ಸುಳ್ಳುಬುರುಕ ‘ಬ್ರಿಗೇಡ್’ ಕೈಗೆ ಯುವ ನೀತಿಯ ಹೊಣೆ?

Update: 2021-10-25 06:29 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರಾಜ್ಯ ಈಗಲೂ ತನ್ನದೇ ಆದ ಯುವ ನೀತಿಯೊಂದನ್ನು ಹೊಂದಿಲ್ಲ ಎನ್ನುವುದು ವಿಷಾದಕರ. ಈ ಹಿಂದೆಯೂ ಹಲವು ಸರಕಾರಗಳು ಯುವ ನೀತಿಯ ರೂಪುರೇಷೆಗಳ ಬಗ್ಗೆ ಮಾತನಾಡುತ್ತಾ ಬಂದಿವೆಯಾದರೂ, ಅದಕ್ಕೆ ಅಧಿಕೃತ ರೂಪಕೊಡುವಲ್ಲಿ ವಿಫಲವಾಗಿವೆೆ. ಸ್ಪಷ್ಟವಾದ ಯುವ ನೀತಿಯಿಲ್ಲದ ಕಾರಣದಿಂದಲೇ, ಯುವಕರಿಗೆ ಪೂರಕವಾದ ಯೋಜನೆಗಳನ್ನು ರೂಪಿಸುವಲ್ಲಿ ಸರಕಾರ ವಿಫಲವಾಗುತ್ತಿದೆ. ಆದುದರಿಂದ, ಯುವ ನೀತಿಯೊಂದನ್ನು ರಚಿಸಿ, ಅದರ ಮೂಲಕ ಕಾರ್ಯಯೋಜನೆಗಳನ್ನು ರೂಪಿಸಬೇಕು ಎನ್ನುವುದು ಮುಕ್ತ ಅಭಿಪ್ರಾಯವಾಗಿದೆ. 2012ರಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ, ಯುವ ನೀತಿಯನ್ನು ಕಾಟಾಚಾರಕ್ಕಾಗಿ ಅಂಗೀಕರಿಸಲಾಗಿತ್ತು. ಈ ಹಿಂದೆ ಸಲ್ಲಿಸಿದ ವರದಿಯಲ್ಲಿ, ಯುವಕರಿಗಾಗಿ ಸ್ವಾಮಿ ವಿವೇಕಾನಂದ ಯುವ ಸಬಲೀಕರಣ ನಿಗಮ ಸ್ಥಾಪಿಸಲು ಶಿಫಾರಸು ಮಾಡಲಾಗಿತ್ತು. ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಎಂದು ಪುನರ್ ನಾಮಕರಣ ಮಾಡಲು ಸಮಿತಿ ಸಲಹೆ ನೀಡಿತ್ತು. 16ರಿಂದ 30 ವರ್ಷದವರನ್ನು ಯುವಕರೆಂದು ಗುರುತಿಸಬೇಕು, ವಯೋಮಾನಕ್ಕೆ ತಕ್ಕಂತೆ ಶಿಕ್ಷಣ, ಉದ್ಯೋಗಗಳನ್ನು ನೀಡಲು ಬೇಕಾದ ಮಾರ್ಗಸೂಚಿಗಳನ್ನು ರಚಿಸಬೇಕು ಎಂಬಿತ್ಯಾದಿ ಸಲಹೆಗಳೂ ವರದಿಯಲ್ಲಿದ್ದವು. ಯುವ ನೀತಿಯ ಬಗ್ಗೆ ಅಂದಿನ ಶೆಟ್ಟರ್ ಸರಕಾರ, ಸಾರ್ವಜನಿಕ ಅಭಿಪ್ರಾಯವನ್ನೂ ಸಂಗ್ರಹಿಸಿತ್ತು. ಇಷ್ಟೆಲ್ಲ ಆದ ಬಳಿಕ ಇದೀಗ ಮತ್ತೆ ಯುವ ನೀತಿಯ ಪುನರ್ ವಿಮರ್ಶೆಗಾಗಿ ಹೊಸ ತಂಡವೊಂದನ್ನು ನೂತನ ಸರಕಾರ ರಚಿಸಿದೆ. ವಿಪರ್ಯಾಸವೆಂದರೆ, ಈ ಸಮಿತಿಯೇ ಇದೀಗ ಯುವಕರಿಂದ ಪ್ರಶ್ನೆಗೊಳಗಾಗಿದೆೆ.

13 ಸದಸ್ಯರ ಈ ಸಮಿತಿಯಲ್ಲಿ, ಚಕ್ರವರ್ತಿ ಸೂಲಿ ಬೆಲೆ ಎಂಬ ರಾಜಕೀಯ ಪ್ರಚಾರಕ, ಮಾಜಿ ಮುಖ್ಯಮಂತ್ರಿ ಶೆಟ್ಟರ್ ಅವರ ಪುತ್ರ, ದಿವಂಗತ ಅನಂತಕುಮಾರ್ ಅವರ ಪುತ್ರಿ ಸೇರಿದಂತೆ ಹಲವು ಯುವ ರಾಜಕಾರಣಿಗಳು ಮತ್ತು ಕಾರ್ಯಕರ್ತರೇ ತುಂಬಿದ್ದಾರೆ. ಯುವಕರಿಗೆ ಯಾವ ರೀತಿಯಲ್ಲೂ ಮಾದರಿಯಾಗದ ವ್ಯಕ್ತಿಗಳನ್ನೇ ಒಳಗೊಂಡ ಈ ಸಮಿತಿಯಿಂದ, ನೀತಿಯ ಬದಲಿಗೆ ಯುವ ಅನೀತಿಯಷ್ಟೇ ರೂಪುಗೊಳ್ಳಲು ಸಾಧ್ಯ ಎನ್ನುವುದು ಸಾರ್ವಜನಿಕರ ಅಭಿಮಾತವಾಗಿದೆ. ಯುವ ಬ್ರಿಗೇಡ್ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ರಾಜಕೀಯ ಪ್ರಚಾರ ನಡೆಸುತ್ತಿದ್ದ ಚಕ್ರವರ್ತಿ ಸೂಲಿಬೆಲೆ ಎಂಬಾತ ಈಗಾಗಲೇ ತಮ್ಮ ಸುಳ್ಳು ಭಾಷಣಗಳಿಗಾಗಿ ಕುಖ್ಯಾತರಾದವರು. ತಮ್ಮ ಭಾಷಣಗಳಲ್ಲಿ ಈತ ಹರಡಿದ ಸುಳ್ಳು ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗಳಿಗೆ ಒಳಗಾಗಿವೆ. ಯಾವುದೇ ದೊಡ್ಡ ಶಿಕ್ಷಣ ಅರ್ಹತೆಯಿಲ್ಲದ, ಯಾವುದೇ ಕ್ಷೇತ್ರಗಳಲ್ಲಿ ವೃತ್ತಿಪರವಾಗಿ ಸಾಧನೆಗಳನ್ನೂ ಮಾಡದ, ವಿವೇಕಾನಂದರ ಹೆಸರನ್ನು ರಾಜಕೀಯಕ್ಕೆ ದುರ್ಬಳಕೆ ಮಾಡುತ್ತಾ ಬಂದ ಈತನನ್ನು ಯುವ ನೀತಿ ರೂಪಿಸುವ ಸಮಿತಿಗೆ ಹೇಗೆ ಸೇರಿಸಲಾಯಿತು ಎನ್ನುವ ಪ್ರಶ್ನೆ ಈಗ ಚರ್ಚೆಯಲ್ಲಿದೆ. ‘ಸುಳ್ಳು ಬುರುಕ’ನೆಂದೇ ಖ್ಯಾತನಾಗಿರುವ ಈತನಿಂದ ರೂಪುಗೊಳ್ಳುವ ಯುವ ನೀತಿ, ಯುವಕರ ಪಾಲಿಗೆ ಎಷ್ಟರಮಟ್ಟಿಗೆ ಮಾರ್ಗದರ್ಶನವನ್ನು ನೀಡಬಹುದು? ಇದೇ ರೀತಿಯಲ್ಲಿ, ರಾಜಕೀಯ ನಾಯಕರ ಪುತ್ರ, ಪುತ್ರಿ ಎನ್ನುವುದು ಯುವ ನೀತಿಯನ್ನು ರೂಪುಗೊಳಿಸುವ ಸಮಿತಿಗೆ ಅರ್ಹತೆಯೇ ಎಂದು ಜನರು ಕೇಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಜಕೀಯ ನಾಯಕರು ಮತ್ತು ಮಕ್ಕಳು, ಯುವಕರ ಪಾಲಿಗೆ ಮಾದರಿಯಾಗಿ ಉಳಿದಿಲ್ಲ. ದಾರಿ ತಪ್ಪಿದ ಯುವಕರಲ್ಲಿ ರಾಜಕಾರಣಿಗಳ ಮಕ್ಕಳು ಅಗ್ರ ಸ್ಥಾನದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಸಂಘಪರಿವಾರದೊಳಗಿರುವ ಯುವಕರೂ ನಮ್ಮ ಸಮಾಜಕ್ಕೆ ಯಾವ ರೀತಿಯಲ್ಲೂ ಮಾದರಿಯಾಗಿ ಉಳಿದಿಲ್ಲ. ಹೀಗಿರುವಾಗ, ಇವರನ್ನು ಸಮಿತಿಯೊಳಗೆ ಸದಸ್ಯರನ್ನಾಗಿ ಸೇರಿಸಿ ಎಂತಹ ಯುವ ಸಮಾಜವನ್ನು ಕಟ್ಟಲು ನಮ್ಮ ಸರಕಾರ ಮುಂದಾಗಿದೆ?

ಮುಖ್ಯವಾಗಿ ಯುವ ನೀತಿಯನ್ನು ರೂಪಿಸಬೇಕಾದ ಸಮಿತಿಯಲ್ಲ್ಲಿ ಯುವ ಸಾಧಕರು, ಹಿರಿಯ ಕ್ರೀಡಾಳುಗಳು, ಶಿಕ್ಷಣ ತಜ್ಞರು, ಸಾಮಾಜಿಕ ಅಧ್ಯಯನಕಾರರು ಒಳಗೊಳ್ಳಬೇಕು. ಉದ್ಯಮಿಗಳು, ವೈದ್ಯರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆಗಳನ್ನು ಮಾಡಿದ, ಯುವಕರಿಗೆ ಸ್ಫೂರ್ತಿಯಾಗಿರುವ ವ್ಯಕ್ತಿಗಳು ಇದರಲ್ಲಿದ್ದಾಗ ಮಾತ್ರ, ಅವರು ನೀಡುವ ವರದಿಗೆ ವಿಶ್ವಾಸಾರ್ಹತೆಯೊಂದು ಒದಗುತ್ತದೆ. ತಮ್ಮ ಬದುಕಿನ ಅನುಭವ, ಆಳವಾದ ತಿಳುವಳಿಕೆ, ಅಧ್ಯಯನ ಇತ್ಯಾದಿಗಳ ಆಧಾರದಲ್ಲಿ ಅವರು ಯುವ ನೀತಿ ಹೇಗಿರಬೇಕು, ಹೇಗಿರಬಾರದು ಎನ್ನುವುದನ್ನು ನಿರ್ಧರಿಸಬಲ್ಲರು. ಸದ್ಯದ ಸಂದರ್ಭದಲ್ಲಿ, ಕೊರೋನ, ಲಾಕ್‌ಡೌನ್ ಇತ್ಯಾದಿಗಳು ಯುವಕರ ಬದುಕನ್ನೇ ನುಚ್ಚುನೂರಾಗಿಸಿವೆ. ಆತ್ಮಹತ್ಯೆಗೈಯುತ್ತಿರುವ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ಒಂದೆಡೆ ಸರಿಯಾದ ಶಿಕ್ಷಣವೇ ಅವರಿಗೆ ದೊರಕುತ್ತಿಲ್ಲ. ಇರುವ ಉದ್ಯೋಗಗಳನ್ನು ಯುವಕರು ಕಳೆದುಕೊಳ್ಳುತ್ತಿದ್ದಾರೆ. ನಿರುದ್ಯೋಗಿ ಯುವಕರು ರಾಜಕೀಯ ಪಕ್ಷಗಳ ಬಲಿಪಶುಗಳಾಗುತ್ತಿದ್ದಾರೆ. ಸಂಘಪರಿವಾರದಂತಹ ಸಂಘಟನೆಗಳು ಯುವಕರಿಗೆ ‘ತ್ರಿಶೂಲ ದೀಕ್ಷೆ’ ನೀಡಿ ಸಮಾಜ ವಿರೋಧಿ ಕೆಲಸಗಳಿಗಾಗಿ ಬಳಸಿಕೊಳ್ಳುತ್ತಿವೆ. ಇಂದು ಯುವಕರಿಗೆ ಬೇಕಾಗಿರುವುದು ರಾಜಕಾರಣಿಗಳ ‘ಭಾಷಣ’ಗಳಲ್ಲ.

ಬದಲಿಗೆ ದೂರದೃಷ್ಟಿಯುಳ್ಳ ಯೋಜನೆಗಳು. ಸರಕಾರಿ ಉದ್ಯೋಗಗಳು ಇಲ್ಲವೇ ಇಲ್ಲ ಎನ್ನುವಂತಹ ಈ ದಿನಗಳಲ್ಲಿ ಯುವಕರನ್ನು ಸ್ವಯಂ ಉದ್ಯೋಗಗಳಿಗೆ ಹಚ್ಚುವಂತಹ, ಸಣ್ಣ ಉದ್ದಿಮೆಗಳನ್ನ್ನು ಸೃಷ್ಟಿಸಿ ಅವರನ್ನು ಮೇಲೆತ್ತಬಲ್ಲಂತಹ ಕಾರ್ಯಗಳು ನಡೆಯಬೇಕು. ಹಾಗೆಯೇ ಯುವಕರಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಾಡಬೇಕಾದ ಕಾರ್ಯಯೋಜನೆಗಳನ್ನು ಸರಕಾರಕ್ಕೆ ಮನವರಿಕೆ ಮಾಡಬೇಕಾಗಿದೆ. ಹಾಗೆಯೇ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭಾವಂತ ಯುವಕರನ್ನು ಗುರುತಿಸಿ ಅವರಿಗೆ ಅತ್ಯುತ್ತಮ ಮಾರ್ಗದರ್ಶನಗಳನ್ನು ನೀಡಲು ಬೇಕಾದಂತಹ ಸಂಸ್ಥೆಗಳ ರಚನೆಯಾಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಯುವಕರನ್ನು ‘ಸುಳ್ಳುಬುರುಕ ರಾಜಕಾರಣಿ’ಗಳು ದುರ್ಬಳಕೆ ಮಾಡಿಕೊಳ್ಳದಂತೆ ನೋಡಿಕೊಳ್ಳುವ ಕೆಲಸಗಳು ನಡೆಯಬೇಕಾಗಿದೆ. ಇವೆಲ್ಲವೂ ನಡೆಯಬೇಕಾದರೆ, ಯುವ ನೀತಿಯನ್ನು ರೂಪಿಸುವ ಸಮಿತಿ ರಾಜಕೀಯೇತರವಾಗಿರಬೇಕು. ಅದರಲ್ಲಿರುವ ಸದಸ್ಯರು ಯುವಕರಿಗೆ ಮೊದಲು ಆದರ್ಶನೀಯವಾಗಿರಬೇಕು. ಯುವಕರಿಗೆ ಯಾರು ಮಾದರಿಯಾಗಿರಬಾರದೋ ಅವರನ್ನೇ ಸಮಿತಿಯೊಳಗೆ ಸೇರಿಸಿಕೊಂಡರೆ, ಆ ಸಮಿತಿಯಿಂದ ರೂಪುಗೊಳ್ಳುವ ಯುವ ನೀತಿ, ನಮ್ಮ ಯುವಕರನ್ನು ಖಂಡಿತವಾಗಿ ಒಳಿತಿನೆಡೆಗೆ ಕೊಂಡೊಯ್ಯಲಾರದು. ಆದುದರಿಂದ, ತಕ್ಷಣ ಯುವನೀತಿಯನ್ನು ರೂಪಿಸಲು ನೇಮಕ ಮಾಡಿರುವ ಸಮಿತಿಯನ್ನು ಪುನರ್‌ರಚಿಸಬೇಕು. ಅರ್ಹ ತಜ್ಞರನ್ನು ಸಮಿತಿಯೊಳಗೆ ಸೇರಿಸಿ, ನವ ಕರ್ನಾಟಕಕ್ಕೆ ಹೊಸ ಸ್ವರೂಪವನ್ನು ನೀಡುವ ಯುವ ನೀತಿಯನ್ನು ರೂಪಿಸುವ ಕೆಲಸಕ್ಕೆ ಬೊಮ್ಮಾಯಿ ಸರಕಾರ ಮುಂದಡಿಯಿಡಬೇಕು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News