ಗಿರಿಶ್ರೇಣಿಯ ಸುಂದರ ಪರಿಸರ ಹಾಳುಗೆಡವುವವರ ವಿರುದ್ಧ ಕಾನೂನು ಕ್ರಮ: ಎಸಿ ಡಾ.ಎಚ್.ಎಲ್.ನಾಗರಾಜ್
ಚಿಕ್ಕಮಗಳೂರು, ಅ.23: ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ತ್ಯಾಜ್ಯ ಎಸೆದು ಪ್ರವಾಸಿ ತಾಣಗಳಿಗೆ ಅಪಕೀರ್ತಿ ತರಬಾರದು. ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ದಂಢದೊಂದಿಗೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಇಲಾಖೆ ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಎಚ್ಚರಿಸಿದ್ದಾರೆ.
ಶನಿವಾರ ಜಿಲ್ಲಾಡಳಿತ, ನಗರಸಭೆ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಗಿರಿಶ್ರೇಣಿಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯು ಪ್ರವಾಸಿತಾಣಗಳ ಬೀಡಾಗಿದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪ್ರವಾಸಿಕ್ಕೆ ಬರುವವರ ಪೈಕಿ ಕೆಲವರು ಮೌಡ್ಯಕ್ಕೆ ಒಳಗಾಗಿ ಬಳಸಿದ ಬಟ್ಟೆ, ತೆಂಗಿನಕಾಯಿಯಂತಹ ತ್ಯಾಜ್ಯವನ್ನು ಎಲ್ಲೆಂದರಲ್ಲಿ ತಂದು ಹಾಕುತ್ತಿದ್ದಾರೆ.ಪ್ಲಾಸ್ಟಿಕ್ ಮತ್ತಿತ್ತರ ವಸ್ತುಗಳನ್ನು ಸುಂದರ ಪರಿಸರದಲ್ಲೇ ಎಸೆದು ಹೋಗುತ್ತಿದ್ದಾರೆ. ಇದರಿಂದಾಗಿ ಪರಿಸರ ಹಾನಿಯಾಗುವುದಲ್ಲದೇ, ವನ್ಯಜೀವಿಗಳಿಗೂ ಕುತ್ತು ಬರಲಿದೆ. ಪ್ರವಾಸಿಗರು ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಪರಿಸರನ್ನು ಸಂರಕ್ಷಣೆ ಮಾಡುವಂತೆ ವಿನಂತಿಸಿದರು.
ಜಿಲ್ಲಾಡಳಿತದ ವತಿಯಿಂದ ಗಿರಿಶ್ರೇಣಿ ಭಾಗದಲ್ಲಿ ಸ್ವಚ್ಛತೆಯ ಬಗ್ಗೆ ಈಗಾಗಲೇ ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಐಡಿಪೀಠ, ಮುಳ್ಳಯ್ಯನಗಿರಿ ಮತ್ತೀತರ ಕಡೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಸೆಯುತ್ತಿದ್ದಾರೆ. ಹೀಗೆ ಪ್ರಕೃತಿ ಸೌಂಧರ್ಯವನ್ನು ಹಾಳುವ ಮಾಡುವವರ ವಿರುದ್ದ ಪ್ರವಾಸಿಗರ ನಡವಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಪ್ರವಾಸಿತಾಣಗಳಿಗೆ ನಿರ್ಬಂಧ ವಿಧಿಸುವ ಅನಿವಾರ್ಯತೆ ಎದುರಾಗಬಹುದು ಎಂದು ಎಚ್ಚರಿಸಿದ ಅವರು, ಜಿಲ್ಲಾಡಳಿತ ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ರಾಮ ಅರಣ್ಯ ಸಮಿತಿ ರಚಿಸಿ ಪರಿಸರ ಸಂರಕ್ಷಣೆಗೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ಸಿಬ್ಬಂದಿ ಸಂಖ್ಯೆ ಹೆಚ್ಚಿಸಿ ಪರಿಸರದ ಬಗ್ಗೆ ತೀವ್ರ ನಿಗಾವಹಿಸಲು ಸ್ಥಳೀಯ ಆಡಳಿತಕ್ಕೆ ಸೂಚಿಸಲಾಗುವುದು. ಸ್ಥಳೀಯ ಪಂಚಾಯತ್ ರೂಪಿಸಿದ ನಿಯಮಗಳನ್ನು ಉಲ್ಲಂಘಿಸಿ ಪ್ರವಾಸಿ ತಾಣಗಳನ್ನು ತ್ಯಾಜ್ಯಗಳ ಮೂಲಕ ಹಾಳು ಗಡವಿದ್ದಲ್ಲಿ ದಂಡದೊಂದಿಗೆ ಸೂಕ್ತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಗರಸಭೆ ಪೌರಾಯುಕ್ತ ಬಿ.ಸಿ ಬಸವರಾಜ್ ಮಾತನಾಡಿ, ಗಿರಿಶ್ರೇಣಿ ಭಾಗದಲ್ಲಿ ಈಹಿಂದೆ ಸ್ವಚ್ಛತಾ ಅಭಿಯಾನ ಕೈಗೊಳ್ಳುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಗಿತ್ತು. ಆದರೂ ಇಲ್ಲಿಗೆ ಆಗಮಿಸುವ ಪ್ರವಾಸಿಗರು ಅಸಡ್ಡೆ ತೋರುವ ಮೂಲಕ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಸೆದು ಪರಿಸರವನ್ನು ಹಾಳುಮಾಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಇಲ್ಲಿನ ಸ್ಥಳೀಯ ಪಂಚಾಯತ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರು ಪ್ರಕೃತಿ ಸೌಂದರ್ಯವನ್ನು ಕಾಪಾಡಬೇಕು. ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಬೇಕು, ಸಾರ್ವಜನಿಕರು, ಪ್ರವಾಸಿಗರು ಪ್ರಕೃತಿ, ವನ್ಯಜೀವಿಗಳೊಂದಿಗೆ ಆಟವಾಡದೇ ಅದನ್ನು ಉಳಿಸಿ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಯೋಚಿಸಬೇಕಿದೆ. ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಬೇಕು. ನಿಯಮಗಳನ್ನು ಉಲ್ಲಂಘಿಸಿ ಪರಿಸರ ಹಾನಿ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳವ ಬಗ್ಗೆ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಹಶೀಲ್ದಾರ್ ಡಾ.ಕಾಂತರಾe ಹಾಗೂ ನಗರಸಭೆ ಮತ್ತುಅರಣ್ಯ ಇಲಾಖೆ ಸಿಬ್ಬಂದಿ, ವಿವಿಧ ಸಂಘಸಂಸ್ಥೆಗಳು, ಪರಿಸರ ಪ್ರೇಮಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದರು.