ಚಿಕ್ಕಮಗಳೂರು: ನಾಳೆಯಿಂದ 1-5ನೇ ತರಗತಿ ಶಾಲೆಗಳ ಆರಂಭ; 1330 ಶಾಲೆಗಳಲ್ಲಿ ಚಿಣ್ಣರ ಕಲರವ

Update: 2021-10-24 16:13 GMT

ಚಿಕ್ಕಮಗಳೂರು, ಅ.24: ಕೋವಿಡ್ ಸೋಂಕಿನ ಕಾರಣಕ್ಕೆ ಬಾಗಿಲು ಮುಚ್ಚಿದ್ದ ಶಾಲೆಗಳನ್ನು ರಾಜ್ಯ ಸರಕಾರ ಹಂತ ಹಂತವಾಗಿ ಆರಂಭಿಸುತ್ತಿದ್ದು, 6-10ನೇ ತರಗತಿ, ಪಿಯುಸಿ, ಪದವಿ ಕಾಲೇಜುಗಳನ್ನು ಆರಂಭಿಸಿ 3 ತಿಂಗಳಾದರೂ ಇದುವರೆಗೂ ಬಾಗಿಲು ಮುಚ್ಚಿದ್ದ 1-5ನೇ ತರಗತಿಗಳನ್ನು ಆರಂಭಿಸಲು ಸರಕಾರ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಅ.25ರಂದು ಸೋಮವಾರ ಕಾಫಿನಾಡಿನ 1ರಿಂದ 5ನೇ ತರಗತಿವರೆಗಿನ ಶಾಲೆಗಳತ್ತ ಚಿಣ್ಣರು ಹೆಜ್ಜೆ ಹಾಕಲಿದ್ದಾರೆ.

ಕೋವಿಡ್ ಬಳಿಕ 1ನೇ ತರಗತಿಯಿಂದ 5ನೇ ತರಗತಿವರೆಗಿನ ಶಾಲೆಗಳನ್ನು ಸಂಪೂರ್ಣವಾಗಿ ಮುಚ್ಚಿದ್ದು, 19 ತಿಂಗಳ ಬಳಿಕ ಪುನಾರಂಭಗೊಳ್ಳುತ್ತಿರುವುದರಿಂದ ಮನೆಯ ಮೂಲೆಯಲ್ಲಿ ಎಸೆದಿದ್ದ ಶಾಲಾ ಬ್ಯಾಗ್‍ಗಳನ್ನು ಮಕ್ಕಳು ಹೆಗಲಿಗೇರಿಸಿಕೊಂಡು ಶಾಲೆಯತ್ತಾ ಮುಖ ಮಾಡಲಿದ್ದಾರೆ. ಶಾಲೆ ಆರಂಭದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಶಿಕ್ಷಕರು ಈಗಾಗಲೇ ಸಕಲ ಸಿದ್ಧತೆಯಲ್ಲಿ ತೊಡಗಿದ್ದು, ಶಾಲೆಯ ಸುತ್ತಲ ಪರಿಸರ, ಶಾಲಾ ಕೊಠಡಿ, ಶೌಚಾಲಯ, ಬಿಸಿಯೂಟ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇತರ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮಕ್ಕಳನ್ನು ಮೊದಲ ದಿನ ಶಾಲೆಗೆ ಅದ್ದೂರಿಯಾಗಿ ಸ್ವಾಗತಿಸಲು ಸಿದ್ಧತೆ ಮಾಡಿಕೊಂಡಿದ್ದು, ಶಾಲಾ ಶಿಕ್ಷಕರ ಮಟ್ಟದಲ್ಲಿ ಸ್ವಾಗತ ಸಮಿತಿಯನ್ನು ರಚಿಸಿ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯತ್, ಪಟ್ಟಣ ಪ್ರದೇಶದಲ್ಲಿ ಪಟ್ಟಣ ಪಂಚಾಯತ್ ಹಾಗೂ ನಗರ ಪ್ರದೇಶದಲ್ಲಿ ನಗರಸಭೆ ಸೇರಿದಂತೆ ಇತರ ಸ್ಥಳೀಯ ಸಂಸ್ಥೆಗಳ ನೆರವಿನೊಂದಿಗೆ ಶಾಲಾ ಕೊಠಡಿಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗಿದೆ. ಮಕ್ಕಳು ಕುಳಿತುಕೊಳ್ಳುವ ಡೆಸ್ಕ್, ಬೆಂಚು, ಖುರ್ಚಿಗಳನ್ನು ಶುದ್ಧಗೊಳಿಸಿಸಲಾಗಿದೆ. ಒಟ್ಟಾರೆ ಮಕ್ಕಳು ಮತ್ತು ಪೋಷಕರಲ್ಲಿ ಭಯಮುಕ್ತ ವಾತವರಣ ನಿರ್ಮಿಸುವಂತಹ ವಾತವರಣವನ್ನು ಸೃಷ್ಟಿಸಲಾಗಿದೆ.

ಜಿಲ್ಲೆಯಲ್ಲಿ 1ನೇ ತರಗತಿಯಿಂದ 5ನೇ ತರಗತಿವರೆಗೂ ಒಟ್ಟು 724 ಶಾಲೆಗಳಿವೆ. 1ರಿಂದ 7ನೇ ತರಗತಿವರೆಗಿನ ಶಾಲೆಗಳ ಸಂಖ್ಯೆ 661 ಆಗಿದ್ದು, ಒಟ್ಟಾರೆ 1330 ಶಾಲೆಗಳಲ್ಲಿ 1ನೇ ತರಗತಿಯಿಂದ 5ನೇ ತರಗತಿಗಳು ಸೋಮವಾರ ಆರಂಭವಾಗಲಿವೆ. ಜಿಲ್ಲೆಯಲ್ಲಿ ಶೂನ್ಯ ಮಕ್ಕಳು ದಾಖಲಾಗಿರುವ 4 ಶಾಲೆಗಳಿದ್ದು, 1ರಿಂದ 5 ಮಕ್ಕಳಿರುವ 61 ಶಾಲೆಗಳಿವೆ, 10 ಮಕ್ಕಳಿರುವ 139 ಶಾಲೆ, 20 ಮಕ್ಕಳಿರುವ 360 ಶಾಲೆಗಳು, 30 ಮಕ್ಕಳಿರುವ 194 ಶಾಲೆ, 60 ಮಕ್ಕಳಿರುವ 304 ಶಾಲೆ, 90 ಮಕ್ಕಳಿರುವ 141 ಶಾಲೆ,  150 ಮಕ್ಕಳಿರುವ 96 ಶಾಲೆ 150ಕ್ಕಿಂತ ಹೆಚ್ಚಿರುವ 35 ಶಾಲೆಗಳು ಜಿಲ್ಲೆಯಲ್ಲಿ ಸೋಮವಾರ ತೆರೆದು ಕೊಳ್ಳಲಿವೆ.

ಜಿಲ್ಲೆಯಲ್ಲಿ 8 ಶೈಕ್ಷಣಿಕ ವಲಯಗಳಿದ್ದು, ಈ ಶೈಕ್ಷಣಿಕ ವಲಯಗಳಲ್ಲಿ 1ನೇ ತರಗತಿಗೆ 13,594 ವಿದ್ಯಾರ್ಥಿಗಳು, 2ನೇ ತರಗತಿಗೆ 13,490, 3ನೇ ತರಗತಿಗೆ 14,081, 4ನೇ ತರಗತಿಗೆ 14,188, 5ನೇ ತರಗತಿಗೆ 13,555 ವಿದ್ಯಾರ್ಥಿಗಳು ದಾಖಲಾಗಿದ್ದು, ಈ ಎಲ್ಲಾ ಮಕ್ಕಳು 19 ತಿಂಗಳ ಬಳಿಕ ಶಾಲೆ ಕಡೆಗೆ ಮುಖ ಮಾಡಲಿದ್ದಾರೆ.

ನ.1ರ ವರೆಗೂ ಅರ್ಧದಿನ ಶಾಲೆ: ಇಂದಿನಿಂದ 1ನೇ ತರಗತಿಯಿಂದ 5ನೇ ತರಗತಿ ಆರಂಭವಾಗಲಿದ್ದು, ನ.1ರವರೆಗೂ ಅರ್ಧದಿನ ಶಾಲೆ ನಡೆಸುವಂತೆ ಶಿಕ್ಷಣ ಇಲಾಖೆ ನಿರ್ದೇಶಿಸಿದ್ದು, ಅದರಂತೆ ನ.1ರ ತನಕ ಅರ್ಧದಿನ ಶಾಲೆ ನಡೆಯಲಿದೆ. ನ.1ರಂದು ಕನ್ನಡ ರಾಜ್ಯೋತ್ಸವ ರಜೆ ಇರುವ ಹಿನ್ನೆಲೆಯಲ್ಲಿ ನ.2ರಿಂದ ಪೂರ್ಣವಧಿಯ ಶಾಲೆ ಆರಂಭಗೊಳ್ಳಲಿದೆ. ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟ ನೀಡುವ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ದೊರೆತ್ತಿದ್ದು, ಈ ಮಕ್ಕಳಿಗೆ ನ.2ರಿಂದ ಬಿಸಿಯೂಟ ದೊರೆಯಲಿದೆ. ಈ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.

ಶಿಕ್ಷಕರ ಕೊರತೆ: ಜಿಲ್ಲೆಯ ಚಿಕ್ಕಮಗಳೂರು ತಾಲೂಕಿನ 3 ಶಾಲೆ, ಕೊಪ್ಪ ತಾಲೂಕಿನ 3 ಶಾಲೆ, ಮೂಡಿಗೆರೆ ತಾಲೂಕಿನ 4 ಶಾಲೆ ಹಾಗೂ ನರಸಿಂಹರಾಜಪುರ ಮತ್ತು ಶೃಂಗೇರಿ ತಾಲೂಕಿನ ತಲಾ 1 ಶಾಲೆಗಳು ಶೂನ್ಯ ಶಿಕ್ಷಕರನ್ನು ಹೊಂದಿದ್ದು, ಸರಕಾರ ಈಗಾಗಲೇ ಕೌನ್ಸಿಲಿಂಗ್ ಮೂಲಕ ಶಿಕ್ಷಕರ ವರ್ಗಾವಣೆಗೆ ಮುಂದಾಗಿದೆ. ಮುಂದಿನ ದಿನಗಳಲ್ಲಿ ಈ ಶಾಲೆಗಳಿಗೆ ಶಿಕ್ಷಕರು ಆಗಮಿಸುವ ಆಶಾಭಾವನೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ವಿ.ಮಲ್ಲೇಶಪ್ಪ ವ್ಯಕ್ತಪಡಿಸಿದ್ದಾರೆ.

19 ತಿಂಗಳ ಬಳಿಕ 1ರಿಂದ 5ನೇ ತರಗತಿಯ ಶಾಲೆಗಳನ್ನು ಸೋಮವಾರದಿಂದ ಆರಂಭಿಸಲಾಗುತ್ತಿದೆ. ಮಕ್ಕಳ ಆರೋಗ್ಯ ರಕ್ಷಣೆಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಆತಂಕ, ಭಯ ಬಿಟ್ಟು ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. 

- ಬಿ.ವಿ.ಮಲ್ಲೇಶಪ್ಪ, ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News