ರಿಕ್ಷಾ ಚಾಲಕನಿಗೆ 3 ಕೋಟಿ ರೂ. ಪಾವತಿಸುವಂತೆ ತೆರಿಗೆ ನೋಟಿಸ್!

Update: 2021-10-25 03:38 GMT
ಸಾಂದರ್ಭಿಕ ಚಿತ್ರ

ಮಥುರಾ, ಅ.25: ಮೂರು ಕೋಟಿ ರೂಪಾಯಿ ತೆರಿಗೆ ಪಾವತಿಗೆ ನೋಟಿಸ್ ನೀಡಿರುವ ಆದಾಯ ತೆರಿಗೆ ಇಲಾಖೆ ವಿರುದ್ಧ ರಿಕ್ಷಾ ವಾಲನೊಬ್ಬ ಪೊಲೀಸರ ಮೊರೆ ಹೋಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮಥುರಾ ಜಿಲ್ಲೆಯ ಪ್ರತಾಪ್ ಸಿಂಗ್ ಬಕಲ್ಪುರ ಅಮರ್ ಕಾಲನಿಯ ನಿವಾಸಿಯಾಗಿದ್ದು, ಆದಾಯ ತೆರಿಗೆ ಇಲಾಖೆ ವಿರುದ್ಧ ವಂಚನೆ ಆರೋಪ ಹೊರಿಸಿ ಹೈವೇ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಿಂಗ್ ಅವರ ದೂರಿನ ಸಂಬಂಧ ಯಾವುದೇ ಪ್ರಕರಣ ದಾಖಲಿಸಿಲ್ಲ. ಆದರೆ ಪ್ರಕರಣವನ್ನು ಪರಿಶೀಲಿಸಲಾಗುತ್ತಿದೆ ಎಂದು ಠಾಣಾಧಿಕಾರಿ ಅನೂಜ್ ಕುಮಾರ್ ಹೇಳಿದ್ದಾರೆ.

ಈ ನಡುವೆ ಸಿಂಗ್ ಈ ಘಟನಾವಳಿಗಳನ್ನು ವಿವರಿಸುವ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. "ಬ್ಯಾಂಕ್ ಆಗ್ರಹದ ಮೇರೆಗೆ ಮಾರ್ಚ್ 15ರಂದು ನಾನು ತೇಜ್‌ಪ್ರಕಾಶ್ ಉಪಾಧ್ಯಾಯ ಎಂಬುವವರಿಗೆ ಸೇರಿದ ಜನ ಸುವಿಧಾ ಕೇಂದ್ರದಲ್ಲಿ ಪಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ್ದೆ" ಎಂದು ಸಿಂಗ್ ವಿವರಿಸಿದ್ದಾರೆ. ಆ ಬಳಿಕ ಪಾನ್‌ಕಾರ್ಡ್‌ನ ಬಣ್ಣದ ಫೋಟೊಕಾಪಿ ಸಂಜಯ್ ಸಿಂಗ್ (9897762706) ಅವರಿಂದ ಬಂತು. ಸಿಂಗ್ ಅನಕ್ಷರಸ್ಥರಾಗಿದ್ದರಿಂದ ಮೂಲ ಪಾನ್‌ಕಾರ್ಡ್ ಮತ್ತು ಬಣ್ಣದ ಫೋಟೊಕಾಪಿ ನಡುವಿನ ವ್ಯತ್ಯಾಸ ತಿಳಿಯಲಿಲ್ಲ ಎಂದು ಅವರು ವಿಡಿಯೊ ತುಣುಕಿನಲ್ಲಿ ವಿವರಿಸಿದ್ದಾರೆ. ಪಾನ್‌ಕಾರ್ಡ್ ಪಡೆಯಲು ಹರಸಾಹಸ ಮಾಡಬೇಕಾಯಿತು ಎಂದು ಅವರು ವಿವರಿಸಿದ್ದಾರೆ.

ಅಕ್ಟೋಬರ್ 19ರಂದು ಆದಾಯ ತೆರಿಗೆ ಅಧಿಕಾರಿಗಳಿಂದ ಸಿಂಗ್‌ಗೆ ಕರೆ ಬಂದಿದ್ದು, 3,47,54,896 ರೂಪಾಯಿ ಪಾವತಿಸುವಂತೆ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಕೆಲವರು ಇವರ ಹೆಸರಿನಲ್ಲಿ ಜಿಎಸ್‌ಟಿ ನಂಬರ್ ಪಡೆದು 2018-19ರಲ್ಲಿ ನಡೆಸಿದ 43,44,36,201 ರೂಪಾಯಿ ವ್ಯವಹಾರಕ್ಕಾಗಿ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾಗಿ ಪ್ರತಾಪ್‌ಸಿಂಗ್ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News