ಕಲಬುರಗಿ: ಮಗುವಿನೊಂದಿಗೆ ನದಿಗೆ ಹಾರಿ ಶಿಕ್ಷಕಿ ಆತ್ಮಹತ್ಯೆ

Update: 2021-10-24 17:02 GMT
ಶಾಂತಾಕುಮಾರಿ ಸಿದ್ದಣ್ಣ ಸಂಗಾವಿ

ಕಲಬುರಗಿ: ಶಹಾಬಾದ ತಾಲೂಕಿನ ಭಂಕೂರ ಗ್ರಾಮದ ತವರು ಮನೆಯಲ್ಲಿದ್ದ ಸರಕಾರಿ ಶಾಲೆಯ ಶಿಕ್ಷಕಿಯೊಬ್ಬರು ಮಗುವಿನೊಂದಿಗೆ ಕಾಗಿಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರದಂದು ಬೆಳಗಿನ ಜಾವ ನಡೆದಿದೆ. 

ಶಾಂತಾಕುಮಾರಿ ಸಿದ್ದಣ್ಣ ಸಂಗಾವಿ (32) ಎಂಬ ಮಹಿಳೆಯೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಕಡೆಹಳ್ಳಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ಶಾಂತಾಕುಮಾರಿ ರವಿವಾರ ಬೆಳಿಗ್ಗೆ 5 ಗಂಟೆಗೆ ಮಗುವಿನೊಂದಿಗೆ ದ್ವಿಚಕ್ರವಾಹನದಲ್ಲಿ ಬಂದು ಶಂಕರವಾಡಿ ಬಳಿಯ ಕಾಗಿಣಾ ನದಿಯ ಸೇತುವೆ ಮೇಲೆ ವಾಹನ ನಿಲ್ಲಿಸಿ, ತನ್ನ 9 ತಿಂಗಳ ಮಗು ಗಂಗಾಳೊಂದಿಗೆ ನದಿಗೆ ಹಾರಿದ್ದಾಳೆ. 

ಇನ್ನು ಆತ್ಮಹತ್ಯೆಗೂ ಮುನ್ನ 'ನನಗೆ, ನನ್ನ ಮಗುವಿಗೆ ಮೋಸ ಮಾಡಿದ್ದಾರೆ' ಎಂದು ಆರೋಪಿಸಿ ತನ್ನ ವಾಟ್ಸ್ಯಾಪ್ ಸ್ಟೇಟಸ್ ನಲ್ಲಿ ಶಾಂತಾಕುಮಾರಿ ಬರೆದುಕೊಂಡಿದ್ದರು ಎನ್ನಲಾಗಿದೆ.

ಮೂರು ವರ್ಷದ ಹಿಂದೆ ಭಂಕೂರನ ಶಾಂತಾ ಅವರನ್ನು ಚಿತ್ತಾಪರು ಎಪಿಎಂಸಿ ಮಾಜಿ ಅಧ್ಯಕ್ಷ ದಿ. ಶರಣಪ್ಪ ಸಂಗಾವಿ, ಜಿಪಂ.ಸದಸ್ಯೆ ಶಿವಲಿಂಗಮ್ಮಾ ಸಂಗಾವಿ ಅವರ ಪುತ್ರ ಸಿದ್ದು ಸಂಗಾವಿ ಅವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. 

ಶವ ಗೊಳಮೊಳಕೆ ಬಳಿಯ ರೈಲ್ವೆ ಸೇತುವೆ ಬಳಿ ಸಿಕ್ಕಿದೆ. ಮಗುವಿಗಾಗಿ ಹುಡುಕಾಟ ಮುಂದುವರಿದಿದೆ. ಈ ಕುರಿತು ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News