಿತರ, ನೀರಾವರಿ ಯೋಜನೆಗಳ ಕರ್ನಾಟಕದ ಸಮಗ್ರ ಅಭಿವೃದ್ದಿಯತ್ತ ಮಾತ್ರ ಇರುತ್ತದೆ. ಸಂಪೂರ್ಣ ಕರ್ನಾಟಕವನ್ನು ಅಭಿವೃದ್ಧಿ ಮಾಡುವುದೊಂದೇ ನನ್ನ ಕಾಯಕ. ಆ ಗುರಿಯಿಂದ ನಾನು ವಿಮುಖವಾಗುವುದಿಲ್ಲ ಎಂದು ಅವರು ತಿಳಿಸಿದರು.

ಅನುದಾನದ ರಿಪೋರ್ಟ್ ಕಾರ್ಡ್: ಹಾನಗಲ್ ತಾಲೂಕಿನ 38433 ರೈತರಿಗೆ ತಲಾ 10 ಸಾವಿರ ರೂ. ನೀಡಲಾಗಿದೆ. ಕೋವಿಡ್ ಸಂದರ್ಭದಲ್ಲಿ 12 ಸಾವಿರ ಕಾರ್ಮಿಕರಿಗೆ ಕಿಟ್ ನೀಡಲಾಗಿದೆ. ಪ್ರಧಾನಮಂತ್ರಿ ಕಲ್ಯಾಣ ಯೋಜನೆಯಲ್ಲಿ 66 ಸಾವಿರ ಮಂದಿಗೆ ಉಚಿತವಾಗಿ ಪಡಿತರ ನೀಡಲಾಗಿದೆ. ಕಟ್ಟಡ ಕಾರ್ಮಿಕರಿಗೆ 42 ಕೋಟಿ ರೂ.ನೀಡಲಾಗಿದೆ. ಹೂವು ಮಾರುವ 6462 ಜನರಿಗೆ ತಲಾ 10 ಸಾವಿರ ರೂ. ನೀಡಲಾಗಿದೆ, ಹಣ್ಣು ಮಾರುವ 1980 ಜನರಿಗೆ ತಲಾ 10 ಸಾವಿರ ರೂ. ನೀಡಲಾಗಿದೆ. ಒಟ್ಟು 17.60 ಕೋಟಿ ರೂ.ಹಾನಗಲ್ ತಾಲೂಕಿನ ಜನರಿಗೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಮೆಕ್ಕೆಜೋಳ ಬೆಳೆಗಾರರಿಗೆ 17.63 ಕೋಟಿ ರೂ.ಅನುದಾನ ನೀಡಲಾಗಿದೆ. ಎಸ್ಸಿ, ಎಸ್ಟಿ ಸಮುದಾಯಕ್ಕೆ 20 ಕೋಟಿ ರೂ.ಅನುದಾನ ನೀಡಲಾಗಿದೆ. ಗ್ರಾಮೀಣ ಮತ್ತು ಲೋಕೋಪಯೋಗಿ ಸೇರಿ ಒಟ್ಟು 80 ಕೋಟಿ ರೂ. ಈ ವರ್ಷ ಮಂಜೂರು ಮಾಡಲಾಗಿದೆ. ಅಕ್ಕಿ ಆಲೂರು ಮತ್ತು ಹಾನಗಲ್ ಎರಡೂ ಐಟಿಐ ಉನ್ನತೀಕರಣಕ್ಕೆ 60 ಕೋಟಿ ರೂ.ನೀಡಲಾಗಿದೆ. ಗ್ರಾಮೀಣ ಕುಡಿಯುವ ನೀರಿಗೆ 64 ಕೋಟಿ ರೂ.ಮಂಜೂರಾಗಿದೆ. ಅದರಲ್ಲಿ 26 ಕೋಟಿ ರೂ.ಅನುದಾನ ಬಳಕೆ ಆಗಿದೆ. ಹಾನಗಲ್ ಕ್ಷೇತ್ರದಲ್ಲಿ 20 ಕೋಟಿ ರೂ.ಅನುದಾನವನ್ನು ಸಂಸದ ಶಿವಕುಮಾರ ಉದಾಸಿ ಮಂಜೂರು ಮಾಡಿಸಿದ್ದಾರೆ ಎಂದು ಅವರು ತಿಳಿಸಿದರು.

ಭಾರತೀಯ ಜನತಾ ಪಕ್ಷ ಕಾಯಕದಲ್ಲಿ ನಂಬಿಕೆ ಇಟ್ಟಿದೆ. ಮಾತುಗಳಿಂದ ಹೊಟ್ಟೆ ತುಂಬುವುದಿಲ್ಲ ಅಭಿವೃದ್ಧಿಯಾಗುವುದಿಲ್ಲ. ರಾಜಕಾರಣ ಅಂದರೆ ಜನರನ್ನು ಮರುಳು ಮಾಡುವುದಲ್ಲ. ಕೆಳಮಟ್ಟದಲ್ಲಿ ಭಾಷೆ ಬಳಸಿದರೆ ದೊಡ್ಡವರಾಗುವುದಿಲ್ಲ. ಅಭಿವೃದ್ಧಿ ಒಂದೇ ನಮ್ಮ ಪಕ್ಷದ ಅಜೆಂಡಾ. ನಮ್ಮ ಜನ ಕೃತಜ್ಞರು ಕಷ್ಟಕಾಲದಲ್ಲಿ ಕೈಹಿಡಿದ ಸರಕಾರವನ್ನು ಹಾನಗಲ್ ತಾಲೂಕಿನ ಜನ ಕೈ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ಯಡಿಯೂರಪ್ಪ ಈ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಹಾನಗಲ್ ಕ್ಷೇತ್ರದ ಜನ ಕೆರೆ ತುಂಬಿಸುವ ಯೋಜನೆಯ ಬೇಡಿಕೆ ಇಟ್ಟಿದ್ದರು. ಈ ಕ್ಷೇತ್ರದ ಅಭಿವೃದ್ಧಿಗಾಗಿ ಒಂದೇ ದಿನದಲ್ಲಿ 625 ಕೋಟಿ ರೂ.ಅನುದಾನವನ್ನು ಮಂಜೂರು ಮಾಡಿದರು. ಇದು ಭಾರತೀಯ ಜನತಾ ಪಕ್ಷ ಅಭಿವೃದ್ಧಿಗೆ ನೀಡುವ ಮಹತ್ವ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News